Friday 5 August 2022

 ನಾಲ್ಕನೇಯ ಅವತರಣಿಕೆಯ ಸಂಪಾದಕೀಯ

 ಆತ್ಮೀಯರೇ,

         ಅಬ್ಬರದ ಅತ್ಯುತ್ಸಾಹದ ಅಲೆಯನ್ನೇರದೆ ನಿರುತ್ಸಾಹದ ಸೋಲಿಗೆ ಶರಣಾಗದೆ, ವಿಭಾಗದ ಮುಖ್ಯಸ್ಶರಾದ ಹಿರಿರಾದ ಶ್ರೀ ಹಿರೇಮಠ ಸರ್ ಅವರ ಎಚ್ಚರಿಕೆಯ ನುಡಿಯಂತೆ ಸೆಮಿಸ್ಟರ್ಗೆ ಒಂದರಂತೆ ಹೊರತರುತ್ತಿರುವ Chem-Whiz / ರಸ ಸಂಚಿಕೆಯ ನಾಲ್ಕನೇಯ ಅವತರಣಿಕೆಯನ್ನು ನೆಚ್ಚಿನ ಓದುಗರೆದುರಿಗೆ ಸಾದರಪಡಿಸಲು ಸಂತಸವೆನಿಸುತ್ತಿದೆ.

            ಹಿಂದಿನಂತೆ ಬಾರಿಯೂ ಸಂಪಾದಕ ಮಂಡಳಿಯ ಆಯ್ಕೆಯು ವಿದ್ಯಾರ್ಥಿಗಳ ಆಸಕ್ತಿ, ಉತ್ಸಾಹಗಳಿಂದಗಿ ಸುಲಭವಗಿ, ಶೀಘ್ರವಾಗಿ ನಡೆಯಿತು. ಸಮಿತಿಯ ಮೊದಲ ಕೆಲಸವಾಗಿ ಸಂದರ್ಶನ ಲೇಖನದ ಕುರಿತು ತಿಳಿಸಿದಾಗ ಕು. ಪೂಜಾ ಲೋಕೇಶ್  ಸೂಚನೆಯಂತೆ ಶ್ರೀ ಸತೀಶ ಹೆಗಡೆ ಕಿಲಾರ ಇವರನ್ನ ಸಂದರ್ಶಿಸುವುದೆಂದು ನಿರ್ಧರಿಸಿದೆವು. ಕು. ಸಂಪತ್ ಸೂಚಿಸಿದ ಶ್ರೀ ಪಿ. ಡಿ. ಸುದರ್ಶನ್ ಸಂದರ್ಶನವನ್ನು ನಂತರ ಪರಿಗಣಿಸೋಣವೆಂದು ತೀರ್ಮಾನಿಸಿದ್ದೆವು, ಆದರೆ ನಾಡಿನ ಶ್ರೇಷ್ಟ ಪಕ್ಷಿತಜ್ಞರಾಗಿದ್ದ ಅವರ ಅಕಾಲಿಕ ಮರಣ ನಮಗೆ ಸಂತಾಪವನ್ನುಂಟು ಮಾಡಿದೆ. ಹಾಗೂ ಅವರನ್ನು ಸಂದರ್ಶಿಸುವ ನಮ್ಮ ಯೋಜನೆ ಎಂದಿಗೂ ಕೈಗೂಡದಂತಾಗಿದ್ದು ವಿಪರ್ಯಾಸ.

            ನಮ್ಮ ವಿದ್ಯಾರ್ಥಿಗಳಿಗೆ ತಮ್ಮ ಸುತ್ತ-ಮುತ್ತಲಿನ ಸಾಮಾಜಿಕ ವ್ಯವಸ್ಥೆ, ವಿದ್ಯಮಾನಗಳ, ಇಲ್ಲಿನ ಕೃಷಿ, ಪರಿಸರ ಮತ್ತು ಇವೆಲ್ಲದರಲ್ಲಿ ಹುದುಗಿರುವ (ಅಡಗಿರುವ) ವೈಜ್ಞಾನಿಕ ಸತ್ಯದ ಅರಿವು, ಎಚ್ಚರಿಕೆಯಾಗಬೇಕೆಂಬ ಉದ್ದೇಶಗಳಿಂದ ಸಂದರ್ಶನ ಲೇಖನವೆಂಬ ಹೊಸ ಯೋಜನೆಯನ್ನು ಕಳೆದ ಸಂಚಿಕೆಯಿಂದ ಪರಿಚಯಿಸಲಾಯಿತು. ಖ್ಯಾತ ಪರಿಸರ ಬರಹಗಾರರಾದ ಶ್ರೀ ಶಿವಾನಂದ ಕಳವೆಯವರನ್ನ ಅತ್ಯುತ್ಸಾಹದಿಂದ ಭೇಟಿಮಾಡಿ ಬರೆದ ಅಂದಿನ ವಿದ್ಯಾರ್ಥಿಗಳಂತೆ ಈಗಿನವರೂ ಅತ್ಯುತ್ತಮ ಸಾವಯವ ಕೃಷಿಕರಾದ ಶ್ರೀ ಸತೀಶ ಹೆಗಡೆಯವರನ್ನು ಸಂದರ್ಶಿಸಿ ಸಂದರ್ಭವನ್ನು ತಮ್ಮ ಶೈಕ್ಷಣಿಕ ಜೀವನದ ಅವಿಸ್ಮರಣೀಯ ಘಟನೆಯಾಗಿಸಿಕಂಡಿದ್ದಾರೆ.

