Friday 5 August 2022

 ಆರನೇ ಅವತರಣಿಕೆಯ ಸಂಪಾದಕೀಯ

ಆತ್ಮೀಯರೇ,

           ಇತ್ತೀಚಿನ ವರ್ಷಗಳಲ್ಲೇ ಅತೀ ಚಿಕ್ಕ  (ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನೊಳಗೊಂಡ) ತರಗತಿಯಾದ ಬಾರಿಯ ಅಂತಿಮ ಬಿ.ಎಸ್ಸಿ. ಯವರು ನಮ್ಮCHEM-WHIZ ಪರಂಪರೆಯನ್ನ ಮುಂದುವರೆಸಿಯಾರೇ ಎಂಬ ಆತಂಕದಲ್ಲೇ ಅವರ ಮೊದಲ ಕ್ಲಾಸಿನಲ್ಲಿ ಅರಿಕೆ ಮಾಡಿಕೊಂಡಾಗ ಆಶ್ಚರ್ಯಕಾದಿತ್ತು. ನನ್ನ ನಿರೀಕ್ಷೆಗೂ ಮೀರಿದ ಉತ್ಸಾಹ ವಿದ್ಯಾರ್ಥಿಗಳಿಂದ ವ್ಯಕ್ತವಾಯ್ತು. ಅತಿ ಶೀರ್ಘವಾಗಿ ಒಂದಲ್ಲ ಎರಡುಟೀಮ್ಗಳು ತಯಾರಾದವು! ನಂತರದ ಕೆಲವು ಸ್ಥಾನಪಲ್ಲಟಗಳಿಂದ ಆರೇಳರಷ್ಟಿರುತ್ತಿದ್ದ ಸಂಪಾದಕ ಮಂಡಳಿಯ ಗಾತ್ರ ಹತ್ತಕ್ಕೆ ಹಿಗ್ಗಿಸುವುದು ಅನಿವಾರ್ಯವಾಯ್ತು.

            ಒಂದು ಯಶಸ್ವಿ ಕಾರ್ಯಕ್ರಮದ (ಕಳೆದ ಫೆಬ್ರವರಿ 28 ವಿಜ್ಞಾನ ಹಬ್ಬ’ ದ) ಪ್ರಭಾವ ಇನ್ನೂ ವಿದ್ಯಾರ್ಥಿಗಳಲ್ಲಿ ಮಾಸದೇ ಇರುವುದೊಂದು ಆಶ್ಚರ್ಯವೇ ಸರಿ. ಯುವಶಕ್ತಿಯಲ್ಲಿ ವಿಶ್ವಾಸವಿಟ್ಟು ಅವರ ಸಾಮಥ್ರ್ಯವನ್ನ ಗುರುತಿಸಿ ಸಂಪೂರ್ಣ ಜವಾಬ್ದಾರಿಯನ್ನ ನೀಡಿದರೆ ಅವರಿಂದ ಉತ್ತಮವಾದ ಕೆಲಸ ಹೊಮ್ಮುವುದು ನಿಶ್ಚಿತ. ಶಾಲಾ-ಕಾಲೇಜು ಕಲಿಕೆಯು ವಿದ್ಯಾರ್ಥಿಗಳ ಜ್ಞಾನದ ಎನ್ಟ್ರೋಪಿಯನ್ನ ಹೆಚ್ಚಿಸುವ ಉದ್ದೇಶವನ್ನೇ ಹೊಂದಿದ್ದರೂ ಪರೀಕ್ಷೆಗೆ ಅಣಿಯಾಗಿಸುವ ಭರದಲ್ಲಿ, ಸಿಲೇಬಸ್ ಮುಗಿಸುವ ತರಾತುರಿಯಲ್ಲಿ  ಅವರ ಸೃಜನಶೀಲತೆಯ ಎನ್ಟ್ರೋಪಿ ಕಡಿಮೆಯಾಗುವ ದಿಕ್ಕಿನಲ್ಲಿ ಸಾಗಿರುವುದು ವಿಷಾದನೀಯ ವಾಸ್ತವ.

