Friday, 5 August 2022

ಏಳನೇ ಅವತರಣಿಕೆಯ ಸಂಪಾದಕೀಯ

ಆತ್ಮೀಯರೇ,

            ತುಂಬಾ ದಿನಗಳ ಏಕತಾನತೆಯನ್ನ ದೂರೀಕರಿಸುವ ಪ್ರವಾಸದ ಅವಕಾಶವೊಂದು ಒದಗಿಬಂದಾಗ ಸಂತಸದಿಂದ ಅನುಭವಕ್ಕೆ ತೆರೆದುಕೊಳ್ಳಲು ತವಕಪಟ್ಟೆ. ಗೋಕಾಕದ ಕಾಲೇಜೊಂದರಲ್ಲಿ ನಡೆಯಲಿದ್ದರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಕರೆ ಬಂದಾಗ ಕೂಡಲೇ ಒಪ್ಪಿಗೆ ಪತ್ರವನ್ನ ಕಳುಹಿಸಿದ್ದೆ.

            ಒಂದೇ ಸಮನೆ ಹಠಮಾಡುತ್ತಿದ್ದ ಮಳೆ ಮಲೆನಾಡಿನ ಸೌಂದರ್ಯವನ್ನೂ ಮಸುಕಾಗಿಸುತ್ತಲಿತ್ತು! ಮತ್ತೆ ಸೌಂದರ್ಯಾನುಭೂತಿ ಮರಳಿಪಡೆಯಲು ಬಯಲುನಾಡಿಗಿನ ಪಯಣ ಅನಿವಾರ್ಯವೇನೋ ಎಂಬಂತಾಗಿತ್ತು. ದಿನದ ಪ್ರಯಾಣವೂ ಜಿಟಿ ಜಿಟಿ ಮಳೆಯಲ್ಲೇ ಪ್ರಾರಂಭವಾದ್ರೂ ಬಯಲುನಾಡಿನ ಪ್ರವೇಶವಾದಾಗ ಮಳೆ ಇಲ್ಲವಾಗಿ ಬರಿಯ ಮೋಡ ಮುಸುಕಿದ ವಾತಾವರಣ ಸ್ವಾಗತಿಸಿತು.   

            ಸದಾ ಗುಡ್ಡ ಬೆಟ್ಟಗಳ ಸನಿಹದಂಚಿನಲ್ಲೇ ಕೊನಗೊಳ್ಳುತ್ತಿದ್ದ ದೃಷ್ಟಿ, ದಿಟ್ಟಿಸಿದಷ್ಟೂ ವಿಸ್ತರಿಸಿದಂತೆ ಭಾಸವಾಗುವ ಅನೂಹ್ಯ ಕ್ಷಿತಿಜದ ಬೆರಗಿನಲ್ಲಿ ಲೀನವಾಯ್ತು. ಆಗಾಗ ದೂರದಲ್ಲಿ ಕಾಣುತ್ತಿದ್ದ ಒಂಟೀ ಗುಡ್ಡಗಳು ವಿಶಾಲ ಸಮುದ್ರದ ನಡುವೆ ಎದ್ದುನಿಂತ ನಡುಗಡ್ಡೆಗಳಂತೆ ಭಾಸವಾಗುತ್ತಿತ್ತು. ಸಮುದ್ರದಂತಹ ವಿಹಂಗಮ ಬಯಲೊಂದು ವಿಸಮಯವಾದರೆ, ಅಲ್ಲಲ್ಲಿ ಕಾಣುವ ಗುಡ್ಡಗಳೂ ಬೆರಗಾಗಿಸುತ್ತಿದ್ದವು- ಸಮಾಜದಲ್ಲಿ ವಿರಳವಾಗಿ ಗೋಚರಿಸುವ ಆದರ್ಶಗಳಂತೆ.....ಅಂಥಹ ವ್ಯಕ್ತಿಗಳಂತೆ.

