Friday 5 August 2022

 Societal Interface

ಪ್ರಿಯ ಓದುಗರೆ,

        ಮಳೆಗಾಲದ ದಿನಗಳಲ್ಲಿ ನಗರದ ರಸ್ತೆಗಳೆಲ್ಲ ಹಳದಿ-ಕೆಂಪು ಮಿಶ್ರಿತ ಮಣ್ಣು ನೀರಿನಿಂದಾಗಿ ಸಮತಟ್ಟಾಗಿ, ನಗರ ಸಭೆಯವರು ರಸ್ತೆಗೆ ಬಣ್ಣದ ತೇಪೆ ಹಾಕಿದಂತೆ ಭಾಸವಾಗುವುದು! ರಸ್ತೆ ಇರಬೇಕಾಗಿದ್ದ ಸಮತಲವನ್ನ ನಿರ್ದೇಶಿಸುವ ಬಗ್ಗಡ (ಮಣ್ಣು ನೀರು) ಹೊಂಡದ ಆಳದ ಕುರುಹು ನೀಡದೆ ನಮ್ಮನ್ನ ಪೇಚಿಗೆ ಸಿಲುಕಿಸುವುದು ಪ್ರತಿಯೊಬ್ಬರ ಅನುಭವ. ಬಣ್ಣವಿಲ್ಲದ ಮಳೆನೀರು ಮಣ್ಣಿಗೆ ಬಿದ್ದು ಬಣ್ಣ ಪಡೆಯುವುದು ಸರ್ವೇಸಾಮಾನ್ಯ ಸಂಗತಿ. ಡಿ.ವಿ.ಜಿ ಯವರು ಹೇಳುವಂತೆ:                      

                                    ಕೊಳದ ಜಲ ನಿನ್ನ ಮನ; ಲೋಗರದರೊಳಗಿಳಿಯೆ

                                    ತಳದ ಕಸ ತೇಲುತ್ತ ಬಗ್ಗಡವದಹುದು

                                    ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ

                                    ತಿಳಿಯಹುದು ಶಾಂತಿಯಲಿ-ಮಂಕುತಿಮ್ಮ     829

            ಕಂಗೆಟ್ಟ ಮನದಂತೆ ಕದಡಿದ ನೀರೂ ತಾನಾಗೇ ತಿಳಿಯಾಗುವುದು ನದಿ, ಕೆರೆ, ತೊರೆಗಳಲ್ಲಿ ಕಂಡುಬಂದರೂ ಕಗ್ಗಕ್ಕೆ ಅಪವಾದವೆಂಬಂತೆ ಬಹಳಷ್ಟುಕಡೆ ನೀರು ಬಣ್ಣದ ಬಗ್ಗಡವಾಗೇ ಉಳಿಯುವುದೇಕೆ? ರಸಾಯನಶಾಸ್ತ್ರದ ದೃಷ್ಟಿಯನ್ನ ಇದರಮೇಲೆ ಬೀರಿದರೆ ಬಗ್ಗಡ ತಿಳಿಯಾಗದಿದ್ದರೂ ತಿಳಿಯಾಗದಿರುವುದಕ್ಕೆ ಕಾರಣ ಹಾಗು ತಿಳಿಮಾಡಲು ಬೇಕಾದ ತಿಳಿವಳಿಕೆಯ ಅರಿವಾಗುವುದು.

             ಮಳೆ ನೀರಿನಲ್ಲಿ ಮಣ್ಣಿನಲ್ಲಿನ ಫೆರಿಕ್ ಆಕ್ಸೈಡ್ (Fe2O3) ಭಾಗಶಃ ಕರಗಿ ಫೆರಿಕ್ಹೈಡ್ರಾಕ್ಸೈಡ್ (Fe(OH)3) ಕಲಿಲ (Colloid) ವಾಗುವುದೇ ಬಣ್ಣಕ್ಕೆ ಕಾರಣ. ನಮ್ಮ ಉತ್ತರ-ಕನ್ನಡದ ಮಲೆನಾಡ ಹಳ್ಳಿಗಳಲ್ಲಿನ ನದಿ ತೊರೆಗಳ ನೀರು ಮಳೆ ಕಡಿಮೆ ಆದ ಕೆಲವೇ ದಿನಗಳಲ್ಲಿ ತಿಳಿಯಾಗುವುದು. ಆದರೆ ಬಯಲುಸೀಮೆಗಳಲ್ಲಿನ ಹಳ್ಳ, ನದಿಗಳ ನೀರು ತಿಳಿಯಾಗುವುದು ಕಡಿಮೆ. ಹೆಚ್ಚಿನ ಕಡೆ ಯಾವಾಗಲೂ ಮಣ್ಣನ್ನ ಕದಡಿ ಇಟ್ಟಂತೆ ಇರುವುದು!

