Friday, 5 August 2022

Interview Article

‘ವೆಂಕಣ್ಣ ಜಾಲಿಮನೆ’’ಯವರ’ಸಂದರ್ಶನ ಲೇಖನ-  2017ರ ಕೆಮ್-ವಿಝ್ ತಂಡದಿಂದ

ಈ ಬಾರಿಯ ನಮ್ಮ Chem-whiz ನ ರಸಬಳಗ ಹೊರಟಿದ್ದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಿತ್ಲಳ್ಳಿಯ ಕಲಾವಿದರಾದ ವೆಂಕಣ್ಣನವರ ಮನೆಯೆಂಬ ‘ಸ್ವಸ್ತಿಕ ಆರ್ಟ ಗ್ಯಾಲರಿ’ಗೆ. ಮಧ್ಯಾಹ್ನದ ಊಟ ಮುಗಿಸಿ ಸಣ್ಣ ನಿದ್ದೆ ತೆಗೆಯುವ ಹೊತ್ತಿನಲ್ಲಿ ಹೋದ ನಮ್ಮನ್ನು ನಗುಮೊಗದಿಂದಲೇ ಸ್ವಾಗತಿಸಿದರು ವೆಂಕಣ್ಣ. ಅವರ ಕುಶಲತೆಯ ಝಲಕ್ ಮನೆಯ ಗೇಟಿನಿಂದಲೇ ಆರಂಭವಾಗಿ, ಒಳಹೊಕ್ಕಂತೆಲ್ಲಾ ಅವರ ಕಲಾಸಕ್ತಿ ಅನಾವರಣಗೊಳ್ಳುತ್ತಲೇ ಸಾಗಿತ್ತು. ವೆಂಕಣ್ಣನ ಮಗನೂ ಕಲಾವಿದರಾಗಿದ್ದು, ಮನೆಯ ಜಗಲಿಯನ್ನು ಶೃಂಗರಿಸಿದ್ದ ಅವರು ಬಿಡಿಸಿದ ಆಳೆತ್ತರದÀ ಚಿತ್ರಕಲೆಗಳು ಎಲ್ಲರನ್ನೂ ಬೆರಗುಗೊಳಿಸಿದವು.  

ತನಗೆ ಮಾತನಾಡಲು ಬರುವುದಿಲ್ಲವೆಂಬ ಸಂಕೊಚದಿಂದಲೇ ಮನೆಯ ಮಹಡಿಯಲ್ಲಿದ್ದ ತಮ್ಮ ಕಲಾ ಸಂಗ್ರಹಕ್ಕೆ ಕರೆದೊಯ್ದ ವೆಂಕಣ್ಣ ನಮ್ಮೊಂದಿಗೆ ಮಾತಿಗಿಳಿದಿದ್ದರು. ಮಹಡಿಗೆ ಕಾಲಿಟ್ಟಿದ್ದೆ ನಾವು ಮಾತು ಕಳೆದುಕೊಂಡಿದ್ದೆವು. ಮರದ ಬೇರು, ಕಟ್ಟಿಗೆ, ಕಲ್ಲು ಇವುಗಳಲ್ಲಿ ಸ್ವಾಭಾವಿಕವಾಗಿ ಮಾಡಿದ ಗಣೇಶನ ಆಕೃತಿಗಳ ಸಂಗ್ರಹವೇ ಇನ್ನೂರಕ್ಕೂ ಹೆಚ್ಚು. ಗಣಪತಿಯ ಬಗ್ಗೆ ವಿಶೇಷ ಒಲುಮೆ ಹೊಂದಿರುವ ಇವರಿಗೆ ಪರಿಸರದಲ್ಲಿ ಸ್ವಾಭಾವಿಕವಾಗಿ ಒಡಮೂಡಿದ ಗಣೇಶನನ್ನು ಸಂಗ್ರಹಿಸುವುದು ಸಣ್ಣಂದಿನಿಂದಲೂ ಬೆಳೆದ ಹವ್ಯಾಸ. ಇಂದಿಗೂ ತಮಗೆ ಮೊದಲು ಸಿಕ್ಕ ಗಣಪತಿಯ ಹುಟ್ಟು ಹಬ್ಬ ಆಚರಿಸುವ ವೆಂಕಣ್ಣನ ಕಲಾ ಪ್ರೇಮ ನಿಜಕ್ಕೂ ಅಚ್ಚರಿಯೆನಿಸುತ್ತದೆ.