            ಸದಾ ಹೊಸತನ್ನ ಬಯಸುವ ಹುಮ್ಮಸ್ಸಿನ ವಿದ್ಯಾರ್ಥಿಗಳಿಗೆಕೆಮ್-ವ್ಹಿಝ್ಎನ್ನುವುದು ಅವರ ತರಗತಿಯಲ್ಲಿನ ಕಲಿಕೆಯ ಆಯಾಸವನ್ನ ತಗ್ಗಿಸಿ, ಕಲಿಕೆಯ ಕುತೂಹಲವನ್ನ ಕೆಟಲೈಸ್ಮಾಡುವ, ಅವರ ಸೃಜನಶೀಲತೆಯ ಎನ್ಟ್ರೋಪಿಯನ್ನ ವೃದ್ಧಿಸುವ ವೇದಿಕೆಯಾಗಿರುವುದು ವಿದ್ಯಾರ್ಥಿಗಳಿಗೇ ವೇದ್ಯವಾದ ಸಂಗತಿ.

            ಬಾರಿಯಸಂದರ್ಶನ ಲೇಖನಕ್ಕಾಗಿ ನನ್ನ ಊರಿನವರಾದ ತ್ಯಾಗಲಿಯ ಕಬ್ಬಿನಗದ್ದೆ ಸುಬ್ರಾಯ ಹೆಗಡೆಯವರನ್ನ ಸಂದರ್ಶಿಸಿದ್ದು ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ಅಭಿಮಾನ ಮತ್ತು ಕುತೂಹಲವನ್ನ ಹೆಚ್ಚಿಸುವಲ್ಲಿ ಸಹಕಾರಿಯಾಯ್ತು. ಅವರ ಸಂದರ್ಶನಕ್ಕಿಂತ ಅವರ ಕೃಷಿ ಹಾಗು ದೈನಂದಿನ ಬದುಕಿನ ಪ್ರಯೋಗಗಳ ವೀಕ್ಷಣೆಯೇ ಬುದ್ಧಿಗೆ ಹೆಚ್ಚು ಆಹಾರವಾಯ್ತು. ಅವರ ಗೋಶಾಲೆ, ಮಿತವ್ಯಯಿ ಅಸ್ತ್ರವಲೆ, ಗೋಬರ್ ಗ್ಯಾಸ್ ಹಾಗು ಗೊಬ್ಬರ ತಯಾರಿಸುವ ವಿಧಾನಗಳು, ವೈವಿಧ್ಯಮಯ ಸಸ್ಯಗಳು, ನೀರಿಂಗಿಸುವ ಪ್ರಯೋಗಗಳು, ಬೆಟ್ಟ, ತೋಟ...........ಇವುಗಳ ವೀಕ್ಷಣೆಯ ಸಂದರ್ಭಲ್ಲಿ ಬಿರುಮಳೆ ಮತ್ತು ರಕ್ತ ಹೀರುವ ಉಂಬಳಗಳು ಕಡೇಪಕ್ಷ ನಮ್ಮ ಪೇಟೆ ಮೂಲದ ವಿದ್ಯಾರ್ಥಿಗಳ ಉತ್ಸಾಹವನ್ನ ತಗ್ಗಿಸುವಲ್ಲೂ ವಿಫಲವಾದವು. ‘ಉಂಬಳಎಂಬ ಹೆಸರು ಕೇಳಿದರೇ ಮಾರುದ್ದ ಜಿಗಿಯುವ ನೇತ್ರಾವತಿ ಮೇಡಂ ಕೂಡ ಆಸಕ್ತಿಯಿಂದ ವೀಕ್ಷಿಸಿದ್ದು ವಿಶೇಷ. ಅನಾರೋಗ್ಯದಲ್ಲೂ ಚಿದಂಬರ್ರವರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಮಯದ ಅಭಾವದಿಂದಾಗಿ, ಸುಬ್ರಾಯ ಹೆಗಡೆಯವರಲ್ಲಿ ಇನ್ನೂ ತಿಳಿಯಬಹುದಾದ ವಿಷಯಗಳ ಅಗಾಧತೆಯನ್ನ ಆಲೋಚಿಸುತ್ತ, ಚರ್ಚಿಸಿದ ವಿಷಯಗಳನ್ನ ಮೆಲುಕುತ್ತ ನಮ್ಮ ತಂಡ ಕತ್ತಲಾಗುವುದರೊಳಗೆ ಗೂಡು ಸೇರುವ ತವಕದಲ್ಲಿ ಶಿರಸಿಯ ಬಸ್ಸು ಹತ್ತಿತ್ತು.