            ನಮ್ಮಲ್ಲಿನ ನದಿ ಕೊಳ್ಳಗಳು ಸಾಂದ್ರವಾದ, ಸಸ್ಯ ವೈವಿಧ್ಯತೆಗಳನ್ನೊಳಗೊಂಡ ಕಾಡಿನ ಮೂಲಕ ಪ್ರಯಾಣಿಸುವವು. ಪ್ರಯಾಣದಲ್ಲಿ ತನ್ನೊಡಲಿಗೆ ಸೇರ್ಪಡೆಯಾದ ಸಸ್ಯ / ಪ್ರಾಣಿಮೂಲದ ಸಾವಯವ ಪದಾರ್ಥಗಳನ್ನ ಜೀರ್ಣಿಸಿ ಶುದ್ಧೀಕರಿಸುವ ಸವಾಲು ಇವುಗಳಿಗಿವೆ. (ಇಂಥಹ ಸ್ವಶುದ್ಧೀಕರಣ ಸಾಧ್ಯವಿಲ್ಲದಿದ್ದರೆ ಎಲ್ಲಾ ನದಿ, ಕೊಳ್ಳ, ಸಾಗರಗಳು ಮನುಷ್ಯನ ಹಸ್ತಕ್ಷೇಪವಿಲ್ಲದಿದ್ದರೂ ಕೊಳಚೆ ಗುಂಡಿಗಳಾಗುತ್ತಿದ್ದವು!). ಜೀರ್ಣಿಸುವ ಕ್ರಿಯೆಯಲ್ಲಿ ಉಂಟಾಗುವ ಹ್ಯೂಮಿಕ್ ಆಮ್ಲದಿಂದಾಗಿ Fe3+(OH)3 ಕಲಿಲವು ತಟಸ್ಥಗೊಂಡು Fe(OH)3 ಪ್ರಕ್ಷೇಪವಾಗುವುದು(Precipitate),  ಜೊತೆಗೆ ಇವು ಸಾವಯವ ಪದಾರ್ಥಗಳನ್ನ ಉತ್ಕರ್ಷಿಸಿ (ಆಕ್ಸಿಡೇಷನ್ ಮಾಡಿ) ಕರಗದ Fe2+ ಸಾವಯವ ಸಂಯುಕ್ತಗಳಾಗಿ ನೀರಿನ ತಳ ಸೇರುವುದು. ನೀರಿನ ಬಣ್ಣಕ್ಕೆ ಕಾರಣವಾದ Fe3+ ಕಲಿಲವು Fe2+ ಆಗಿ ತಳಸೇರಿದ್ದರಿಂದ ನೀರು ತಿಳಿಯಾಗುವುದು.

            ಆದರೆ ಬಯಲುಸೀಮೆ ಪ್ರದೇಶಗಳ ನೀರಿನಲ್ಲಿ Fe3+ ಕಲಿಲವನ್ನ ತಟಸ್ಥಗೊಳಿಸಲು ಬೇಕಾದ ಸಾವಯವ ಪದಾರ್ಥಗಳು / ಲವಣಗಳು ಅಥವಾ ಇಲೆಕ್ಟ್ರೋಲೈಟ್ಗಳು ಗಣನೀಯವಾಗಿ ಕಡಿಮೆ ಇರುವುದರಿಂದ ಕಲಿಲವು ಹಾಗೆಯೇ ಉಳಿದು ನೀರು ತಿಳಿಯಾಗುವುದೇ ಇಲ್ಲ. ತಿಳಿಯಾದರೂ ತುಂಬಾ ಸಮಯ ಬೇಕಾಗುವುದು. ಒಟ್ಟಿನಲ್ಲಿ ಮಲೆನಾಡು ಅಥವಾ ಬಯಲುಸೀಮೆ ಎಂಬ ಪ್ರಾದೇಶಿಕ ಕಾರಣಗಳಿಗಿಂತ ಕಲಿಲವನ್ನ ಆತಂಚನೀಯ (Coagulate) ಗೊಳಿಸಲು ಬೇಕಾದ ಸಂಗತಿಗಳು ನೀರು ತಿಳಿಯಾಗುವುದನ್ನ ಅಥವಾ ಬಗ್ಗಡವಾಗೇ ಉಳಿಯುವುದನ್ನ ನಿರ್ಧರಿಸುವುದು.