            ಹೆಚ್ಚುತ್ತಿರುವ ಜನಸಂಖ್ಯೆಗನುಗುಣವಾಗಿ ವಿಸ್ತಾರಗೊಂಡು ಆಹಾರ ಬೆಳೆಗಳನ್ನ ಬೆಳೆದು ಜನರ ಪೋಷಣೆ ಮಾಡುವ ಸಾಮಥ್ರ್ಯವಿರುವುದು ಪ್ರಸ್ಥಭೂಮಿಗೇ. ಬಯಲೆಲ್ಲ ಗದ್ದೆಗಳಾಗಿ ಹಸಿರಿನಿಂದ ಆಚ್ಛಾದಿತವಾಗಿ ಕಂಗೊಳಿಸುತ್ತಿತು. ಅಲ್ಲಲ್ಲಿ ಶ್ವೇತ ವಸ್ತ್ರ / ಪೇಟಧಾರಿಯಾಗಿ ಕೃಷಿಯಲ್ಲಿ ಮಗ್ನನಾದ ರೈತ ಹಚ್ಚ ಹಸಿರಿನ ಹಿನ್ನೆಲೆಯಲ್ಲಿ ಸಹಜ ಸೌಂದರ್ಯದಲ್ಲಿ ಬೆಳಗುತ್ತಿದ್ದಂತೆ ಭಾಸವಾಯ್ತು. ಶುದ್ಧ ನೀರು, ಹಚ್ಚ ಹಸಿರು, ಸ್ವಚ್ಚ ಗಾಳಿ, ಶ್ವೇತ ವಸ್ತ್ರ ಇವು ಬಯಲುನಾಡಿನ ದಾರಿ ಪಕ್ಕದ ಹಳ್ಳಿಗಳಲ್ಲಿ ಗೋಚರಿಸುತ್ತಿದ್ದ ಆಪ್ಯಾಯಮಾನವಾದ ದೃಶ್ಯ.

            ಹಲವು ಹಳ್ಳಿಗಳು ಮರೆಯಾಗುತ್ತಿದ್ದಂತೆ ಎದುರಾಗಿದ್ದು ಇನ್ನೊಂದು ಅಚ್ಚರಿಯ ಪಟ್ಟಣದ ಲೋಕ. ಬಿಳಿಯ ಪೇಟದ / ವಸ್ತ್ರದ ಬೆರಳೆಣಿಕೆಯ ಹಿರಿತಲೆಗಳನ್ನು ಬಿಟ್ಟರೆ ಉಳಿದಂತೆ ಧೂಳಿನಿಂದ ಕೆದರಿದ ಕೂದಲಿನ ಕೆಂಪುಗಣ್ಣಿನ ರಂಗು ರಂಗಿನ ಧೂಳಿನಿಂದ ಮಸುಕಾದ ಪ್ಯಾಂಟು ಶರ್ಟು ಧರಿಸಿದ ವ್ಯವಹಾರಸ್ಥ ಯುವ / ನವ ಪೀಳಿಗೆ! ಮಲೆನಾಡಿನ ಗುಡ್ಡಗಳ ನಡುವಿನ ಕಣಿವೆಗಳ ಸುಂದರ ಪರಿಸರದಲ್ಲಿ ಬೆಳೆದಅಡಿಕೆಬಯಲುಸೀಮಿಗರ ಬಾಯಲ್ಲಿ ಮೆರೆದು ಊರಿನ ಎಲ್ಲೆಂದರಲ್ಲಿ ಕೆಂಬಣ್ಣ ಬಳಿಯುವಲ್ಲಿ ನಿರತವಾಗಿದ್ದು ಸೋಜಿಗ!

