Friday 5 August 2022

 CHEM-WHIZ” ಐದನೇ ಅವತರಣಿಕೆಯ ಸಂಪಾದಕೀಯ

ಧಾರವಾಡದಲ್ಲಿ ಸಂಶೋಧನಾ ಕೆಲಸದಲ್ಲಿ ತೊಡಗಿದ್ದ ಒಂದು ದಿನ ರಾತ್ರಿ ನಮ್ಮ ರಸಾಯನಶಾಸ್ತ್ರ ವಿಭಾಗದಿಂದ ರೂಂ ಗೆ ಹಿಂದಿರುಗುವಾಗ ದಟ್ಟವಾದ ಮಂಜು ಕವಿದ ವಾತಾವರಣವಿತ್ತು. ದೂರದ ಯಾವದೇ ವಸ್ತು ಸ್ಪಷ್ಟವಾಗಿ ಗೋಚರವಾಗುತ್ತಿರಲಿಲ್ಲ, ಹತ್ತಿರ ಹೋದಾಗ ಮಾತ್ರ ವಸ್ತುವಿನ ಇರುವಿಕೆ ಸ್ಪಷ್ಟವಾಗುತ್ತಿತ್ತು. ಚಳಿಗಾಲದ ಸರ್ವೇಸಾಮನ್ಯವಾದ ವಿದ್ಯಮಾನ ಆಲೋಚನೆಗೆ ಹಚ್ಚಿತು. ದೂರದಲ್ಲಿ ಸಾಂದ್ರವಾಗಿದ್ದಂತೆ ಕಂಡಿದ್ದು ಹತ್ತಿರ ಹೋದಾಗ ತಿಳಿಯಾಗಿ, ಹಾಗೆ ದೂರ ಹೋದಾಗ ಮೊದಲಿದ್ದ ಜಾಗದಲ್ಲಿ ಅಷ್ಟೇ ದಟ್ಟವಾದ ಮಂಜು ಕವಿದಂತೆ ಕಾಣುವುದು ಆಶ್ಚರ್ಯಕರ ಮೋಡವೂ ಕೂಡ ಮಂಜಿನಂತೆ ಚಿಕ್ಕ ಚಿಕ್ಕ ನೀರಿನ ಕಣಗಳಿಂದ ಒಗ್ಗೂಡಿರುವಂತದ್ದು. ದೂರದ ಆಕಾಶದಲ್ಲಿ ಕಾಣುವ ಮೋಡವು ಹೆಚ್ಚಿನ ಘನ ವಸ್ತುಗಳಂತೆ ಅಪಾರದರ್ಶಕವಾಗಿ ಗೋಚರಿಸುತ್ತದೆ. ಸಂಸ್ಕøತದಲ್ಲಿ ಘನವೆಂದರೆ ಮೋಡವೆಂದೇ ಅರ್ಥ! ಆಕಾಶದಲ್ಲಿ ಸೂರ್ಯ, ಚಂದ್ರ ಅಥವಾ ಹಾರಾಡುತ್ತಿರುವ ವಿಮಾನ ಮೋಡದಲ್ಲಿ ಮರೆಯಾಗುವುದು ಇದೇ ಕಾರಣಕ್ಕೆ. ಸಂಗತಿಯನ್ನು ರೂಪಕವನ್ನಾಗಿಸಿಕೊಂಡು ಚಲನಚಿತ್ರಗಳಲ್ಲಿ ಹಿಂದಿನ ಘಟನೆಯನ್ನು ಚಿತ್ರಿಸುವಾಗ ಮೋಡದ ಮರೆಯಂತೆ ಬಿಂಬಿಸುವುದನ್ನು ಗಮನಿಸಬಹುದು. ಕೆಲವೊಮ್ಮೆ ಕೃತಕ ಮೋಡವನ್ನು ಸೃಷ್ಟಿಸುವರು: ಡ್ರೈ ಐಸ್ಗೆ ನೀರನ್ನು ಚಿಮುಕಿಸಿದಾಗ ಕೃತಕ ಮೋಡ ಸೃಷ್ಟಿಯಾಗುವುದು (Dry-Ice: ಅಂದರೆ ಶೈತ್ಯದಲ್ಲಿ ಘನೀಕರಿದ ಇಂಗಾಲದ ಡೈ ಆಕ್ಸೈಡ್). ಘನ ಸ್ಥಿತಿಯಲ್ಲಿದ್ದ ಇಂಗಾಲದ ಡೈ ಆಕ್ಸೈಡ್ ಆವಿಯಾಗಿ ನೀರಿನ ಹನಿಗಳೊಂದಿಗೆ ಮಿಶ್ರಣಗೊಂಡು ಕಲಿಲವಾಗಿ ಕೃತಕ ಮೋಡ ಸೃಷ್ಟಿಯಾಗುವುದು.