  ಗದ್ದೆಯ ಜೇಡಿಮಣ್ಣಿನ ಮೂಲಕ ಹರಿಯುವ ನೀರಿಗೆ ಕೊಂಚ ಬಿಳಿಯ ಬಣ್ಣ ಬರುವುದೇಕೆ? ಯೋಚಿಸಿರಿ.

  Fe3+ ಕಲಿಲವನ್ನ, ಅಂದರೆ ಮಣ್ಣು ನೀರನ್ನ ಮನೆಯಲ್ಲಿ ಅಥವಾ ಲ್ಯಾಬೋರೇಟರಿಯಲ್ಲಿ ತಿಳಿಯಾಗಿಸುವ ಬಗೆ ಹೇಗೆ?

 ನೆಚ್ಚಿನ ರಸಾಯನಾಸಕ್ತರೆ,

ಇತ್ತೀಚೆಗೆ ಬಿ. ಎಸ್ಸಿ. ತೃತೀಯ ಸೆಮಿಸ್ಟರಿನ ತರಗತಿಯೊಂದರಲ್ಲಿಹೋಗು ಎನ್ನಲಾರದೆ ಹೊಗೆ ಹಾಕಿದ ಹಾಗೆಎಂಬ ಗಾದೆಯನ್ನ ಸಾಂದರ್ಭಿಕವಾಗಿ ಪ್ರಯೋಗಿಸಿದೆ. ವಿದ್ಯಾರ್ಥಿಗಳೆಲ್ಲರೂ ಇದಕ್ಕೆ ನಕ್ಕರು. ಸ್ವಲ್ಪ ಅಗತ್ಯಕ್ಕಿಂತ ಹೆಚ್ಚಿಗೆಯೇ ನಕ್ಕಂತೆ ಭಾಸವಾದರೂ ಸುಮ್ಮನಾದೆ. ಆನಂತರ ತಿಳಿಯಿತು ವಿದ್ಯಾರ್ಥಿಗಳೆಲ್ಲ ಹೊಗೆ ಹಾಕುವುದರಲ್ಲಿ ( ಗಾದೆಯನ್ನ ಉಪಯೋಗಿಸುವುದರಲ್ಲಿ) ಹೆವ್ವೀ ನಿಸ್ಸೀಮರೆಂದು, ಇಂಥಹವರೆದುರಲ್ಲಿ ಲೈಟಾಗಿ ಹೊಗೆ ಹಾಕಿಸಿಕೊಂಡ ಹಾಗೆ ಅನುಭವವಾಯ್ತು. ನಿಧಾನವಾಗಿ ಹೊಗೆ ಹಾಕುವ ಗಾದೆಯನ್ನ ವಿಜ್ಞಾನದ ಕಂಗಳಿಂದ ನೋಡಿ ವಿಶ್ಲೇಷಿಸಿದಾಗ ಹೊಗೆ ಹಾಕಿ ಓಡಿಸುವುದಕ್ಕೆ ಕಾರಣ ಅನಾವರಣಗೊಂಡಿತು.