            ಪಾರಂಪರಿಕವಾಗಿ, ಪ್ರಾದೇಶಿಕವಾಗಿ ಬಿಸಿಲುನಾಡಿಗೆ ಹೊಂದಿಕೊಂಡ ಜನರ ಶ್ವೇತವಸ್ತ್ರ, ವರ್ಣಮಯ ರೋಹಿತ (Colorful Spectrum)ವಾಗುತ್ತಿರುವುದು ಹೇಗೆ? ಅದರ ಔಚಿತ್ಯವೇನು? ಬಿಸಿಲಿನ ಧಗೆಯನ್ನು ಸಹಿಸಲು ಬೆಳಕನ್ನು ಅತಿ ಹೆಚ್ಚು ಪ್ರತಿಫಲಿಸುವ ಬಿಳಿವಸ್ತ್ರ ಧಾರಣೆ ಅಲ್ಲಿನ ಜನ ಪಾರಂಪರಿಕವಾಗಿ ಕಂಡುಕೊಂಡ ನೈಸರ್ಗಿಕ ವ್ಯವಸ್ಥೆ. ಆದರೆ ಆಧುನಿಕತೆಯ ವ್ಯಾಮೋಹ ಪ್ರಾದೇಶಿಕ ಅಳವಡಿಕೆಯನ್ನು ಮೀರಿ ದೇಹಾರೋಗ್ಯದ ಉಪಯುಕ್ತತೆಯನ್ನೂ ಉಪೇಕ್ಷಿಸಿ ಅನುಕರಣಾ ಚತುರರನ್ನಾಗಿಸುತ್ತಿರುವುದು ವಿಪರ್ಯಾಸ! ಶಾಲಾ ಕಾಲೇಜುಗಳ ಮಕ್ಕಳಶೂನ್ಯಾಯವಾದಿಗಳ ಕರಿಕೋಟಿನ ಸಮವಸ್ತ್ರ, ಇವು ಆಂಗ್ಲರ ಬರಿ ಅರ್ಥಹೀನ ಅನುಕರಣೆಯಲ್ಲವೇ? ಚಳಿ ಪ್ರದೇಶದವರು ಸಿಗುವ ಅಲ್ಪ ಉಷ್ಣತೆಯನ್ನ ಹಿಡಿದಿಡಲು ಕಪ್ಪುಕೋಟು, ಶೂ ಧರಿಸುವುದು ಅಲ್ಲಿನವರ ಪ್ರಾದೇಶಿಕ ಜಾಣ್ಮೆ. ಅದನ್ನ ಚಾಚೂ ತಪ್ಪದೆ, ಇಲ್ಲಿಯ ಹವಾಗುಣ / ವಾಯುಗುಣದ ವಿವೇಚನೆಯಿಲ್ಲದೆ ಅನುಕರಿಸುವ ದುಃಸ್ಥಿತಿ ನಮ್ಮದು!

            ಮಿತಿಮೀರಿದ ಜನಸಂಖ್ಯೆ, ನಗರ ಜೀವನದ ಆಕರ್ಷಣೆ/ಅನುಕೂಲತೆಗಳಿಂದ ನಗರದಲ್ಲಿ ಜನ ಸಾಂದ್ರತೆ ಹೆಚ್ಚಿ ಸಮರ್ಪಕ ನಿರ್ವಹಣೆಯಿಲ್ಲದೆ ಎಲ್ಲಾರೀತಿಯ ಮಾಲಿನ್ಯ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಗಾಗಿ ಹಾಗು ತಯಾರಿಕೆಯಲ್ಲಿನ ಮಾಲಿನ್ಯ ಕಡಿಮೆಮಾಡಲು ಲೋಹದ ಬದಲಿಗೆಪ್ಲಾಸ್ಟಿಕ್ಬಳಕೆಗೆ ಬಂತು. ಜೀವನದ ಪ್ರತಿ ಹಂತದಲ್ಲೂ ಬಳಕೆಗೊಂಡು ಆಪ್ಯಾಯಮಾನವಾಯ್ತು. ಆದರೆ ಬಳಸಿದ, ಹಾಳಾದ ಪ್ಲಾಸ್ಟಿಕ್ಗಳ ನಿರ್ವಹಣೆ, ಮರುಬಳಕೆ ಸಂಸ್ಕರಣೆ ಬಗೆಗೆ ತಲೆಕೆಡಿಸಿಕೊಳ್ಳದೇ ಯರ್ರಾಬಿರ್ರಿಯಾದ ಬಳಕೆಯಿಂದ ನಗರಗಳಂತೂ ಗಲೀಜಿನ ಆಗರವಾಗಿವೆ. ಬಯಲುಸೀಮೆಗಳ ನಗರಗಳ ದುಃಸ್ಥಿತಿಯಂತೂ ಹೇಳತೀರದು. ಶಿರಸಿಯಲ್ಲಿ ಕಸ ಸಂಗ್ರಹಣೆಯಾದರೂ ನಡೆದಿದೆ. ನಮ್ಮ ನಿರ್ಲಕ್ಷ್ಯದಿಂದ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರುತ್ತಿದೆ. ಹಳ್ಳಿಗಳಿಗೂ ಇದು ಗಣನೀಯವಾಗಿ ವಿಸ್ತರಿಸುತ್ತಿರುವುದು ವಿಷಾದದ ಸಂಗತಿ. ಕೃಷಿ ಭೂಮಿಯನ್ನೂ ಆವರಿಸಿ ವಿವಿಧ ರೀತಿಯ ಉಪದ್ರವ ನೀಡುತ್ತಿರುವುದು ತಿಳಿಯದ ಸಂಗತಿಯೇನಲ್ಲ. ಬಯಲುಸೀಮೆಗಳಲ್ಲಿ ಇನ್ನೂ ಕೆಲವು ಸಮಸ್ಯೆಗಳಿವೆ: ನೀರಿನ ಅಭಾವ, ಅಲ್ಲಿಯ ಜೇಡಿಮಿಶ್ರಿತ ಅಂಟುಮಣ್ಣು, ಸ್ವಲ್ಪ ಮಳೆಯಾದರೂ ಅಂಟಾಗಿ ಗಿಜಿರಾಗುವುದು, ಬೇಗ ಒಣಗಲಾರದು. ಜೊತೆಗೆ ಅದರಲ್ಲಿ ಬೀಳುವ ಪ್ಲಾಸ್ಟಿಕ್ ತ್ಯಾಜ್ಯಗಳು, ಅದರಲ್ಲೇ ಆಹಾರ ಹುಡುಕುವ ಹಂದಿಗಳು, ಇಡೀ ಪರಿಸರವನ್ನ ಅತ್ಯಂತ ವಿಷಮ ಸ್ಥಿತಿಗೆ ನೂಕುತ್ತಿರುವುದು ಬೇಸರದ ಸಂಗತಿ.