ಎಲ್ಲರ ಕಣ್ಣಿನಲ್ಲಿ ನಿರುಪಯುಕ್ತವಾದ ಯಾವುದೋ ಬೇರಿನ ತುಂಡುಗಳು, ಮತ್ಯಾವುದೋ ಮರದ ಕಾಯಿ ಇವು ವೆಂಕಣ್ಣನ ಕೈಯಲ್ಲಿ ಸಿಕ್ಕು ತಮ್ಮ ಜನ್ಮ ಸಾರ್ಥಕಪಡಿಸಿಕೊಂಡಿವೆ. ಕೀ ಬಂಚ್ ಗಳಾಗಿ ಇಂದಿನ ಕಾಲದ ಸ್ಟೈಲಿಶ್ ಪೆಂಡೆಂಟ್ ಗಳಾಗಿ ಮಾರ್ಪಟ್ಟಿವೆ. ಇವೆ ಒಂದು ಕಾಲದಲ್ಲಿ ಅವರ ಜೀವನಕ್ಕೂ ಆಧಾರವಾಗಿದ್ದನ್ನು ನೆನಪಿಸಿಕೊಂಡರು.

ಹಾಗೆಯೇ ಅವರ ಸಂಗ್ರಹದಲ್ಲಿ 2, 3, 4, 5 ಕಣ್ಣುಗಳಿರುವ ತೆಂಗಿನ ಕಾಯಿಗಳು, ಅದರಲ್ಲಿ ಕಾಣುವ ಮನುಷ್ಯ ಭಾವಗಳು............ ಅಂತೆಯೇ ಅವರ ಬಳಿ ಇದ್ದ ಹಳೆ 

ಮಾದರಿಯ ಕ್ಯಾಮರಗಳನ್ನು ನಮ್ಮ ಬಳಗದ ಯಾರೂ ಈ ಮೊದಲು ನೋಡಿರಲಿಲ್ಲ.     
 

ಇಪ್ಪತ್ತೊಂದನೇ ಶತಮಾನದ ಸ್ವಾಗತಕ್ಕೆ 2000ನೇ ಇಸವಿಯಲ್ಲಿ ಎರಡು ಸಾವಿರ ಅರಳಿ ಎಲೆಗಳಲ್ಲಿ ಕಲಾಕೃತಿಗಳನ್ನು ರಚಿಸಿ ಶಿರಸಿಯಲ್ಲಿ ಪ್ರದರ್ಶನ ಮಾಡಿದ್ದರಂತೆ. ಎಲ್ಲ 2000 ಎಲೆಗಳಲ್ಲಿ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಜೀವ ತಳೆದಿದ್ದರು. ನಂತರದ ದಿನಗಳಲ್ಲಿ ಭಗವದ್ಗೀತೆಯ ಎಲ್ಲಾ ಹದಿನೆಂಟು ಅಧ್ಯಾಯಗಳು 1000 ಅರಳಿ ಎಲೆಗಳಲ್ಲಿ ಬರೆಯಲ್ಪಟ್ಟಿತು. 

