Societal Interface
1. ಅಗ್ನಿಶಾಮಕಗಳಲ್ಲಿ ರಸಾಯನಶಾಸ್ತ್ರ : ದಹನ ಕ್ರಿಯೆಗೆ ಮೂರು ಅಂಶಗಳು ಅಗತ್ಯ; ಇಂಧನ, ಉಷ್ಣತೆ ಮತ್ತು ಗಾಳಿ. ಇವನ್ನ ದಹನ ತ್ರಿಕೋನವೆಂದೇ ಕರೆಯುತ್ತಾರೆ. ಅಗ್ನಿ ಆಕಸ್ಮಿಕಗಳಲ್ಲಿ ಈ ದಹನ ತ್ರಿಕೋನವನ್ನ ಭೇದಿಸುವ ಮೂಲಕ ಅಗ್ನಿಶಮನ ಮಾಡಬಹುದು. ಇಂಧನಕ್ಕೆ, ಗಾಳಿ ಮತ್ತು ಉಷ್ಣತೆಯ ಸಂಪರ್ಕ ಕಡಿತಗೊಳಿಸುವುದೇ ಅಗ್ನಿಶಾಮಕ ಉಪಕರಣಗಳ ಕೆಲಸ. ಅಗ್ನಿ ಆಕಸ್ಮಿಕದ ಆಕರ ಮತ್ತು ಇಂಧನದ ಬಗೆಯನ್ನಾದರಿಸಿ ವಿವಿಧ ವಸ್ತುಗಳನ್ನ ಅಗ್ನಿಶಾಮಕ ಉಪಕರಣಗಳಲ್ಲಿ ಬಳಸುತ್ತಾರೆ: ಅ) ನೀರಿನ ಬಳಕೆ ಬ) ನೊರೆಕಾರಕಗಳು (Froth) ಕ) ಇಂಗಾಲದ ಡೈ ಆಕ್ಸೈಡ್ ಅನಿಲದ ಬಳಕೆ.
ಇಂಗಾಲದ ಡೈ ಆಕ್ಸೈಡ್ ಅನಿಲವನ್ನ ಎರಡು ವಿಧವಾಗಿ ಬಳಸುತ್ತಾರೆ: 1. ನೇರವಾಗಿ ಈ ಅನಿಲ ತುಂಬಿದ ಸಿಲಿಂಡರನ್ನೇ ಬಳಸುವುದು. 2. ಅವಶ್ಯವಾಗಿ ಬಳಸಬೇಕಾದ ಸಂದರ್ಭದಲ್ಲಿ ರಾಸಾಯನಿಕಕ್ರಿಯೆ ನಡೆಸಿ ಈ ಅನಿಲವನ್ನ ಉತ್ಪಾದಿಸಿ ಬಳಸುವುದು :
CaCO3
+ H2SO4 (Dil) à CaSO4 + H2O + CO2
ನಿರ್ಜಲೀಕೃತ ಸುಣ್ಣದ ಪುಡಿಯನ್ನ (Anhydrous CaCO3)ಸಿಲಿಂಡರಿನ ತಳಬಾಗದಲ್ಲಿ ಮತ್ತು ದುರ್ಬಲ ಗಂಧಕಾಮ್ಲ ತುಂಬಿದ ಧಾರಕವನ್ನು ಸಿಲಿಂಡರಿನ ದ್ವಾರದ ಬಳಿ ಸಂಗ್ರಹಿಸಿಟ್ಟಿರುತ್ತಾರೆ. ಅವಶ್ಯವಿದ್ದಾಗ ಆಮ್ಲದ ಧಾರಕವನ್ನ ರಂದ್ರ ಮಾಡುವ ಮೂಲಕ (Punching) ಅದು ಸುಣ್ಣದ ಪುಡಿಯ ಸಂಪರ್ಕಕ್ಕೆ ಬಂದು ರಾಸಾಯನಿಕ ಕ್ರಿಯೆ ಏರ್ಪಟ್ಟು ಸಾಕಷ್ಟು ಅನಿಲ ಉತ್ಪಾದನೆಯಾಗಿ ಸಿಲಿಂಡರಿನಲ್ಲಿ ತುಂಬಿಕೊಳ್ಳುವಂತೆ ಮಾಡುತ್ತಾರೆ.
2. ಗಂಟಲುರಿಯಾದಾಗ ಉಪ್ಪುನೀರಿನಲ್ಲಿ ಬಾಯಿಮುಕ್ಕಳಿಸಬೇಕೆನ್ನುತ್ತಾರೆ: ಹವಾಮಾನದಲ್ಲಿ ಹೆಚ್ಚು ತೇವಾಂಶ, ಉಷ್ಣತೆಯಿದ್ದಾಗ ಸೂಕ್ಷ್ಮಜೀವಿಗಳ ಬೆಳವಣಿಗೆ ಅಧಿಕವಾಗುವುದು. ಇಂತಹ ಸೂಕ್ಷ್ಮಜೀವಿಗಳಲ್ಲಿ ಕೆಲವು ಮನುಷ್ಯನಿಗೆ ರೋಗಕಾರಕಗಳಾಗಿ ಬಾಧಿಸುವವು. ಜ್ವರಕಾರಕ ಸೂಕ್ಷ್ಮಜೀವಿಗಳು ಮೊದಲು ಗಂಟಲನ್ನು ಆಕ್ರಮಿಸುತ್ತವೆ. ಆಗ ಕಾಲಕಾಲಕ್ಕೆ ಉಪ್ಪುನೀರಿನಲ್ಲಿ ಬಾಯಿಮುಕ್ಕಳಿಸುವುದರಿಂದ ಅಥವಾ ಕಲ್ಲುಸಕ್ಕರೆ ತಿನ್ನುವುದರಿಂದ ಗಂಟಲುರಿಯನ್ನು ಹಾಗು ಮುಂದಾಗುವ ಅನಾರೋಗ್ಯವನ್ನ ತಡೆಯಬಹುದು!
ಕಲುಸಕ್ಕರೆ ಅಥವಾ ಉಪ್ಪಿನ ದ್ರಾವಣದಿಂದಾಗುವ ಆಸ್ಮೋಸಿಸ್(Osmosis)ನ ಕಾರಣದಿಂದ ಸೂಕ್ಷ್ಮಜೀವಿಗಳಲ್ಲಿ ನಿರ್ಜಲೀಕರಣವಾಗುವುದರಿಂದ(Dehydration) ಅವು ಸಾಯುವವು. ಆದ್ದರಿಂದ ಕೆಲವು ಆಹಾರ ಪದಾರ್ಥಗಳನ್ನ ದೀರ್ಘಕಾಲ ಹಾಳಾಗದಂತೆ ಕಾಯ್ದಿರಿಸಲು ಉಪ್ಪು / ಸಕ್ಕರೆಯ ದ್ರಾವಣದಲ್ಲಿಡುತ್ತಾರೆ. ಉದಾಹರಣೆಗೆ: ಉಪ್ಪಿನಕಾಯಿ, ಹಣ್ಣಿನ ಜಾಮ್‍ಗಳು. ಈ ತತ್ವದ ಬಳಕೆಯನ್ನು ಇನ್ನೂ ಅನೇಕ ಕಡೆ ಗುರುತಿಸಬಹುದು: ತುಂಬಾ ಹಿಂದೆ ಗಾಯ ಬೇಗ ಗುಣವಾಗಲು ಬೆಲ್ಲ ಹಚ್ಚುತ್ತಿದ್ದರಂತೆ!
-ಪ್ರಧಾನ ಸಂಪಾದಕರು
No comments:
Post a Comment