            ಔದ್ಯಮೀಕರಣವೂ ನಗರಗಳಲ್ಲಿ ಹೆಚ್ಚುತ್ತಿರುವುದರಿಂದ ಚರಂಡಿ ವ್ಯವಸ್ಥೆ ಮತ್ತು ನಿರ್ವಹಣೆ ಅಧೋಗತಿಗಿಳಿದಿದೆ. ಮಾಲಿನ್ಯ ನಿಯಂತ್ರಣ, ಪರಿಸರದ ಕುರಿತು ನಮ್ಮ ಧೋರಣೆಗಳು ಬದಲಾಗುವುದೆಂದು? ಕುರಿತು  ಗಂಭೀರ ಕ್ರಮಗಳನ್ನು ಕೈಗೊಳ್ಳದೆ ಭಾರತ ಪ್ರಕಾಶಿಸಲು ಸಾಧ್ಯವೇ? ಪ್ರತಿಯೊಬ್ಬ ನಾಗರಿಕ ಬಗ್ಗೆ ಎಚ್ಚೆತ್ತುಕೊಳ್ಳುವುದೆಂದು? ಪ್ರಶ್ನೆಗಳ ಸಂಖ್ಯೆ ಮತ್ತು ಗಂಭೀರತೆ ಹೆಚ್ಚುತ್ತಿದೆ ಬಿಟ್ಟರೆ ಉತ್ತರದ ಆಶಾಕಿರಣ ಪ್ರಗತಿಯ ಪ್ರಖರತೆಯಲ್ಲಿ ಕಾಣದಾಗಿದೆ. ಆದರೆ ಇದು ಬಹಳಕಾಲ ನಡೆಯುವುದಿಲ್ಲ ಎಂಬುದೂ ಎಲ್ಲರ ಒಳಮನಸ್ಸಿಗೂ ತಿಳಿದಿದೆ!