            ಹೊಗೆಎಂದರೇನೆಂದು ತಿಳಿಯಹೊರಟರೆ ಅದಕ್ಕೆ ತಗುಲಿ ಇನ್ನೊಂದು ಗಾದೆ ನೆನಪಾಗುವುದು- “ಬೆಂಕಿಯಿಲ್ಲದೆ ಹೊಗೆಯಾಡಲ್ಲಎಂದು. ಅಂದರೆ ಹೊಗೆಗೆ ಮೂಲ ಬೆಂಕಿ. ಇಂಧನದ ಅಧಕ್ಷ, ಅಪೂರ್ಣ ದಹನದಿಂದ ಹೊಗೆಯುಂಟಾಗುವುದು. ಸಂಪೂರ್ಣ ಉರಿಯದೇ ಹಾಗೆ ಬೆಂಕಿಯಿಂದ ಹೊರಬರುವ ಹೈಡ್ರೋಕಾರ್ಬನ್ ಕಣಗಳು, ಕಾರ್ಬನ್ ಕಣಗಳು, ಹಾಗು ಕಾರ್ಬನ್ಮೊನಾಕ್ಸೈಡ್ ಹೊಗೆಗೆ ಕಾರಣ. ಇದೂ ಒಂದು ಕಲಿಲವೇ (ಗಾಳಿಯಲ್ಲಿ ಘನ ಕಣಗಳ ಮಿಶ್ರಣ). ಕಣಗಳು ಕಣ್ಣಿಗೆ ತೋಕಿದಾಗ ಕಣ್ಣುರಿಯಾಗಿ ಅದನ್ನು ಹೊರಹಾಕಲು ಅಲ್ಲಿನ ಗ್ರಂಥಿಗಳು ಕಣ್ಣೀರನ್ನು ಸುರಿಸುವುದು. [ಅತಿ ಸೂಕ್ಷ್ಮ ಅಂಗವಾದ ಕಣ್ಣು ರಕ್ಷಣಾತ್ಮಕವಾಗಿ ಅಲ್ಲಿ ಬೀಳುವ ಯಾವುದೇ ಹೊರಗಿನ ಪದಾರ್ಥಗಳನ್ನ ಹೊರಹಾಕಲು ದ್ರವವನ್ನ ಸ್ರವಿಸುವುದು. ಪ್ರಕ್ರಿಯೆಯನ್ನು ನರಗಳಿಂದ ಮೆದುಳು ಉರಿಯಾಗಿ ಗ್ರಹಿಸುವುದು]. ಕಣ್ಣುರಿಯಿಂದಾಗಿ ನಿರ್ಬಾವುಕರಾಗಿ ಅಳುವಂತಾಗುವುದು! (ಸಿನಿಮಾಗಳಲ್ಲಿ ಅಳಲು ಗ್ಲಿಸರಿನ್ ಬಳಸಿದಂತೆ). ಹಾಗೆ ಹೊಗೆಯಿಂದಾಗಿ ಅಲ್ಲಿಂದ ಜಾಗ ಖಾಲಿ ಮಾಡಬೇಕಾಗುವುದು.

            ಜೊತೆಗೆ ಹೊಗೆಯಲ್ಲಿನಕಾರ್ಬನ್ಮೊನಾಕ್ಸೈಡ್ಒಂದು ವಿಷಾನಿಲ, ಇದು ರಕ್ತದಲ್ಲಿನ ಕಬ್ಬಿಣದ ಅಯಾನಿನೊಂದಿಗೆ ವರ್ತಿಸಿ ಅದರ ಗಾಳಿಯ ವಿನಿಮಯದ ಸಾಮಥ್ರ್ಯವನ್ನ ಸ್ಥಗಿತಗೊಳಿಸುವುದು. ಪದೇ ಪದೆ ದೀರ್ಘಕಾಲ ಹೊಗೆಯಲ್ಲಿನ ಅನಿಲದ ವಾತಾವರಣದಲ್ಲಿರುವುದರಿಂದ ರಕ್ತ ಸಂಬಂಧಿ ಖಾಯಿಲೆಗೊಳಗಾಗುವುದು ನಿಶ್ಚಿತ. ಆದ್ದರಿಂದ ಹೊಗೆಹಾಕಿದ ಕೂಡಲೆ ಕಾಲಿಗೆ ಬುದ್ಧಿ ಹೇಳುವುದೇ ಜಾಣತನ. ಇದನ್ನೇ ಗಾದೆಯಾಗಿ ಸೂಕ್ತ ಸಂದರ್ಭದಲ್ಲಿ ಬಳಸುವರು. ಅದರಲ್ಲಿ ನಮ್ಮ ವಿದ್ಯಾರ್ಥಿಗಳು ನಿಸ್ಸೀಮರು. ಜೊತೆಗೆ ಲ್ಯಾಬೋರೇಟರಿಯಲ್ಲಿ ಪಕ್ಕಾ ಗಾದೆಯಂತೆ ಕಿತಾಪತಿಯಿಂದ ಹೊಗೆ ಹಾಕಿ ಎಲ್ಲರನ್ನೂ ಹೊರಗೋಡಿಸಿದ ಭೂಪರೂ ಇದ್ದಾರೆ!