            ವಿಚಿತ್ರವೆಂದರೆ ದೂರದಲ್ಲಿದ್ದ ಮೋಡ ಅಪಾರದರ್ಶಕವಾಗಿ ತೆರೆಯಂತೆ ಗೋಚರಿಸಿದರೆ ಹತ್ತಿರ ಅಥವಾ ಅದರ ಒಳಗೇ ಪ್ರವೇಶಿಸಿದಾಗ ತೆರೆಯು ಮರೆಯಾಗುವುದು! ಜ್ಞಾತೃ ಪ್ರಧಾನವಾದ ವಿದ್ಯಮಾನಕ್ಕೆ ಕಾರಣವೆಂದರೆ ಕಣ್ಣಿನ Resolution power. ಎರಡು ವಸ್ತುಗಳ ನಡುವಿನ ನೈಜ ಅಂತರವನ್ನು ಅದರ ಅದರ ಸನಿಹ ಇದ್ದಾಗ ಕಣ್ಣು ಸರಿಯಾಗಿ ಗುರುತಿಸಬಲ್ಲದು. ಒಂದು ನಿರ್ದಿಷ್ಟ ಅಂತರದ ನಂತರದಲ್ಲಿ ವಸ್ತುಗಳು ಪರಸ್ಪರ ಹತ್ತಿರವಿದ್ದಂತೆ ಗೋಚರಿಸುವುದು. ಅಂದರೆ ವಸ್ತುಗಳಿಂದ ದೂರ ಸರಿದಾಗ ಅವುಗಳ ನಡುವಿನ ನೈಜ ಅಂತರವನ್ನು ಗುರುತಿಸಿವಲ್ಲಿ ಕಣ್ಣು ವಿಫಲವಾಗಿ ಅವು ಹತ್ತಿರ ಅಂದರೆ ಒತ್ತೊತ್ತಾಗಿದ್ದಂತೆ ಭಾಸವಾಗುವುದು. ಆದ್ದರಿಂದಲೇ ದೂರದಿಂದ ತೆರೆಯಂತೆ ಅಪಾರದರ್ಶಕವಾಗಿ ಕಾಣುವ ಮೋಡ / ಮಂಜು ಹತ್ತಿರ ಅಥವಾ ಒಳ ಪ್ರವೇಶಿಸಿದಂತೆ ತೆರೆದುಕೊಳ್ಳುವುದು (ಪಾರವಾಗುವುದು)...!

ಹಾಗೆ ನೋಡಿದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳೂ ಹೀಗೆಯೇ.... ಮೊದಲು ಪರಿಹಾರವೇ ಇಲ್ಲದ ಕಗ್ಗಂಟಿನಂತೆ ಕಂಗೆಡಿಸಿದರೂ ದಿಟ್ಚ ತನದಿಂದ ಎದುರಿಸಿ ಮುನ್ನಡೆದರೆ ಸಮಸ್ಯೆ ತಿಳಿಯಾಗಿ ಪರಿಹಾರ ವೇದ್ಯವಾಗುವುದು.

ಸೆಮಿಸ್ಟರಿನ ಪ್ರಾರಂಭದಿಂದಲೇ Chem-Whiz ನ್ನುಬೇಗ ತರುವ ಉದ್ದೇಶದಿಂದ ವಿದ್ಯಾರ್ಥಿಗಳಲ್ಲಿ ಹೊಸ ಸಂಪಾದಕ ಮಂಡಳಿಯ ರಚನೆ ಕುರಿತು ತಿಳಿಸಿದಾಗ ಹಿಂದಿನ ವಿದ್ಯಾರ್ಥಿಗಳು ಉತ್ಸಾಹದಿಂದ ಮುಂದುವರೆಯುವ ಇಚ್ಚೆಯನ್ನು ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಆಸಕ್ತಿಯಿಂದ ಸೇರ್ಪಡೆಗೊಂಡರು. ಆದ್ದರಿಂದ ಜೀವ ವಿಜ್ಞಾನ ಹಾಗೂ ಭೌತಶಾಸ್ತ್ರ ವಿಭಾಗಗಳಲ್ಲೂ ಇದನ್ನು ವಿಸ್ತರಿಸುವ ಆಲೋಚನೆ ಬಂದಿತು.