            ಪ್ಲಾಸ್ಟಿಕ್ ನಿರ್ವಹಣೆಯನ್ನ ಸಮರ್ಪಕವಾಗಿ ಮಾಡದೆ ಪ್ಲಾಸ್ಟಿಕ್ ಮುಕ್ತ ನಗರವೆಂದು ಘೋಷಿಸುವುದು ಹಾಸ್ಯಾಸ್ಪದ ಸಂಗತಿ. ಈಗಾಗಲೇ ಲಭ್ಯವಿರುವ ತಂತ್ರಜ್ಞಾನವನ್ನು ಬಳಸದೇ ಕೂತಿರುವುದು ಏಕೆ? ಪ್ಲಾಸ್ಟಿಕ್ನ್ನು ಸಣ್ಣದಾಗಿ ಕತ್ತರಿಸಿ ಅಥವಾ ಪುಡಿಮಾಡಿಟಾರ್ನೊಂದಿಗೆ ಮಿಶ್ರಣ ಮಾಡಿ ರಸ್ತೆಗೆ ಬಳಸಿದರೆ ರಸ್ತೆಯ ಬಾಳಿಕೆಯೂ ಹೆಚ್ಚುವುದೆಂಬ ಸಂಶೋಧನೆಯಿದೆ. ಪ್ಲಾಸ್ಟಿಕ್ ಹಾಗು ಸಾವಯವ ತ್ಯಾಜ್ಯಗಳನ್ನು ಅನಿಲ ಇಂಧನವನ್ನಾಗಿಸಿ ಅದರಿಂದ ವಿದ್ಯುತ್ ಉತ್ಪಾದಿಸಬಹುದೆಂದುಭಾರತೀಯ ವಿಜ್ಞಾನ ಮಂದಿರ’ದ ಡಾ. ಎಚ್. ಎಸ್. ಮುಕುಂದರವರ ಸಂಶೋಧನೆ. ಇವೆಲ್ಲ ಮೂಲೆಗುಂಪಾಗಿರುವದು ವಿಷಾದನೀಯ. ಇವುಗಳನ್ನ ಕಾರ್ಯರೂಪಕ್ಕೆ ತರುವಲ್ಲಿ ಕೆಲವು ತೊಡಕುಗಳಿವೆ, ಅವನ್ನು ನಿವಾರಿಸಲು ರಾಜಕೀಯ ಇಚ್ಚಾಶಕ್ತಿ, ಸಾರ್ವಜನಿಕರ ಸಹಕಾರ, ಅರಿವು, ಜವಾಬ್ದಾರಿ ಇವುಗಳಿಂದ ಮಾತ್ರ ಸಾಧ್ಯ.

            ವಿ. ಕೃ. ಗೋಕಾಕರ ಊರಿನಲ್ಲಿ (‘ಗೋಕಾಕ ಫಾಲ್ಸ್ಅಂತೂ ಗಲೀಜು ಗುಂಡಿಯಾಗಿದೆ) ಮೂಗುಮುಚ್ಚಿಕೊಂಡು, ಅನಿವಾರ್ಯವಾಗಿ ಕಣ್ಣು ಬಿಟ್ಟುಕೊಂಡು ಸಂಚರಿಸುವಾಗ ಎಲ್ಲಾ ಸಂಗತಿಗಳು ತೀವ್ರವಾಗಿ ಕಾಡಿದವು. ನಿಟ್ಟಿನಲ್ಲಿ ಶಿರಸಿಯು ಹುಬ್ಬಳ್ಳಿ, ಸವದತ್ತಿ, ಗೋಕಾಕಗಳಿಗಿಂತ ತುಂಬಾ ಹಿಂದೆಯೇನೂ ಇಲ್ಲ. ಪ್ರತೀ ಗೂಡಂಗಡಿ ಎದುರಿಗೆ ದೊಡ್ಡ ದೊಡ್ಡ ಪ್ಲಾಸ್ಟಿಕ್ ತಿಪ್ಪೆ ರಾಶಿಯೇ ಬೆಳೆದಿದೆ. ಮನೆ ಮನೆ ಕಸ ಸಂಗ್ರಹವಾಗುತ್ತಿದ್ದರೂ ಪ್ಲಾಸ್ಟಿಕ್ ಬೇರ್ಪಡಿಸುವಿಕೆ ನಡೆದಿಲ್ಲ. ಇನ್ನು ಸಂಗ್ರಹವೆಲ್ಲಾ ನಗರದ ಹೊರವಲಯದಲ್ಲೊಂದು ತಿಪ್ಪೆಗುಡ್ಡವನ್ನು ಬೆಳೆಸುತ್ತಿದೆಯಷ್ಟೆ, ನಗರದಲ್ಲಿ ಉಸಿರಾಡಬಹುದೆಂಬುದೇ ನಮ್ಮ ದೊಡ್ಡ ಸಾಧನೆ.

