ಮೂರನೇ ಅವತರಣಿಕೆಯ ಸಂಪಾದಕೀಯ
ಆತ್ಮೀಯರೆ,
2011 ರ ವರ್ಷಪೂರ್ತಿ ಜಗತ್ತಿನಾಧ್ಯಂತ ರಸಾಯನಶಾಸ್ತ್ರ ವರ್ಷವಾಗಿ ಆಚರಿಸಲಾಯ್ತು. ಈ ಆಚರಣೆಯ ಮುಕ್ತಾಯ ಸಮಾರಂಭದಲ್ಲಿ “ಇಂಥಹ ಆಚರಣೆಯು ಇಂದಿಗೇ ಮುಗಿಯುವುದಲ್ಲ ಬದಲಾಗಿ ಇದೊಂದು ಪ್ರಾರಂಭವಷ್ಟೆ”ಎಂದರು. ಮನುಕುಲದ ಔನ್ನತ್ಯಕ್ಕೆ ಅಮೋಘ ಕೊಡುಗೆಗಳನ್ನ ನೀಡಿದ / ನೀಡುತ್ತಿರುವ ವಿಜ್ಞಾನದ ಪ್ರಮುಖ ವಿಭಾಗವಾದ ರಸಾಯನಶಾಸ್ತ್ರವನ್ನ ಜನಪ್ರಿಯಗೊಳಿಸುವ ಕೆಲಸವಾಗಬೇಕಿರುವುದರಿಂದ ಇಂಥಹ ಆಚರಣೆಗಳು ನಿರಂತರವಾಗಿ ನಡೆಯಬೇಕೆಂಬುದು ಅವರ ಆಶಯ.
ಪ್ರೊ. ಎಂ. ಆರ್. ಎನ್ ರವರಿಂದ “Logic
about Synthetic reagents” ಎಂಬ ವಿಷಯದಮೇಲೆ ಅಂತಿಮ ಬಿ.ಎಸ್ಸಿಯವರಿಗೆ ಏರ್ಪಡಿಸಿದ ಉಪನ್ಯಾಸ ಮತ್ತು “ಕೆಮ್-ವಿಝ್” ಬಿಟ್ಟರೆ ಇತ್ತೀಚೆಗೆ ಬೆರೇನನ್ನೂ ಮಾಡಲಾಗದಿದ್ದಕ್ಕೆ ವಿಷಾದವಿದೆ.
ಫೆಬ್ರವರಿ 19 ರಂದು ಲೋಕರ್ಪಣೆಯಾದ ಪ್ರೊ. ಎಂ. ಆರ್. ಎನ್. ಅಭಿನಂದನಾಗ್ರಂಥ “ಮೆಲುಕು”ದಲ್ಲಿ ಲೇಖನ ಬರೆದದ್ದರಿಂದ ಅದರ ಸಂಪಾಕ ಮಂಡಳಿ ಸದಸ್ಯರಾದ ಖ್ಯಾತ ವಿಜ್ಞಾನ ಮತ್ತು ಪರಿಸರ ಬರಹಗಾರರಾದ ಶ್ರೀ ನಾಗೇಶ ಹೆಗಡೆ ಬಕ್ಕೇಮನೆಯವರ ಸಂಪರ್ಕ ಬೆಳೆಯಿತು. ನಮ್ಮ ಪತ್ರಿಕೆಗೆ ಅವರಿಂದ ಒಂದು ಲೇಖನವನ್ನ ಕೇಳಿದಾಗ ಏಪ್ರೀಲ್-1 ಕ್ಕೆ “ವಿಶ್ವ ಕನ್ನಡ” ಎಂಬ ಅಂತರ್ಜಾಲ ತಾಣದಲ್ಲಿ ಪ್ರಕಟವಾದ ಲೇಖನವನ್ನ ಬಳಸಿಕೊಳ್ಳಲು ಅನುಮತಿಸಿದರು, ಹಾಗಾಗಿ ಶ್ರೀ ನಾಗೇಶ ಹೆಗಡೆ ಯವರಿಗೆ ಹಾಗು “ವಿಶ್ವ ಕನ್ನಡ”ದವರಿಗೆ ಆಭಾರಿಯಾಗಿದ್ದೇವೆ. ಆ ರಸಭರಿತ ‘ಡಿಟು.ಎಚ್.ಎಮ್ಮೊ’ಕುರಿತ “ಅಮೇರಿಕದ ಅಕ್ಕನ ಲೇಖನವನ್ನ ಯಥಾವತ್ತಾಗಿ ಪ್ರಕಟಿಸಿದ್ದೇವೆ.