 ಶ್ರೀ ಶಿವಾನಂದ ಕಳವೆ ಯವರ ಸಲಹೆಯ ಮೇರೆಗೆ ಬಾರಿ ಸಾಲ್ಕಣಿ-ನೈಗಾರಿನ ಆಯುರ್ವೇದ ವೈದ್ಯರಾದ ಡಾ. ರಾಮಚಂದ್ರ ಹೆಗಡೆಯವರನ್ನು ಸಂದರ್ಶಿಸಲು ಸಾಲ್ಕಣಿಯಿಂದ ಅವರ ಮನೆಗೆ 4-5 ಕಿ.ಮೀ ನಡೆದು ಹೋಗಿ ಬಂದಿದ್ದರಿಂದ ಹಿಡಿದು ಅಲ್ಲಿನ ಸಂದರ್ಶನ, ಸಂಭಾಷಣೆ ಎಲ್ಲದರಲ್ಲಿ ಆಸಕ್ತಿ ಕುತೂಹಲ ಹಾಗು ಸಂತಸದಿಂದ ನಮ್ಮ ವಿದ್ಯಾರ್ಥಿ ಸಮೂಹ ಪಾಲ್ಗೊಂಡಿತ್ತು. ಸಮಾಜ ಹಾಗು ಪರಿಸರದ ಕೆಲವು ಸಮಸ್ಯೆಗಳ ಕುರಿತು ಗಂಭೀರ ಸಮಾಲೋಚನೆ ನಡೆದು ನಮ್ಮ ಸಂದರ್ಶನ ಪ್ರವಾಸ ಸಾರ್ಥಕತೆಯನ್ನು ಕಂಡಿತು.

ಇತ್ತೀಚೆಗೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ, ಅಲ್ಲಿನ ವಿದ್ಯಾರ್ಥಿಗಳೇ ಆಯೋಜಿಸಿದ್ದ ವೈವಿಧ್ಯಮಯ ಹಾಗೂ ವಿನೂತನವಾದ ಸ್ಪರ್ಧಾ ಕಾರ್ಯಕ್ರಮಕ್ಕೆ ನಮ್ಮ ವಿದ್ಯಾರ್ಥಿಗಳ ತಂಡ ಪ್ರೊ. ನೇತ್ರಾವತಿಯವರ ಮುಂದಾಳತ್ವದಲ್ಲಿ ಪಾಲ್ಗೊಂಡಿತ್ತು. ವಿಜ್ಞಾನ ಮಾದರಿ ಪ್ರದರ್ಶನದಲ್ಲಿ (ಅಕ್ಷಯ ಮತ್ತು ಸುಬ್ರಹ್ಮಣ್ಯ) ಪ್ರಥಮ ಸ್ಥಾನ ಗಳಿಸಿದ್ದಲ್ಲದೇ ಸ್ಪರ್ಧೆಗಳ ಎಲ್ಲಾ ವಿಭಾಗಗಳಲ್ಲೂ ನಮ್ಮ ತಂಡ ಸಕ್ರಿಯವಾಗಿ ಪಾಲ್ಗೊಂಡು ಕ್ರೀಡಾ ಮನೋಭಾವವನ್ನು ಮೆರೆಸಿತು. ಅಲ್ಲಿನ ವಿಶಿಷ್ಟಾನುಭವಗಳನ್ನು ವಿವೇಕ ಮತ್ತು ಹೇಮಂತರ (ಯುರೇಕಾ)  ಜಂಟೀ ಲೇಖನದಲ್ಲಿ ಮನಗಾಣಬಹುದು.