            ಕಳೆದ ಶೈಕ್ಷಣಿಕ ವರ್ಷದಲ್ಲಿ ಎನ್.ಎಸ್.ಎಸ್. ನಿಂದ ಪ್ರತಿ ಶನಿವಾರ ಕಾಲೇಜಿನಲ್ಲಿ ಸ್ವಚ್ಚತಾ ಕಾರ್ಯಕ್ರಮಕೈಗೊಂಡು ನಂತರ ಔಷಧಿ ವನದ ಕುಟೀರದಲ್ಲಿ ಸಭೆ ಸೇರಿ ಇಂಥಹ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ಚರ್ಚೆಗಳನ್ನ ಕೈಗೊಳ್ಳಲಾಗಿತ್ತು. ಪ್ರಾಥಮಿಕ ಹಂತದಲ್ಲಿ ಮಹಾವಿದ್ಯಾಲಯದ ಕೊಠಡಿಗಳಲ್ಲಿ ಕಸಸಂಗ್ರಹಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು. ಮುಂದೆ ಕ್ರಮಿಸಬೇಕಾದ ದಾರಿ ಅಗಾಧವಾಗಿದೆ.

            ಬದಲಾವಣೆ ಬಯಸಿ ಕೈಗೊಂಡ ಪ್ರಯಾಣ ಬದಲಾವಣೆಯೊಂದಿಗೆ  ಚಿಂತೆ / ಚಿಂತನೆಗೂ ದಾರಿ ಮಾಡಿತು. ಶಿರಸಿಗೆ(ಮಲೆನಾಡಿಗೆ) ಬಂದಾಗ ಸಂತಸದ ನಿಟ್ಟುಸಿರು ಬಿಟ್ಟರೂ ಆಳದಲ್ಲಿ ಒಂದು ನೋವು ಉಳಿದಿತ್ತು.

            ಪ್ರಸ್ತುತ ವಿಷಯವನ್ನ ಬರಹವಾಗಿಸುವ ಸಮಯದಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಮಂಗಳನ ಕಕ್ಷೆಗೆ ಕೃತಕ ಉಪಗ್ರಹವನ್ನು ಸೇರಿಸುವ ಮೂಲಕ (Mars Orbiter Mission) ಭಾರತೀಯರ ಹೆಮ್ಮೆಯನ್ನ ನೂರ್ಮಡಿ ಹೆಚ್ಚಿಸಿತು. ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಭಾಷಣ ಪ್ರತಿಯೊಬ್ಬ ಬಾರತೀಯನಲ್ಲಿ ಸುಪ್ತವಾಗಿದ್ದ ರಾಷ್ಟ್ರಪ್ರಜ್ಞೆಯನ್ನ ಉತ್ಸಾಹದ ಚಿಲುಮೆಯನ್ನಾಗಿಸಿತು. ವಿಜ್ಞಾನಿಗಳನ್ನು ಅಭಿನಂದಿಸುವ ಜೊತೆಗೇ ಪ್ರತಿಯೊಬ್ಬ ಭಾರತೀಯನೂ ಕೃಷಿಕನಾಗಿರಲಿ, ಕೂಲೀಕಾರನಾಗಿರಲಿ, ಶಿಕ್ಷಕನಾಗಿರಲಿ ಅಥವಾ ವಿದ್ಯಾರ್ಥಿಯಾಗಿರಲಿ ತಮ್ಮ ತಮ್ಮ ಕರ್ತವ್ಯದಲ್ಲಿ ನಿಷ್ಟರಾಗಿ ದುಡಿಯುವುದರ ಮೂಲಕ ರಾಷ್ಟ್ರನಿರ್ಮಾಣದಲ್ಲಿ ಕೈ ಜೋಡಿಸಬೇಕೆಂದು ಕರೆಕೊಟ್ಟರು. ನಮ್ಮ ಕೆಲಸಗಳನ್ನ ಸಮರ್ಪಕವಾಗಿ ನಿರ್ವಹಿಸಿದರೆ ಅದೇ ನಾವು ತೋರಿಸುವ ರಾಷ್ಟ್ರ ಭಕ್ತಿ ಎಂಬುದು ನಾವು ಪ್ರತಿಯೊಬ್ಬರೂ ಪಾಲಿಸಬೇಕಾದ ಧರ್ಮ.