            ಹೊಗೆಹಾಕುವುದು ಇಷ್ಟಕ್ಕೇ ಸೀಮಿತವಾಗಿಲ್ಲ, ಹಳ್ಳಿಗಳ ದನದ ಕೊಟ್ಟಿಗೆಗಳಲ್ಲಿ ಸೊಳ್ಳೆ, ನೊಣಗಳ ಬಾಧೆಯಿಂದ ಪಾರಾಗಲು ಅಡಿಕೆ ಸಿಪ್ಪೆಯ ಹೊಗೆ ಹಾಕುತ್ತಾರೆ. ನಗರಸಭೆಯವರು ಡೆಂಗ್ಯೂ ಮುಂತಾದ ಖಾಯಿಲೆಗಳಿಗೆ ಕಾರಣವಾದ ಸೊಳ್ಳೆಗಳನ್ನ / ಲಾರ್ವಾಗಳನ್ನ ಕೊಲ್ಲಲು ಆಗಾಗ ಹೊಗೆಹಾಕುವುದಿದೆ (ಜನ ಅವರಿಗೆ ಹೊಗೆಹಾಕಿದಾಗ!). ಇದಕ್ಕೆಫಾಗಿಂಗ್ಎನ್ನುತ್ತಾರೆ. ಇನ್ನು ಕಚೇರಿ, ಗೋದಾಮು ಮತ್ತು ಕೆಲವೊಮ್ಮೆ ಲ್ಯಾಬೋರೇಟರಿಗಳಲ್ಲಿ ಹಲ್ಲಿ, ಜಿರಲೆ ಮುಂತಾದ ಕೀಟಗಳನ್ನ ಕೊಲ್ಲಲು ಹೊಗೆಹಾಕುತ್ತಾರೆ ಇದಕ್ಕೆಫ್ಯುಮಿಗೇಷನ್ಎನ್ನುತ್ತಾರೆ. ಅಡಿಕೆ ಬೆಳೆಗಾರರಂತೂ ತಮ್ಮ ಉತ್ಪನ್ನಗಳಾದ ಚಾಲಿ, ಕೆಂಪಡಿಕೆಗಳನ್ನ ಉತ್ತಮ ದರದ ನಿರೀಕ್ಷೆಯಲ್ಲಿ ಅವುಗಳನ್ನ ಡೊಂಕು ಬೀಳದಂತೆ (ಹುಳಗಳಿಂದ, ಶಿಲೀಂದ್ರಗಳಿಂದ ಹಾಳಾಗದಂತೆ) ಕಾಯ್ದಿರಿಸಲು ಧೂವಾ ಹಾಕುತ್ತಾರೆ. ಅಂದರೆ ಗಂಧಕದ ಹೊಗೆಯನ್ನ ಅಡಿಕೆ ಚೀಲಗಳಿಗೆ ಹಾಕುತ್ತಾರೆ, ಇದು ಶಿಲೀಂದ್ರನಾಶಕವಾಗಿ ಕೆಲಸಮಾಡುತ್ತದೆ.

ಒಟ್ಟಿನಲ್ಲಿ ನನ್ನ ವಿದ್ಯಾರ್ಥಿಗಳು ಬರಿ ಬಾಯಿಮಾತಿನ ಹೊಗೆಕಾರರಾಗದೆ (“ನಗುನಗುವ ಕಣ್ಗಳಿಗೆ ಹೊಗೆಯನೂದಲು ಬೇಡ...”- ಎಂಬ ಡಿ.ವಿ.ಜಿ. ಯವರ ಹಿತನುಡಿಯನ್ನೂ ಮರೆಯದೆ) ಗಾದೆಮಾತುಗಳಲ್ಲಿನ ಹಾಗು ದೈನಂದಿನ ಬದುಕಿನ ವಿದ್ಯಮಾನಗಳನ್ನ ಸೂಕ್ಷ್ಮವಾಗಿ ಅವಲೋಕಿಸಿ ಅದರ ಹಿಂದಿರುವ ವೈಜ್ಞಾನಿಕ ಸತ್ಯವನ್ನ ಗುರುತಿಸುವವರಾಗಿ, ಅಂಧಕಾರದ ಹೊಗೆಯನ್ನೋಡಿಸುವ ವಿಜ್ಞಾನಿಗಳಾಗಲೆಂದು ನನ್ನ ಹಾರೈಕೆ.

 

[ಫ್ಯುಮಿಗೇಷನ್, ಫಾಗಿಂಗ್ ಗಳಲ್ಲಿ ಬಳಸುವ ರಾಸಾಯನಿಕಗಳಾವುವು ಮತ್ತು ಅವು ಹೇಗೆ ಕೆಲಸ ಮಾಡುತ್ತವೆ?]

 

                                                                                                                -ಪ್ರಧಾನ ಸಂಪಾದಕರು.

No comments:

Post a Comment

Environmental Pollution