ವಿದ್ಯಾರ್ಥಿಗಳ ಸಂಘಟನಾ ಸಾಮಥ್ರ್ಯವನ್ನು ಕಣ್ಣಾರೆ ಕಂಡು ಮೆಚ್ಚಿದ್ದ ನಮ್ಮ ವಿದ್ಯಾರ್ಥಿಗಳ ಮನದಲ್ಲಿ ಒಂದು ಹುಮ್ಮಸ್ಸಿನ ಬೀಜ ಮೊಳಕೆಯೊಡೆದಿತ್ತು. ಫೆಬ್ರುವರಿ-28 ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸುವ ಯೋಚನೆ ಬಂದು, ವಿದ್ಯಾರ್ಥಿ ಬಳಗಕ್ಕೆ ತಿಳಿಸಿದಾಗ ಆಗಾಗಲೇ ಅವರಲ್ಲಿ ಹೊರಹೊಮ್ಮಲು ಕಾತರಿಸುತ್ತಿದ್ದ ಉತ್ಸಾಹದ ಚಿಲುಮೆಗೆ ದಾರಿ ಮಾಡಿಕೊಟ್ಟಂತಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮಹೇಶ, ಚೇತನಾ, ದೀಪಾ, ವಸಂತ, ಸುಬ್ಬು ಹಾಗೂ ನೇತ್ರಾವತಿ ಮೇಡಮ್ರವರ ಜೊತೆಗೆ ತರಗತಿಗಳಿಗೆ ತೆರಳಿ ನಮ್ಮ ಆಲೋಚನೆಯನ್ನು ಅಳುಕಿನಿಂದಲೇ ವ್ಯಕ್ತಪಡಿಸಿದಾಗ ನಮಗೇ ಆಶ್ಚರ್ಯವೆನಿಸುವ ರೀತಿಯ ಸ್ಪಂದನ ವ್ಯಕ್ತವಾಯಿತು. ವಿಜ್ಞಾನ ವಿಭಾಗದ ಎಲ್ಲ ಅತಿಥಿ ಉಪನ್ಯಾಸಕರನ್ನು ಸಂಪರ್ಕಿಸಿ ವಿವಿಧ ಸಮೀತಿಗಳನ್ನು ಮಾಡಿ ಜವಾಬ್ದಾರಿಗಳನ್ನು ಹಂಚಿದಾಗ ಅವರ ಆಸಕಿ, ಆಸ್ಥೆ ಹಾಗು ಸಂಘಟನಾ ಚತುರತೆ ನಿಜಕ್ಕೂ ಬೆರಗುಗೊಳಿಸಿತು. ವಿಜ್ಞಾನದ ಹಿರಿ ಕಿರಿಯ ಅಧ್ಯಾಪಕರುಗಳ ಆರ್ಥಿಕ ಸಹಕಾರದಿಂದಾಗಿ ಕಾರ್ಯಕ್ರಮವನ್ನು ಸ್ವಲ್ಪ ಅದ್ದೂರಿಯಾಗೇ ಆಚರಿಸಲು ಅನುಕೂಲವಾಯಿತು. ಇವೆಲ್ಲದರ ನಡುವೆ ಕೆಲವು ಆಪಾದನೆಗಳನ್ನು ಎದುರಿಸಬೇಕಾದದ್ದು ವಿಷಾದನೀಯ. ವಿಜ್ಞಾನ ಹಬ್ಬದಲ್ಲಿ ಎಲ್ಲಾ ಅದ್ಯಾಪಕವರ್ಗ ಪಾಲ್ಗೊಳ್ಳಬೇಕೆಂಬ ಆಸೆ ವಿದ್ಯಾರ್ಥಿಗಳದ್ದಾಗಿತ್ತು. ಜೊತೆಗೆ ವಿದ್ಯಾರ್ಥಿಗಳನ್ನೆಲ್ಲಾ ಸೆಳೆಯಲು ಕರೆಯೋಲೆಯನ್ನು ಸೃಜನಶೀಲವಾಗಿ, ಆಕರ್ಷಕವಾಗಿ ರಚಿಸಿ ಪ್ರಸ್ತುತ ಪಡಿಸಿದಾಗ ಅದ್ಯಾಪಕ ವೃಂದದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಕಾಲೇಜನ್ನು ದೇವಾಲಯವೆಂದು, (ವಿಶ್ವವಿದ್ಯಾಲಯಗಳನ್ನು ಜ್ಞಾನದೇಗುಲಗಳಂದೇ ಪರಿಗಣಿಸಿರುವಾಗ..!!!)