ಅರಳಿ ಎಲೆಯಲ್ಲಿ ಸಾಹಿತ್ಯ ಸಮ್ಮೇಳನದ ಎಲ್ಲ ಅಧ್ಯಕ್ಷರು ಇವರ ಕೈಯಲ್ಲಿ ರೂಪುಗೊಂಡಿದ್ದಾರೆ. ಸಮ್ಮೇಳನಗಳಲ್ಲಿ ಪ್ರದರ್ಶನ ಹಾಗೂ ಮಾರಾಟ ಮಾಡುತ್ತಿದ್ದದನ್ನು ತಮ್ಮ ಕಷ್ಟದ ದಿನಗಳಲ್ಲಿ ಈ ಅರಳಿ ಎಲೆ ಕಲಾಕೃತಿಗಳೇ ತಮ್ಮ ಕೈ ಹಿಡಿದಿದ್ದುದನ್ನು ಭಾವುಕರಾಗಿ ನೆನೆಸಿಕೊಂಡರು. ವ್ಯವಹಾರ ಚತುರತೆಯನ್ನೂ ಹೊಂದಿದ್ದ ವೆಂಕಣ್ಣ ಏಳು, ಒಂಬತ್ತು ಎಲೆಗಳಿಂದ ಮಾಡಿದ ಗಣಪತಿಯನ್ನು ವಾಸ್ತು ಗಣಪತಿ ಎಂಬ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದುದಾಗಿ ಮುಜುಗರ ಪಡದೆ ತಮ್ಮನ್ನು ತಾವು ತೆರೆದಿಟ್ಟರು. ಆನ ಮರುಳೋ ಜಾತ್ರೆ ಮರುಳೋ ಎಂಬಂತೆ ಜನ ಕೇಳಿದಷ್ಟು ತೆತ್ತು ಕೊಂಡುಕೊಳ್ಳುತ್ತಿದ್ದರಂತೆ! ಆದರೆ ಮಾರಿದ ಇವರಿಗೆ ಜೀವನ, ಕೊಂಡ ಅವರಿಗೆ ನೆಮ್ಮದಿ. ಈಗ ಮಾರಾಟ ಮಾಡುವುದನ್ನು ಬಿಟ್ಟಿದ್ದರೂ ವೆಂಕಣ್ಣನ ನೆನಪಿನಲ್ಲಿ ಅವು ಇನ್ನು ಹಸಿರಾಗಿವೆ. 

ಮಹಡಿಯ ಒಂದು ಪುಟ್ಟ ಕೋಣೆಯಲ್ಲಿ ಅವರ ಮಗ ಕಲಿಯುವಾಗ ಬಿಡಿಸಿದ ಚಿತ್ರಗಳ ಸಂಗ್ರಹ. ಅವು ಕಲಿಯುವಾಗ ಬಿಡಿಸಿದ್ದೆಂದು ಯಾರೂ ಹೇಳುವಂತಿಲ್ಲ. ಅಬ್ಬಾ! ಒಂದೊಂದು ಅದ್ಭುತ ಚಿತ್ರಗಳು. ವೆಂಕಣ್ಣನ ಒಂದೊಂದು ಮಾತುಗಳ್ಲೂ ಮಗನ ಬಗೆಗಿನ ಹೆಮ್ಮೆ ಎದ್ದು ಕಾಣುತ್ತಿತ್ತು.   

ಮಹಡಿಯ ಮತ್ತೊಂದು ಬದಿಯಲ್ಲಿ ಸೀಸೆಗಳ ಸಂಗ್ರಹ. ಇರುವ ಇರುವ ನೂರಾರು ಚಿಕ್ಕ ದೊಡ್ಡ ಸೀಸೆಗಳಲ್ಲಿ ಎಲ್ಲವೂ ವಿಭಿನ್ನ. ಅದ್ಭುತ ಎಂದೆನಿಸುವ ಕಲಾತ್ಮಕ ಅತ್ತರ್(ಸುಗಂಧ ದ್ರವ್ಯಗಳ) ಬಾಟಲಿಗಳು.

ಮತ್ತೊಂದು ಕೋಣೆಯಲ್ಲಿ ವೆಂಕಣ್ಣನವರು ಕಲೆಹಾಕಿದ ಪ್ರಾಚೀನ ವಸ್ತುಗಳ ಸಂಗ್ರಹಾಲಯ. ಹಳೇ ಕಾಲದ ಗಡಿಯಾರಗಳು, ರೇಡಿಯೋಗಳು, ಗ್ರಾಮೋಫೋನ್‍ಗಳು, ಮರ ಕಲ್ಲುಗಳ ಪಾತ್ರೆಗಳು ಸಿಕ್ಕಿದ್ದು ಕೊಟ್ಟದ್ದು.............ಹೀಗೆ ಬೆಳೆದ ಸಂಗ್ರಹ. ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲವೆಂಬ ಖೇದದ ನಡುವೆಯೇ ಅವುಗಳ ಬಗ್ಗೆ ವೆಂಕಣ್ಣನವರಿಗಿರುವ ಕಾಳಜಿ ವ್ಯಕ್ತವಾಗುತ್ತದೆ. ಪ್ರತಿಯೊಂದು ವಸ್ತುವಿನ ಬಗೆಗೂ ಅವರು ವಿವರಿಸುವಾಗ ಅವರ ಕಣ್ಣಲ್ಲಿ ಕಾಣುವ ಮಿಂಚು ಪದಗಳಲ್ಲಿ ಹಿಡಿದಿಡುವುದು ಕಷ್ಟ ಸಾಧ್ಯ. 