ಯಾವುದೇ ಒಂದು ಸಂಸ್ಥೆ ಒಂದು ಪ್ರದೇಶದಲ್ಲಿ ಕೆಲಸ ಮಾಡುವಾಗ ಆಭಾಗದ ಜನರಿಗೆ/ಪರಿಸರಕ್ಕೆ ಅದರಿಂದ ಕಿಂಚಿತ್ ಆದರೂ ನೇರವಾದ ಪ್ರಯೋಜನವಿರಬೇಕೆಂಬುದು ಅತ್ಯವಶ್ಯ ಸಂಗತಿ. ಕೃಷಿ ಮತ್ತು ಪರಿಸರವೇ ಪ್ರಮುಖ ಆರ್ಥಿಕಮೂಲವಾದ ಈ ಉತ್ತರ ಕನ್ನಡದ ಪ್ರದೇಶದಲ್ಲಿ ಆ ಕುರಿತು ಏನಾದರೂ ಉಪಯುಕ್ತವಾದದ್ದನ್ನ ಪ್ರಾರಂಭಿಸಬೇಕೆಂದುಕೊಂಡಾಗ ಬಂದ ಆಲೋಚನೆ ಎಂದರೆ ಮೊದಲು ನಮ್ಮ ವಿದ್ಯಾರ್ಥಿಗಳಿಗೆ “ಕೃಷಿ ಹಾಗು ಪರಿಸರ” ಕುರಿತು ಪ್ರೀತಿ ಹುಟ್ಟುವಂತೆ ಮಾಡುವುದು. ಈ ಬಗ್ಗೆ ತತ್ಕ್ಷಣ ನೆನಪಾದದ್ದೆಂದರೆ ಪ್ರಖ್ಯಾತ ಪರಿಸರ ಬರಹಗಾರರಾದ ಶ್ರೀ ಶಿವಾನಂದ ಕಳವೆಯವರೊಂದಿಗೆ ಸಂದರ್ಶನ. ಪಕೃತಿ, ಪರಿಸರ ಹಾಗು ಹಳ್ಳೀ ಬದುಕಿನ ಕುರಿತು ವಿಶೇಷ ಪ್ರೀತಿ ಹೊಂದಿರುವ ಕಳವೆಯವರು ಈ ಕುರಿತು ಬಹಳಷ್ಟು ವಿಸ್ತøತ ಲೇಖನಗಳನ್ನ, ಪುಸ್ತಕಗಳನ್ನ ಬರೆದಿದ್ದಾರೆ ಅವು ಒಬ್ಬ ವಿಜ್ಞಾನಿಯ ಸಂಶೋಧನಾ ಪ್ರಬಂಧಗಳೆಂದೇ ಗುರುತಿಸುವಷ್ಟು ವೈಜ್ಞಾನಿಕವೂ, ಗಹನವೂ ಹಾಗು ಅಧ್ಯಯನಯೋಗ್ಯವೂ ಆಗಿವೆ. ನಮ್ಮ ಸಂಪಾದಕ ಮಂಡಳಿಯ ಕೆಲವು ವಿದ್ಯಾರ್ಥಿಗಳನ್ನ ಅವರ ಸಂದರ್ಶನ ಮಾಡಲು ಪೂರ್ವತಯಾರಿ ಮಾಡಿ ಕಳುಹಿಸಿದಾಗ ತುಂಬಾ ಉತ್ಸುಕರಾಗಿ ಹೊರಟರು ಹಾಗು ಸಂದರ್ಶನದ ನಂತರ ಇದು ತಮ್ಮ ವಿದ್ಯಾರ್ಥಿ ಜೀವನದ ಅವಿಸ್ಮರಣೀಯ ಘಟನೆಯೆಂದು ಬಣ್ಣಿಸಿದರು. ಅವರೊಂದಿಗಿನ ಸಂಭಾಷಣೆಯನ್ನ ಯಥಾವತ್ತಾಗಿ ಪ್ರಕಟಿಸಲಾಗಿದೆ ಜೊತೆಗೆ ಈಗ ಅವರ ಮನೆಮಂದಿಯಲ್ಲೊಂದಾಗಿರುವ ಕಾಡಿನ ರಾಯಭಾರಿ ಗೌರಿ ಮತ್ತವಳ ಮಗಳೊಂದಿಗೂ ನಮ್ಮ ತಂಡದವರು ಪ್ರೀತಿಯಿಂದ ಒಡನಾಡಿ ಅವರ ಕೆಲವು ದೃಶ್ಯಗಳನ್ನಿಲ್ಲಿ ಅಂಟಿಸಿದ್ದಾರೆ. ಅದು ನಮ್ಮ ಪತ್ರಿಕೆಯ ಮೆರುಗನ್ನ ಹೆಚ್ಚಿಸಿದೆ.
