ಎರಡನೇ ಅವತರಣಿಕೆಯ ಸಂಪಾದಕೀಯ
ಆತ್ಮೀಯರೆ,
ಕುತೂಹಲಕ್ಕಾಗಿ ಕಣ್ಣೀರಿನ ರಾಸಾಯನಿಕ ವಿಶ್ಲೇಷಣೆ ಮಾಡಲಾಯ್ತು. ಸಂಶೋಧನೆಯ ¥sóÀಲಿತಾಂಶದಲ್ಲಿ ಆಶ್ಚರ್ಯವೊಂದು ಕಾದಿತ್ತು. ಸಂತೋಷದಿಂದ ಬಂದ ಹಾಗು ಸ್ವಾಭಾವಿಕವಾಗಿ ಯಾವುದೇ ಬಾವನೆ ಇಲ್ಲದೆ ಬಂದ ಕಣ್ಣೀರಿನ ಘಟಕಗಳಲ್ಲಿ ಹೆಚ್ಚೇನೂ ವ್ಯೆತ್ಯಾಸ ಕಂಡುಬರಲಿಲ್ಲ, ಆದರೆ ದುಃಖದ ಕಣ್ಣೀರು ಬಹಳಷ್ಟು ಟಾಕ್ಸಿನ್ನುಗಳನ್ನು ಒಳಗೊಂಡಿದ್ದು ಕಂಡು ಬಂದಿತು! ಈ ಟಾಕ್ಸಿನ್ನುಗಳು ದೇಹದಲ್ಲೆ ಉಳಿದಿದ್ದರೆ ತುಂಬಾ ಅಪಾಯಕಾರಿಯಾಗಿರುತ್ತಿತ್ತು.
ದುಃಖವಾದಾಗ ಮಕ್ಕಳಂತೆ ಅತ್ತುಬಿಡುವುದು ಹೆಂಗಸರ ಸ್ವಬಾವ. ಅಳು ಅವರ ಆಜನ್ಮ ಸಿದ್ದ ಹಕ್ಕೆಂದರೂ ತಪ್ಪಿಲ್ಲ! ಆದರೆ ಗಂಡಸರಿಗೆ ದುಃಖವಾದರೂ ಅಳುವಂತಿಲ್ಲ ಆತ್ತರೆ ಅಳುಮುಂಜಿ ಎಂಬ ಪಟ್ಟ! ಈ ಪಟ್ಟಕ್ಕೆ ಹೆದರಿಯೋ ಅಥವಾ ಅಹಂಕಾರಕ್ಕೆ ಚ್ಯುತಿ ಬರುವುದೆಂದೋ ಒಟ್ಟಾರೆ ಗಂಡುಮಕ್ಕಳು ಬೆಳೆಯುತ್ತಿದ್ದಂತೆ ದುಃಖವನ್ನ ನುಂಗಿ ಬದುಕುವ ಸಾಹಸವನ್ನ ಮೈಗೂಡಿಸಿಕೊಳುತ್ತಾರೆ. ಆದರೆ ಈ ಸಾಹಸದ ಪರಿಣಾಮ ಅಲ್ಪಾಯುಷ್ಯ!
ಅದೇ ಸ್ವಬಾವತಹ ಅಳುಮುಂಜಿ ಪಟ್ಟ ಪಡೆದ ಹೆಂಗಳೆಯರು ಧೀರ್ಘಾಯುಷಿಗಳು!
ಇಂಗ್ಲೇಂಡಿನ ವಿಜ್ನಾನಿಗಳ ಸಂಶೋಧನೆಗಳ ಪ್ರಕಾರ ಮನುಷ್ಯನ ಮನಸ್ಸಿಗೂ ಹಾಗು ದೇಹ ದಲ್ಲಾಗುವ ಜೀವರಾಸಾಯನಿಕ ಕ್ರಿಯೆಗಳಿಗೂ ನೇರ ಸಂಬಂಧ. ಅಂದರೆ ಮನಸ್ಸಿನ ಪ್ರಕೋಪಗಳಾದ ಸಿಟ್ಟು, ಕ್ರೋಧ, ಕ್ರೂರತೆಯಂತಹ ವಿಕ್ಷಿಪ್ತ ಬಾವನೆಗಳು ದೇಹಕ್ಕೆ ಹಾನಿಕರವಾದ ರಾಸಾಯನಿಕಗಳನ್ನ (ಅಡ್ರಿನಿಲಿನ್....) ಬಿಡುಗಡೆ ಮಾಡುವುದರೊಂದಿಗೆ ಜೀವರಾಸಾಯನಿಕ ಕ್ರಿಯೆಯ ವೇಗ ಹೆಚ್ಚಿಸುವುದೂ ಆಗಿದೆ. ಇಂಥಹ ಸ್ಥಿತಿಯಲ್ಲಿ ದೇಹದ ರೋಗನಿರೋಧಕ ಶಕ್ತಿ ಕುಗ್ಗಿ ರೋಗಕ್ಕೆ ಆಹ್ವಾನ ನೀಡುತ್ತದೆ. ಗಾಂಧೀಜಿಯವರು ಹೇಳುತ್ತಿದ್ದಂತೆ ರೋಗ ಏಂದೂ ದೇಹಕ್ಕೆ ಮೊದಲು ಬರುವುದಿಲ್ಲ, ಆದರೆ ಮೊದಲು ಮನಸ್ಸು ರೋಗಗ್ರಸ್ತಗೊಂಡು ನಂತರ ಅದು ದೇಹಕ್ಕೆ ವರ್ಗಾವಣೆಯಾಗುವುದು!.