            ಇತ್ತೀಚೆಗೆ ಮಹಾವಿದ್ಯಾಲಯವು ಅಗ್ನಿಶಾಮಕದಳದವರಿಂದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಿತ್ತು. ಪಿ.ಯು.ಸಿ. ಮತ್ತು ಪದವಿ ವಿದ್ಯಾರ್ಥಿUಳೆÀಲ್ಲ ಸಾಕ್ಷಿಯಾಗಿದ್ದ ಕಾರ್ಯಕ್ರಮ ಒಂದು ವೈಜ್ಞಾನಿಕ ಪ್ರಾತ್ಯಕ್ಷಿಕೆಯಾಗಿರದೆ ಒಂದು ಮೋಜಿನ ಪ್ರದರ್ಶನವಾಗಿ ಮಾರ್ಪಟ್ಟಿತು!!! ಚಿಮ್ಮುತುದಿಯು ವಿವಿಧ ನಮೂನೆಗಳಲ್ಲಿ ಕಾರಂಜಿಯಂತೆ ನೀರನ್ನು ಎತ್ತರೆತ್ತರಕ್ಕೆ ಚಿಮ್ಮಿಸುವ ಪರಿ ನೆರೆದವರೆಲ್ಲರನ್ನ ಬೆರಗುಗೊಳಿಸಿ ಮೈಮರೆಯುವಂತೆ ಮಾಡಿತು. ನಮ್ಮ ಸ್ವಂತಿಕೆಯನ್ನು (ಅಹಂಕಾರವನ್ನು) ಕೆಲಕಾಲವಾದರೂ ಮರೆಯುವಂತೆ ಮಾಡಿ ಬೆರಗು ವಿಸ್ಮಯಗಳಲ್ಲಿ ಅಹಂಕಾರ ಲೀನವಾಗುವಂತೆ ಮಾಡುವ ಇಂತಹ ಪ್ರಸಂಗಗಳು ನಮಗೆ ಆನಂದವನ್ನುಂಟು ಮಾಡುವುದು, ಎಲ್ಲರಿಗೂ ಅನುಭವವೇಧ್ಯವಾದ ಸತ್ಯ. ಆದರೆ ಅದೇ ಸಂದರ್ಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ತಿಳಿಯಪಡಿಸಿದ ಸಿಲಿಂಡರ್ನಲ್ಲಿನ ಅನಿಲದ ಮೂಲಕ ಬೆಂಕಿ ನಂದಿಸುವುದರ ಹಿಂದಿನ ವಿಜಾÐನದ ಬಗ್ಗೆ ಬೆರಗು ಕುತೂಹಲ, ಆಸಕ್ತಿ ಮೂಡದಿರುವುದು ಒಂದು ವಿಪರ್ಯಾಸ ಸತ್ಯ. ಒಂದು ವಿಸ್ಮಯದ ಘಟನೆಯು ಹೇಗೆ ಮುದ ನೀಡಬಲ್ಲದೋ ಹಾಗೇ ಅಥವಾ ಅದಕ್ಕಿಂತ ಹೆಚ್ಚು ಆನಂದವನ್ನು ಬುದ್ಧ್ದಿಯ ಮೂಲಕ ವೈಜ್ಞಾನಿಕ ವಿಶ್ಲೇಷಣೆಯಿಂದ ಹೊಂದಲು ಸಾದ್ಯ. ಅದರ ವೈಜ್ಞಾನಿಕ ವಿವರಣೆಯನ್ನು Societal Interface ಅಂಕಣದಲ್ಲಿ ಬರೆಯಲಾಗಿದೆ.