            ಇತ್ತೀಚೆಗೆ ನಮ್ಮ ಮಹಾವಿದ್ಯಾಲಯದಲ್ಲಿ ಪ್ರತೀ ವರ್ಷದ ಸಂಪ್ರದಾಯದಂತೆ ವನಮಹೋತ್ಸವವನ್ನ ಆಚರಿಸಲಾಯ್ತು. ಹೆಚ್ಚಿನ ಹಳೇ ಹೊಂಡಗಳಲ್ಲೇ ಹೊಸಗಿಡಗಳನ್ನ ನೆಡುವ ಔಪಚಾರಿಕ ಕಾರ್ಯಕ್ರಮವಿದಾಗುತ್ತಿರುವುದು ಖೇದಕರ ಸಂಗತಿ. ಇಷ್ಟಾದರೂ ಕಾರ್ಯಕ್ರಮ ಕೆಲವು ಒಳ್ಳೆಯ ಬೆಳವಣಿಗೆಗಳಿಗೂ ಸಾಕ್ಷಿಯಾಯ್ತು. ವೇದಿಕೆ ಕಾರ್ಯಕ್ರಮದ ನಂತರ ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿಗಳನ್ನ ಗಿಡನೆಡಲು ಬರಲು ಹೇಳಿದಾಗ ಹೆಚ್ಚಿನವರು ಆಸಕ್ತಿಯಿಂದ ಬಂದರು. ಕೆಲವು ಹೆಣ್ಣುಮಕ್ಕಳಂತು ತುಂಬಾ ಪ್ರೀತಿಯಿಂದ ಯಾರಸಹಾಯವನ್ನೂ ಬೇಡದೆ ಕೆಲವು ಗಿಡಗಳನ್ನ ಪ್ರಯಾಸದಿಂದ ತಾವೇ ನೆಟ್ಟರು. ಬೆರಳೆಣಿಕೆಯ ಒಂದಿಷ್ಟು ಹುಡುಗರು ಮಾತ್ರ ಫೇಸ್ಬುಕ್ಗಾಗಿಯೇ ಗಿಡ ನೆಟ್ಟಿದ್ದು ಬಿಟ್ಟರೆ, ಉಳಿದವರು ಜೋರಾಗಿ ಬಂದ ಮಳೆಯಲ್ಲೇ ಆಸ್ಥೆಯಿಂದ ಗಿಡ ನೆಟ್ಟರು.

            ಅಲ್ಲಿ ತಂದ ಎಲ್ಲಾ ಗಿಡಗಳನ್ನ ಮಳೆಯಕಾರಣದಿಂದ ನೆಡಲಾಗದಿದ್ದರೂ ನನ್ನ ಕೆಲವು ವಿದ್ಯಾರ್ಥಿಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಯ್ತು. ಇದ್ದ ಎರಡೇ ಛತ್ರಿಗಳಲ್ಲಿ ಗೌತಮ, ಜಯರಾಜ, ಸಂಗಪ್ಪ, ಪಾಟೀಲ, ಹರುಷ ಹಾಗು ಗೌರೀಶ ರೊಂದಿಗೆ ನಾನೂ ಆಶ್ರಯಪಡೆದೆ. ಆಗ ಸಹಜವಾಗಿ ನಮ್ಮ ಗಮನ / ಚರ್ಚೆ ಗಿಡದ ಬೆಳವಣಿಗೆಯ ಕಡೆಗೆ ಹೊರಳಿತು. ಅಲ್ಲಿದ್ದವರೆಲ್ಲ ಕೃಷಿ ಮೂಲದಿಂದಲೇ ಬಂದವರಿದ್ದರು, ಆದರೆ ಪಾಟೀಲ ಮತ್ತು ಹರುಷ ಸ್ವತಃ ಕೃಷಿ ಕೆಲಸ ಮಾಡ್ತಾನೇ ಬಿ.ಎಸ್ಸಿ. ಮಾಡ್ತಿದ್ದಾರೆಂದು ತಿಳಿದು ಅವರ ಬಗ್ಗೆ ತುಂಬಾ ಹೆಮ್ಮೆ ಎನಿಸಿತು. ಹನ್ನೊಂದು ಎಕರೆ ಗದ್ದೆಯಲ್ಲಿ ಭತ್ತದ ಬೇಸಾಯ ಮಾಡುವ ಹರುಷನ ಬಗ್ಗೆ ತಿಳಿದು ಹರ್ಷವಾಯ್ತು. ಕೃಷಿ ಕೆಲಸಗಳೊಂದಿಗೆ ವಿದ್ಯಾಭ್ಯಾಸದಲ್ಲೂ ತೊಡಗಿದ ಇವರು ಮೆಚ್ಚುಗೆಯಾದರು.