            ಆತ್ಮೀಯರೆ, ಗಂಗಾ ನದಿಯ ಶುದ್ಧೀಕರಣಕ್ಕೆ ಪ್ರಧಾನಿಯವರು ಪಣತೊಟ್ಟಿದ್ದು ಶ್ಲಾಘನೀಯ. ಹಾಗೆ ನಾವು ನಮ್ಮೂರ ಕೆರೆ, ಹೊಳೆಗಳ ಸ್ವಾಸ್ತ್ಯಕ್ಕಾಗಿ ಬದ್ದರಾಗಬಹುದಲ್ಲವೇ? ಅಕ್ಟೋಬರ್ 2 ರಿಂದಸ್ವಚ್ಛಭಾರತ ಆಂದೋಲನಹಮ್ಮಿಕೊಂಡಿರುವುದು, ವಾರದಲ್ಲಿ ಎರಡು ಗಂಟೆಗಳನ್ನ ಸ್ವಚ್ಛತೆಗಾಗಿ ಮೀಸಲಿಡಿ ಎಂಬ ಕರೆ ದೇಶವ್ಯಾಪಿ ಸಂಚಲನ ಮೂಡಿಸಲಿ.

            ಸದಾ ಮಾಧ್ಯಮಗಳ ಮುಖ್ಯವಾಹಿನಿಯಲ್ಲಿ ವಿಜೃಂಭಿಸುವ ರಾಜಕಾರಣಿಗಳು ತಮ್ಮ ಆಢಳಿತ / ರಾಜಕಾರಣದ ಜೊತೆಗೆ ಒಂದೊಂದು ಮೌಲ್ಯ ಪ್ರತಿಪಾದಕರಾದರೆ ಎಷ್ಟೊಂದು ಬದಲಾವಣೆಗೆ ಪ್ರೇರಕ ಹಾಗು ಪೂರಕವಾಗುತ್ತಿತ್ತು. ವಿಷಾದ ತುಂಬಾ ವರ್ಷಗಳಿಂದ ಕಾಡುತ್ತಿತ್ತು. ಅಂತೂ ದೇಶದ ಉಚ್ಛ ಸ್ಥಾನದಲ್ಲಿರುವ ಪ್ರಧಾನಿಯವರು ಮೌಲ್ಯ ಪ್ರತಿಪಾದಕರಾಗಿದ್ದು ಹೊಸದೊಂದು ಆಶಾಕಿರಣ ಪಸರಿಸುವಂತೆ ಮಾಡಿದೆ. ಪ್ರತಿಯೊಬ್ಬರಿಗೂ ಸ್ವಚ್ಛತೆಯ ಅರಿವು ಮೂಡಿ ತನ್ಮೂಲಕ ಕಾರ್ಯಪ್ರವೃತ್ತರಾಗುವಂತಾಗಲಿ. ಆದರೆ ಜೀವಿಸುವಾಗ ಅನಿವಾರ್ಯವಾಗಿ ಉತ್ಪಾದನೆ ಆಗುವ ಕಸವನ್ನ ಸಮರ್ಪಕವಾಗಿ ಪರಿಸರಕ್ಕೆ ಪೂರಕವಾಗಿ ನಿರ್ವಹಿಸುವ ವಿಧಾನ ಕಂಡುಕೊಳ್ಳದೇ ಬರಿ ಕಸಬರಿಗೆ ಹಿಡಿದು ಸ್ವಚ್ಛತಾ ಹರಿಕಾರನಾಗುತ್ತೇನೆಂದರೆ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವುದು ಖಚಿತ.