                        ಆತ್ಮೀಯರೆ, ಇಂದಿನ ಮಳೆಗಾಲದ ಪರಿಸ್ಥಿತಿ ನೋಡಿದರೆ ಮೋಡ ಬಿತ್ತನೆ ಅವಶ್ಯಕತೆಯ ಅರಿವಾಗುತ್ತದೆ, ಹವಾಮಾನ ವೈಪರಿತ್ಯದ ಪರಿಣಾಮವನ್ನ ಬಯಲುಸೀಮೆಗಳಷ್ಟೇ ಅಲ್ಲದೆ ಮಲೆನಾಡಿನಲ್ಲೂ ಕಾಣುವಂತಾಗಿದೆ. ಮೋಡ ಬಿತ್ತನೆ ಮಾಡುವುದಕ್ಕೆ ಸಾಕಷ್ಟು ಮೋಡವಿರಲೇಬೇಕು ಜೊತೆಗೆ ಮೋಡದಲ್ಲಿ ಸಾಕಷ್ಟು ತೇವಾಂಶವಿರಬೇಕು. ಮೋಡ ತುಂಬಾ ಎತ್ತರಕ್ಕೆ ಸಾಗಿಬಿಟ್ಟರೆ ಅತೀ ತಂಪುಗೊಳ್ಳುತ್ತವೆ, ಇಂತಹ ಮೋಡದಲ್ಲಿ ನೀರಿನ ಕಣಗಳು ಕಲಿಲ ಕಣಗಳಾಗಿ ಒಗ್ಗೂಡದೆ ಸ್ಥಿರವಾಗಿದ್ದುಬಿಡುತ್ತವೆ. ಇಂತಹ ಕಲಿಲದ ವಿದ್ಯುದಾವೇಶವನ್ನು ತಟಸ್ಥಗೊಳಿಸಿದರೆ ನೀರಿನ ಕಣಗಳು ಒಗ್ಗೂಡಿ ದ್ರವರೂಪ ಪಡೆದು ಮಳೆಯಾಗುವುದು. ಇದಕ್ಕಾಗಿ ವಿದ್ಯುದಾವೇಶವಿರುವ ಕಣಗಳ ಅಥವಾ ಬಿತ್ತ (ನ್ಯೂಕ್ಲಿಯಸ್ / ಸೀಡ್) ಅವಶ್ಯವಿದೆ. ತುಂಬಾ ಎತ್ತರದಲ್ಲಿ ಧೂಳಿನ ಕಣಗಳೂ ಇರುವುದಿಲ್ಲ, ಸಿಲ್ವರ್ ಅಯೋಡೈಡ್ ಸ್ಪಟಿಕ ರಚನೆಯು ಐಸ್ ಸ್ಪಟಿಕದಂತೆಯೆ ಇರುವುದರಿಂದ ಇದನ್ನು ಮೋಡಬಿತ್ತನೆಯಲ್ಲಿ ಸಾಮಾನ್ಯವಾಗಿ ಉಪಯೋಗಿಸುತ್ತಾರೆ.  ಇದರ ಜೊತೆಗೆ ಡ್ರೈ ಐಸ್, ದ್ರವ ರೂಪದ ಪ್ರೊಪೇನ್ಗಳನ್ನೂ ವಿವಿಧ ಸಂದರ್ಭಗಳಲ್ಲಿ ಬಳಸುತ್ತಾರೆ.

            ಇತ್ತೀಚಿಗೆ ಇನ್ಫ್ರಾರೆಡ್ ಲೇಸರ್ ಕಿರಣಗಳನ್ನು ಮೋಡಕ್ಕೆ ರವಾನಿಸಿ ಮಳೆ ತರಿಸುವ ಪ್ರಯೋಗಗಳೂ ನಡೆದಿವೆ. ಕಿರಣಗಳು ವಾತಾವರಣದಲ್ಲಿನ SO­2, NO2 ಅಣುಗಳನ್ನು ಸೀಡ್ಗಳನ್ನಾಗಿ ಮಾರ್ಪಾಡಿಸುತ್ತವೆಂದು ತಿಳಿಸಲಾಗಿದೆ. ಅಣುಗಳು ಇನ್ಫ್ರಾರೆಡ್ ಕಿರಣಗಳನ್ನು ಹೀರಿ ಅಯಾನುಗಳಾಗುವುದೇ ಇದಕ್ಕೆ ಕಾರಣ.