            ಮಲೆನಾಡಿಗಿಂತ ಅರೆಮಲೆನಾಡು-ಬಯಲುಸೀಮೆಗಳ ಮಣ್ಣಲ್ಲಿ ಗಿಡದ ಬೆಳವಣಿಗೆ ಉತ್ತಮವಾಗಿರುತ್ತದೇಕೆಂಬ ನನ್ನ ಪ್ರಶ್ನೆಗೆ ಜಯರಾಜ ವೈಜ್ಞಾನಿಕವಾಗಿ ಉತ್ತರ ಹೇಳಲು ಹೆಣಗಿದ. ಆತನ ಪ್ರಯತ್ನದಿಂದ ಮುಂದೆ ಸರಣಿ ಪ್ರಶ್ನೆಗಳೇ ಎದುರಾದವು, ಅವುಗಳ ಉತ್ತರಕ್ಕಾಗಿ ಆಸಕ್ತಿಯಿಂದ ನನ್ನ ಮಾತುಗಳನ್ನಾಲಿಸಿದರು:                         

ಮಲೆನಾಡಿನ ಗುಡ್ಡಗಾಡಿನಲ್ಲಿ ಮಳೆ ಜಾಸ್ತಿ ಹಾಗೆ ಸಸ್ಯ ಪ್ರಭೇದ, ಸಸ್ಯ ಸಾಂದ್ರತೆಯೂ ಹೆಚ್ಚು. ಆದ್ದರಿಂದ ನೀರಿನಿಂದ ಕೊಳೆತ ಸಸ್ಯ ಪದಾರ್ಥಗಳು ಕೊನೆಗೆ ಹ್ಯೂಮಸ್ ಅಥವಾ ಆಮ್ಲೀಯ ಹ್ಯೂಮಿಕ್ಆಸಿಡ್ಗಳಾಗುವವು. ಕಾರಣದಿಂದ ಮಣ್ಣಿನಲ್ಲಿ ಆಮ್ಲೀಯತೆ ಹೆಚ್ಚುವುದು. ಇಂತಹ ಮಣ್ಣಿನಲ್ಲಿ ಸಸ್ಯಕ್ಕೆ ಬೇಕಾದ ಬಹಳಷ್ಟು ಪೋಷಕಾಂಶಗಳ ಲಭ್ಯತೆ ತಗ್ಗುವುದು. ಜೊತೆಗೆ ಇದು ಕೆಲವು ಕೀಟ ಮತ್ತು ಶಿಲೀಂದ್ರಗಳ ಬೆಳವಣಿಗೆಗೆ ಸಹಕಾರಿಯಾಗಿ ಸಸ್ಯದ ಬೆಳವಣಿಗೆಗೆ (ರೋಗಗಳಿಂದಾಗಿ) ಅಡ್ಡಿಯಾಗುವುದು. ಆದರೆ ಕಡಿಮೆ ಮಳೆಯಾಗುವ ಅರೆಮಲೆನಾಡು ಹಾಗು ಬಯಲುಸೀಮೆಗಳಲ್ಲಿ ಮಳೆ ಕಡಿಮೆ ಇರುವುದರಿಂದ ಹಾಗು ಸೂರ್ಯನ ಬೆಳಕು ಹೆಚ್ಚಾಗಿ ಭೂಮಿಗೆ ಬೀಳುವುದರಿಂದ ಮಣ್ಣು ನಿಧಾನವಾಗಿ ಸುಟ್ಟಂತಾಗಿ ಅದರಲ್ಲಿನ ಹೆಚ್ಚಿನ ಮೆಟಲ್ಗಳು ಮೆಟಲಾಕ್ಸೈಡ್ಗಳಾಗುವವು, ಇವು ಪ್ರತ್ಯಾಮ್ಲೀಯವಾಗಿರುವುದರಿಂದ ಮಳೆಯಿಂದಾಗಿ ಮಣ್ಣು ಆಮ್ಲೀಯವಾಗುವುದನ್ನ ತಡೆದು ಬೆಳೆಗೆ ಬೇಕಾದ ಪೋಷಕಾಂಶಗಳು ಸೋರಿಕೆಯಾಗದೆ ಪೂರ್ತಿಯಾಗಿ ಸಿಗುವಂತಾಗುತ್ತದೆ. ಆದ್ದರಿಂದ ಇಂತಹ ಪ್ರದೇಶಗಳಲ್ಲಿ ಬೇಸಾಯದ ಖರ್ಚು ಕಡಿಮೆ ಹಾಗು ಸಸ್ಯದ ಬೆಳವಣಿಗೆಯೂ ಚೆನ್ನಾಗಿರುವುದು. ಆದರೆ ಅತೀ ಕಡಿಮೆ ಮಳೆಯಾಗುವ ಉತ್ತರ ಕರ್ನಾಟಕದ ಬಯಲುಸೀಮೆಗಳಲ್ಲಿ ಭೂಮಿಯು ಕ್ಷಾರವಾಗಿ ಗಿಡದ ಬೆಳವಣಿಗೆಗೆ ಅಸಹಕಾರಿಯಾಗಿದೆ. ಒಟ್ಟಿನಲ್ಲಿ ಸಸ್ಯದ ಉತ್ತಮ ಬೆಳವಣಿಗೆಗೆ ಮಣ್ಣಿನ ಪಿ. ಎಚ್. ತಟಸ್ಥ (ನ್ಯೂಟ್ರಲ್, 6.5 – 7.5) ಆಗಿರಬೇಕು.