‘ಸ್ಟುಡೆಂಟ್ಸ್ ಕಾರ್ನರ್’ದಲ್ಲಿ ಕರುಣಾಕರ ಅವನ ಕಾಲೇಜಾನುಭವಗಳನ್ನ ಮೆಲುಕಿದ್ದಾನೆ, ಆದರೆ ಕಾರಣಾಂತರಗಳಿಂದ ಟೀಚರ್ಸ್ ಕಾರ್ನರ್ಗೆ ಯಾರೂ ಬರೆಯಲಿಲ್ಲ. ಎಂದಿನಂತೆ ಇತರೆ ಅಂಕಣಗಳಾದ ‘ರಸಯೋಗಿ ಎಂ.ಆರ್.ಎನ್’, ‘ಸೊಸೈಟಲ್ ಇಂಟರ್ಫೇಸ್’ ಮತ್ತು ‘ಡಿಪಾರ್ಟಮೆಂಟಲ್ ನೀವ್ಸ್’ಗಳು ಪ್ರಕಟವಾಗಿವೆ ಹಾಗು ‘ದಿ ಸೈಂಟಿಸ್ಟ್’ನಲ್ಲಿ ಸರ್ ಸಿ. ವಿ. ರಾಮನ್ ಬಗ್ಗೆ ಕಿರು ಮಾಹಿತಿಯನ್ನಷ್ಟೆನೀಡಿದ್ದೇವೆ. ಹಿಂದಿನ ಪದ ಬಂಧದ ಬದಲಾಗಿ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ಪದಗಳನ್ನ ಹುಡುಕುವ ಪಝಲ್ನ್ನ ರಚಿಸಲಾಗಿದೆ.
ತಪ್ಪು-ಒಪ್ಪು: ಹಿಂದಿನ ಆವೃತ್ತಿಯ ಸಂಪಾದಕೀಯದಲ್ಲಿ “ನೀವು ಈ ಬರಹವನ್ನ ಓದಲು ಸಾಧ್ಯವಾಗುತ್ತಿರುವುದೂ ರಾಸಾಯನಿಕ ಕ್ರಿಯೆಯಿಂದಲೇ! ಆಲೋಚಿಸಿರಿ” ನೋಡುವುದು ಫೋಟೊಕೆಮಿಕಲ್ ರಿಯಾಕ್ಷನ್ ಎಂಬರ್ಥದಲ್ಲಿ ಬರೆಯಲಾಗಿತ್ತು ಆದರೆ ಅದು ರಾಸಾಯನಿಕ ಕ್ರಿಯೆಯಲ್ಲ ಬದಲಾಗಿ “ಬೆಳಕಿನ ಪ್ರಚೋದನೆಯಿಂದಾಗುವ ಕ್ರಿಯೆ” ಎಂದಾಗಬೇಕಾಗಿತ್ತು.
-ಪ್ರಧಾನ ಸಂಪಾದಕರು,
-ಶ್ರೀ ಗಣೇಶ ಎಸ್. ಹೆಗಡೆ, ಹಂಗಾರಖಂಡ
ರಸಾಯನಶಾಸ್ತ್ರ ವಿಭಾಗ, ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ.
No comments:
Post a Comment