ಮನೆಯ ಅಂಗಳವೇ ಒಂದು ಕಲಾ ಶಾಲೆ. ಗೋಡಗಳ ತುಂಬ ಬಣ್ಣ ಬಣ್ಣದ ಚಿತ್ತಾರ, ಕಾಗದ, ಹಳೆಯ ಕೊಡೆಗಳಿಂದ ಮಾಡಿದ ಅಲಂಕಾರಿಕ ಹ್ಯಾಂಗಿಂಗ್ಸ್, ರೊಟ್ಟಿನ ಪೆಟ್ಟಿಗೆಯ ಮುಖವಾಡಗಳು, ಏನೋ ಮಾಡಲು ಹೋದಾಗ ಅದನ್ನು ನಾಯಿ ಕಚ್ಚಿಕೊಂಡು ಹೋಗಿ ಹಾಳು ಮಾಡಿದ ಒಂದು ಕಲಾಕೃತಿ ವೆಂಕಣ್ಣನ ಕಲಾತ್ಮಕತೆಯಿಂದ ಮತ್ತೊಂದು ರೂಪ ಪಡೆದು ಎಲ್ಲರನ್ನೂ ತನ್ನತ್ತ ಸೆಳೆಯುತ್ತಿತ್ತು! 

 60 ವರ್ಷದ ವೆಂಕಣ್ಣ ಹಾಗೂ ಅವರ ತಾಯಿ ಇಬ್ಬರೇ ಇರುವ ಮನೆಗೆ ನಾವು 15-20 ಜನ ದಾಳಿ ಇಟ್ಟೆವೇನೋ ಎಂಬ ಅಳುಕಿತ್ತು. ಆದರೆ ನಮ್ಮ ಭೇಟಿ ಅವರಿಗೆ ಮತ್ತಷ್ಟು ಕೆಲಸ ಮಾಡಲು ಸ್ಪೂರ್ತಿ ನೀಡಿತು ಎಂದು ತಮ್ಮ ಸೌಜನ್ಯ ಮೆರೆದರು. ಆ ವಯಸ್ಸಿನಲ್ಲೂ ಅವರಿಗಿರುವ ಜೀವನೋತ್ಸಾಹ ಬೆರಗುಗೊಳಿಸುವಂತಹದು. ವೆಂಕಣ್ಣನವರ ತಾಯಿ ಎಲ್ಲರಿಗೂ ತೃಪ್ತಿಯಾಗುವಂತೆ ಸತ್ಕರಿಸಿದರೆ, ವೆಂಕಣ್ಣನವರು ಕಣ್ಣಿಗೆ ಹಬ್ಬವನ್ನೇ ಬಡಿಸಿದರು. ಸ್ಪೂರ್ತಿಯ ಚಿಲುಮೆಯಾಗಿ ನಮಗೊಂದಿಷ್ಟು ಹಂಚಿ ಒಂದು ಸುಂದರ ಅನುಭೂತಿಯನ್ನು ಕಟ್ಟಿಕೊಟ್ಟರು ವೆಂಕಣ್ಣ. ಸಂಜೆಯಾಯಿತೆಂದು ಹೊರಟು ನಿಂತಾಗ ಇನ್ನು ಸ್ವಲ್ಪ ಹೊತ್ತು ಇರಬೇಕಾಗಿತ್ತು ಎಂದೆನಿಸಿದ್ದು ಸುಳ್ಳಲ್ಲ. 

-ಶ್ರದ್ಧಾ ಎಮ್. ವಿ., ಬಿ. ಎಸ್ಸಿ. ಅಂತಿಮ 

No comments:

Post a Comment

Environmental Pollution