            ಆದ್ದರಿಂದ ಮೂಲ ವಿಜ್ಞಾನ ಆಯ್ಕೆ ಮಾಡಿಕೊಂಡು ಅಭ್ಯಸಿಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಲ್ಲಿಕಸ ನಿರ್ವಹಣೆಕುರಿತು ಸೂಕ್ತ ವಿಚಾರ / ಸಂಶೋಧನೆ / ಆಲೋಚನೆ ಕೈಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬೇಕೆಂದು ಮೂಲಕ ಕೋರುತ್ತಿದ್ದೇನೆ. ‘ಕಸದಿಂದ ರಸಮಾಡಲಾಗದಿದ್ದರೂ...... ಕಸದ ಸುರಕ್ಷಿತ ವಿದಾಯಕ್ಕೆ ಪೂರಕವಾದ ಕಾರ್ಯಯೋಗ್ಯ ಸಂಶೋಧನೆಗಳಾಗಲಿ. ಇದರ ಜೊತೆಗೆ ಭವ್ಯ ಬಾರತದ ಕುರಿತು ತಮ್ಮ ಏನೆಲ್ಲಾ ಕನಸು, ನಿರೀಕ್ಷೆ, ಹಾರೈಕೆ, ಆಲೋಚನೆ, ವಿಚಾರಗಳಿದ್ದರೆ ಅದನ್ನ ಬರಹರೂಪದಲ್ಲಿ ನಮ್ಮ ವಿಭಾಗದಲ್ಲಿಟ್ಟಿರುವರಸ-ಕೋಶದಲ್ಲಿ (ತಮ್ಮ ಸ್ವವಿವರಗಳೊಂದಿಗೆ) ಹಾಕಿರಿ. ಸೂಕ್ತ ಹಾಗು ವಿಶಿಷ್ಟವಾದವುಗಳನ್ನಕೆಮ್-ವ್ಹಿಝ್ಹಾಗುಎಂ. ಆರ್. ಎನ್. ಸರಸ ಸಂವಹನ ಸಮಿತಿ ಜಂಟೀ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುವುದು.

            ಭಾರತಕ್ಕೆ ಸಧೃಡ, ಸಾತ್ವಿಕ, ಕಾರ್ಯಚೋದಕ, ನಿಸ್ಪೃಹ ನಾಯಕನ ತೀವ್ರ ಅವಶ್ಯವಿತ್ತು. ಅಂತಹ ನಿರೀಕ್ಷಿತ ಮುಂದಾಳತ್ವದ ಆಶಾಕಿರಣ ನಿಚ್ಚಳವಾಗುತ್ತಿದೆ. ಅವರ ಆಶಯಗಳನ್ನ ಗೌರವಿಸಿ, ಕಾರ್ಯಪ್ರವೃತ್ತರಾಗಿ ಕತೃವ್ಯನಿಷ್ಟರಾಗಿ ಬೆಂಬಲಿಸೋಣ ಎಂಬ ಮಾತಿನೊಂದಿಗೆ........... ನಮ್ಮ ರಸ-ಕೋಶ ನಿಮ್ಮ ಕನಸಿನ, ಚಿಂತನಾ ಸಾಗರ (ಬರಹಗಳಿಂದ)ದಿಂದ ಹಿಗ್ಗಲಿ ಹಾಗೂಕೆಮ್-ವ್ಹಿಝ್ ಕಿರು ಪ್ರಯತ್ನವನ್ನ ತಾವೆಲ್ಲಾ ಓದಿ, ಚರ್ಚಿಸಿ, ವಿಮರ್ಶಿಸಿ ಪಸರಿಸುವುದರ ಮೂಲಕ ವಿದ್ಯಾರ್ಥಿಗಳ ಸೃಜನಶೀಲತೆಯ ರಸಾಸ್ವಾದಿಸಿದರೆ ನಮ್ಮ ರಸ-ಬಳಗದ ಶ್ರಮ ಸಾರ್ಥಕ.

 

-ಶ್ರೀ ಗಣೇಶ ಎಸ್. ಹೆಗಡೆ, ಹಂಗಾರಖಂಡ

 ಪ್ರಧಾನ ಸಂಪಾದಕರು,

 25ನೇ ಸೆಪ್ಟೆಂಬರ್ 2014.

 

 

No comments:

Post a Comment

Environmental Pollution