            ಒಟ್ಟಿನಲ್ಲಿ ನ್ಯೂಕ್ಲಿಯೇಷನ್ ಎಂಬ ಭೌತಿಕ ಪ್ರಕ್ರಿಯೆಯು, ಕೆಲವು ಸಂದರ್ಭಗಳಲ್ಲಿ ಪದಾರ್ಥಗಳು ಒಂದು ಸ್ಥಿತಿಯಿಂದ ಇನ್ನೊಂದಕ್ಕೆ ವರ್ಗಾವಣೆ ಹೊಂದಲು ಆಸರೆಯಾಗಿ ಹಾಗೂ ಪ್ರಕ್ರಿಯೆಯನ್ನು ವೇಗಗೊಳಿಸುವ ವಿದ್ಯಮಾನ. ಇದು ಸಾಮಾನ್ಯವಾಗಿ ದ್ರವ ಅಥವಾ ಅನಿಲಗಳಲ್ಲಿರುವ ನ್ಯೂಕ್ಲಿಯಸ್ ಮೇಲ್ಮೈಯಲ್ಲಿ ನಡೆಯುವ ಪ್ರಕ್ರಿಯೆ. ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ವಿದ್ಯಮಾನವನ್ನು ಗುರುತಿಸಬಹುದು.       

ವಿಶೇಷವೆಂದರೆ ನೀರು ಕುದಿಸುವಾಗ ಅದರಲ್ಲಿ ಕರಗಿದ ಗಾಳಿ ಹೊರಬರಲು ಹಾಗು ನೀರು ಘನೀಕರಿಸಲೂ ನ್ಯೂಕ್ಲಿಯಸ್ ಬೇಕು !!!

ನೀರು ಹಾಗು ಇತರೆ ದ್ರವಗಳನ್ನು ಕಾಯಿಸುವಾಗ ಗ್ಲಾಸ್ ರಾಡ್ ಇಡಬೇಕಾಗುತ್ತದೆ, ಆದರೆ ಹಾಲನ್ನು ಕಾಯಿಸುವಾಗ ಇದರ ಅವಶ್ಯಕತೆ ಯಾಕಿಲ್ಲ?ವೆಂಬ ಕು. ಸಂಪತ್ ಪ್ರಶ್ನೆಗೆ ಉತ್ತರವಿಲ್ಲೇ ಅಡಗಿದೆ! ದ್ರವಗಳಲ್ಲಿ ಕರಗಿದ ಅನಿಲ ಕ್ರಮೇಣವಾಗಿ ಹೊರಬಂದು ಕಾಯಿಸುವಿಕೆ ಸಮರ್ಪಕವಾಗಬೇಕಾದರೆ ಅದಕ್ಕೆ ನ್ಯೂಕ್ಲಿಯಸ್ ಬೇಕು, ನ್ಯೂಕ್ಲಿಯಸ್ ಎಂಬುದು ಇಂತಹುದೇ ಎಂದು ನಿರ್ದಿಷ್ಟವಾಗಿರಬೇಕಿಲ್ಲ. ಗ್ಲಾಸ್ ರಾಡ್, ಗ್ಲಾಸ್ ಬೀಡ್ ಯಾವುದೇ ತೇಲು ಕಣಗಳು ಕೂಡಾ ಆಗಬಹುದು ಒಟ್ಟಿನಲ್ಲಿ ವಿದ್ಯುದಾವೇಶÀವಿರಬೇಕು. ಹಾಲಿನ ಕಣಗಳೇ ನ್ಯೂಕ್ಲಿಯಸ್ ಆಗಿ ವರ್ತಿಸುವುದರಿಂದ ಅದಕ್ಕೆ ಬೇರೆ ಹೊರಗಿನ ಆಸರೆಯ ಅವಶ್ಯಕತೆ ಇರುವುದಿಲ್ಲ.