ಅಧ್ಯಾಪಕರನ್ನು ಉಪಾಸಕರೆಂದು, ವಿದ್ಯಾರ್ಥಿಗಳನ್ನು ಭಕ್ತರೆಂದು, ಜಾತ್ಯಾತೀತವಾಗಿ ಉಚ್ಛತಮವಾಗಿ ಬಿಂಬಿಸಿದ್ದು ಕೆಲವರಿಗೆ ಅಪಥ್ಯವಾಗಿದ್ದು ಆಶ್ಚರ್ಯಕರ! ಸೃಜಶೀಲತೆ ಎಂಬುದು ಮನುಷ್ಯನಿಗೇ ಇರುವ ಒಂದು ವಿಶಿಷ್ಟ ಗುಣ, ಅದರಲ್ಲೂ ವಿದ್ಯಾರ್ಥಿಗಳಲ್ಲಿ ತುಡಿತ ಹೆಚ್ಚೆಂದೇ ಹೇಳಬಹುದು. ಅಧ್ಯಾಪಕರೂ ಕೂಡ ಪೋಲೀಸರಂತಾಗದೇ ಮಕ್ಕಳ ಸೃಜನಶೀಲ ಅಭಿವ್ಯಕ್ತಿಯನ್ನು ಪ್ರೀತಿ, ವಿಶ್ವಾಸದಿಂದ ಓರೆಗೆ ಹಚ್ಚಿ ಅಭಿವ್ಯಕ್ತ ಗೊಳಸಲು ಪ್ರೇರೆಪಿಸಿದರೆ ಅವರ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾದೀತು. ನಿಟ್ಟಿನಲ್ಲಿ ವಿಜ್ಞಾನ ಹಬ್ಬದಾಚರಣೆಯು ಅರ್ಥಪೂರ್ಣವಾಯಿತೆಂದು ನಮ್ಮ ಅಭಿಪ್ರಾಯ. ಕಾರ್ಯಕ್ರಮದ ಯಶಸ್ಸಿನ ಕುರಿತು ಅಭಿಪ್ರಾಯ ವ್ಯಕ್ತಪಡಿಸುತ್ತಾ ಅಂತಿಮ ವರ್ಷದ ವಿದ್ಯಾರ್ಥಿ ರಮಾನಂದ ವ್ಯಕ್ತಿಗತವಾದ ಪ್ರಶಂಸೆ ಮಾಡಿ  ಮುಜುಗರಪಡಿಸಿದ. ಆದರೆ ಕಾರ್ಯಕ್ರಮದ ಯಶಸ್ಸಿಗೆ ಮೂಲವಾದದ್ದು ಒಂದು ಸತ್ಪ್ರೇರಣೆ. ಹಾಗೇ ಅದು ಎಲ್ಲರಲ್ಲೂ ಸೂಕ್ತವಾಗಿ ಪಸರಿಸಿ ವ್ಯಕ್ತಗೊಂಡಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣ. ಆದ್ದರಿಂದ ಎಲ್ಲಾ ಪ್ರಶಂಸೆಗಳೂ ಎಲ್ಲರಲ್ಲುಂಟಾದ ನಿಗೂಢ ಸತ್ಪ್ರೇರಣೆಗೇ ಸಲ್ಲತಕ್ಕದ್ದು, ನಿವೇದಿಸತಕ್ಕದ್ದು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ಪಂದಿಸಿದ ಎಲ್ಲರನ್ನೂ ಆತ್ಮೀಯವಾಗಿ ಸ್ಮರಿಸುತ್ತ, ನಮ್ಮChem-Whizವಿದ್ಯಾರ್ಥಿ ಬಳಗದ ಪ್ರಯತ್ನವನ್ನು ಓದಿ, ಗುರುತಿಸಿ, ವಿಶ್ಲೇಷಿಸುವುದರ ಮೂಲಕ ಅವರ ಪರಿಶ್ರಮವನ್ನು ಆದರಿಸಿರೆಂದು ವಿನಂತಿ. 

                                                                                                            -ಪ್ರಧಾನ ಸಂಪಾದಕರು

                                                                                    (ಪ್ರೊ. ಗಣೇಶ ಎಸ್. ಹೆಗಡೆ, ಹಂಗಾರಖಂಡ)

                                                     

No comments:

Post a Comment

Environmental Pollution