            ಎಲ್ಲಾ ಚರ್ಚೆಯಿಂದ ವಿದ್ಯಾರ್ಥಿಗಳಿಗೆ ಪಠ್ಯದ ಹೊರತಾಗಿ ದೈನಂದಿನ ಬದುಕಿನಲ್ಲಿ ತಿಳಿಯತಕ್ಕ ವೈಜ್ಞಾನಿಕ ಸಂಗತಿಗಳನೇಕ ಎಂದು ಮನವರಿಕೆಯಾಯ್ತು. ಕ್ಲಾಸ್ ರೂಮ್ ಪಾಠದೊಂದಿಗೆ ಇಂತಹ ಚರ್ಚೆಗಳು, “ಕೆಮ್-ವ್ಹಿಝ್ಗಾಗಿ ಮಾಡುವ ಕೆಲಸಗಳು ವಿದ್ಯಾರ್ಥಿಗಳಿಗೆ ಅವಶ್ಯಕ ಬದಲಾವಣೆಯೊಂದಿಗೆ ಒಂದು ಹೊಸ ಚೈತನ್ಯವನ್ನು ನೀಡುವುದು ದಿಟ. ಬಾರಿಯಂತೂ ಹಿಂದಿನವುಗಳಂತೆ ಬರೀ ಗಣಕಯಂತ್ರದ ಮೇಲೆ ಅವಲಂಬಿತರಾಗದೆ ನಮ್ಮ ಸಂಪಾದಕ ಸದಸ್ಯರುಗಳೇ (ಸಬೀಹಾ ಹಾಗು ಸಂಗಡಿಗರು) ಬಹಳಷ್ಟನ್ನ ಕಲಾತ್ಮಕವಾಗಿ ಹಸ್ತಪ್ರತಿಯಾಗಿಸಿದ್ದು ವಿಶೇಷ. ವಿದ್ಯಾರ್ಥಿಗಳ ಇಂಥಹ ಪರಿಶ್ರಮದ ಫಲವೇ ಈಗ ನೀವು ಓದುತ್ತಿರುವರಸ-ಸಂಚಿಕೆ”. ತಾವು ಸಂಚಿಕೆಯ ರಸಾಸ್ವಾದಿಸಿ (ಓದಿ) ಇತರರಿಗೂ ಪಸರಿಸಿದರೆ ನಮ್ಮ ರಸ-ಬಳಗದ ಶ್ರಮ ಸಾರ್ಥಕ.

 

                                                                                        -ಪ್ರಧಾನ ಸಂಪಾದಕರು

                                                                                                 ಪ್ರೊ. ಗಣೇಶ ಎಸ್. ಹೆಗಡೆ, ಹಂಗಾರಖಂಡ

No comments:

Post a Comment

Environmental Pollution