ಎಲ್ಲ ಸ್ಪಟಕೀಕರಣ ಪ್ರಕ್ರೀಯೆಗಳು ನ್ಯೂಕ್ಲಿಯೇಷನ್ದಿಂದಲೇ ಪ್ರಾರಂಬವಾಗುತ್ತವೆ. ಕು. ಜಯರಾಜ ಹೆಗಡೆಯ ತುಂಬಾ ಹಿಂದಿನ ಕುತೂಹಲಕಾರಿ ಪ್ರಶ್ನೆಯೊಂದು ಸಾಂದರ್ಭಿಕವಾಗಿ ನೆನಪಿಗೆ ಬರುತ್ತಿದೆ. ಪ್ರಯೋಗಶಾಲೆಯಲ್ಲಿ ಕೆಲವು ರಾಸಾಯನಿಕಗಳ ದ್ರವನ ಬಿಂದು (Boiling Point) ಕಂಡು ಹಿಡಿದಾಗ ಶಾಖ ಕೊಡುವುದನ್ನು ನಿಲ್ಲಿಸಿದ ತುಂಬಾ ಹೊತ್ತಿನ ನಂತರವೂ ಅವು ದ್ರವರೂಪದಲ್ಲೇ ಇರುವುದೇಕೆಂಬುದು ಅತನ ಪ್ರಶ್ನೆಯಾಗಿತ್ತು !!!(ಉಷ್ಣತೆ ದ್ರವನ ಬಿಂದುಗಿಂತ ಕಡಿಮೆ ಆದರೂ ರಾಸಾಯನಿಕವು ಘನರೂಪಕ್ಕೆ ಬರದೇ ದ್ರವವಾಗೇ ಉಳಿದಿದ್ದೇಕೆ?) ಆತನ ಇಂತಹ ಸೂಕ್ಷ್ಮ ಬೆರಗಿನ ವೀಕ್ಷಣೆಗೆ ಹಾರ್ದಿಕ ಅಭಿನಂದನೆಗಳು ...

ದ್ರವನಬಿಂದು ಕಂಡು ಹಿಡಿಯಲು ಆದಷ್ಟು ಪರಿಶುದ್ಧ ರಾಸಯನಿಕವನ್ನೇ ಉಪಯೋಗಿಸುವುದರಿಂದಾಗಿ ಪ್ರಯೋಗದಲ್ಲಿ ದ್ರವವಾದ ರಾಸಯನಿಕಕ್ಕೆ ಸೂಕ್ತ ನ್ಯೂಕ್ಲಿಯಸ್ ಸಿಗದೆ ದ್ರವ ಸ್ಥಿತಿಯಲ್ಲೇ ಅತೀ ತಂಪಾಗುತ್ತಾ ಹೋಗುತ್ತದೆ (Super cooling). Homogeneous Nucleation ದಿಂದಾಗಿ ಅದು ಘನೀಕರಿಸುವುದು ತುಂಬಾ ನಿಧಾನವಾಗುತ್ತದೆ.

 ಅಯಾನುಕಾರಕ ವಿಕಿರಣಗಳನ್ನು ಪತ್ತೆ ಹಚ್ಚುವ, ಅಳೆಯುವ ಸಾಧನ ವಿಲ್ಸನ್ ಕ್ಲೌಡ್ ಚೇಂಬರ್ ದಲ್ಲಿ ಇದೇ ತತ್ವವನ್ನು ಬಳಸಿಕೊಳ್ಳಲಾಗಿದೆ. ವಿಕಿರಣಗಳು ಉಂಟುಮಾಡುವ ಅಯಾನುಗಳು, ಕ್ರತಕ ಮೋಡದಲ್ಲಿ ನ್ಯೂಕ್ಲಿಯಸ್ಆಗಿ ವರ್ತಿಸುತ್ತವೆ.

 

         ಪದಾರ್ಥಗಳ ಸ್ಥಿತ್ಯಂತರಕ್ಕೆ ಆಧಾರವಾಗಿ ಅದನ್ನು ವೇಗಗೋಳಿಸಲು ಒಂದು ನ್ಯೂಕ್ಲಿಯಸ್ ಪಾತ್ರ ಹೇಗೆ ಪ್ರಮುಖವಾಗುವುದೋ ಹಾಗೆಯೇ ನಮ್ಮೆಲ್ಲ ವಿದ್ಯಾರ್ಥಿ ಓದುಗರಿಗೆChem-Whiz ರಸ ಸಂಚಿಕೆಯು ಒಂದು ನ್ಯೂಕ್ಲಿಯಸ್ / ಕೇಂದ್ರ ವಾಗಿ ಅವರಲ್ಲಿ ರಸಾಯನ ವಿಜ್ಞಾನದ ಮೂಲಕ ನಿಸರ್ಗದ ಕುರಿತು ಕುತೂಹಲ, ಆಸಕ್ತಿ, ಆದರಗಳು ಸಾಂದ್ರನಗೊಳ್ಳುವಂತಾಗಲೆಂದು ಹಾರೈಸುತ್ತೇನೆ ...

                                                                                                      

-ಪ್ರಧಾನ ಸಂಪಾದಕರು

    ಶ್ರೀ ಗಣೇಶ ಎಸ್. ಹೆಗಡೆ, ಹಂಗಾರಖಂಡ, ರಸಾಯನಶಾಸ್ತ್ರ   

    ವಿಭಾಗ, ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ

No comments:

Post a Comment

Environmental Pollution