ಇದೇ ಇಂಗ್ಲೇಂಡಿನ ಜೀವವಿಜ್ನಾನ ವಿಭಾಗದ ಸಂಶೋಧನೆಯ ಪ್ರಕಾರ ದಿನನಿತ್ಯ 15 ನಿಮಿಷಗಳ ಕಾಲ ಮನಸ್ಸನ್ನ ಏಕಾಗ್ರ (ಶಾಂತ) ಗೊಳಿಸುವ ವ್ಯಕ್ತಿ ಈ ಪ್ರಯತ್ನ ಮಾಡದ ವ್ಯಕ್ತಿಗಿಂತ ನೂರು ಪಟ್ಟು ರೋಗ ನಿರೋಗಧಕ ಶಕ್ತಿ ಹೊಂದಿರುವುದು ಕಂಡುಕೊಳ್ಳಲಾಗಿದೆ. ಮನಸ್ಸನ್ನ ಶಾಂತ/ ಏಕಾಗ್ರಗೊಳಿಸಿದಾಗ, ಆನಂದ, ಸಂತೋಷ, ನೆಮ್ಮದಿಯಿಂದಿದ್ದಾಗ ಜೀವರಾಸಾಯನಿಕ ಕ್ರಿಯೆಗಳು ನಿಧಾನಗೊಂಡು ದೇಹಕ್ಕೆ ಅಗತ್ಯ ವಿಶ್ರಾಂತಿ ದೊರಕುವುದು ದೃಢಪಟ್ಟಿದೆ. ಹಾಗೆಯೇ ಉಲ್ಲಾಸ, ಕನಿಕರ ಮತ್ತು ಪ್ರೇಮ ಬಾವನೆಗಳು ಉಪಯುಕ್ತ ರಾಸಾಯನಿಕಗಳನ್ನ ಬಿಡುಗಡೆ ಮಾಡಿ ಆರೋಗ್ಯವರ್ಧನೆಗೆ ಸಹಕಾರಿಯಾದದ್ದು ತಿಳಿದುಬಂದಿದೆ. ಅಂದರೆ ಶಾಂತ ಮನಸ್ಕರಲ್ಲಿ ರೋಗಕಾರಕಗಳನ್ನು (ಆ್ಯಂಟಿಜೆನ್) ನಾಶಪಡಿಸಲು ಬೇಕಾಗುವ ಆ್ಯಂಟಿಬಾಡಿಗಳು ವೇಗವಾಗಿ ಉತ್ಪತ್ತಿಯಾಗುವವು. ಹಾಗಾದರೆ ತರಗತಿಗಳಲ್ಲಿ ಸಮಚಿತ್ತವಾಗಿ ಏಕಾಗ್ರತೆಯಿಂದ ಕೇಳುವುದು ಆರೋಗ್ಯವರ್ಧಕವೂ ಹೌದು!
ಹೇಗೆ ಮನಸ್ಸು ಜೀವರಾಸಾಯನಿಕ ಕ್ರಿಯೆಯನ್ನ ಉತ್ತೇಜಿಸಿ ವಿವಿಧ ರಾಸಾಯನಿಕಗಳನ್ನ ಉತ್ಪತ್ತಿ ಮಾಡುವುದೋ ಹಾಗೆ ಇದರ ವಿರುದ್ಧ ಪ್ರಕ್ರಿಯೆಯೂ ಸತ್ಯ. ಅಂದರೆ ದೆಹದಲ್ಲಿನ ಪ್ರತಿಯೊಂದು ರಾಸಾಯನಿಕವೂ ಮನಸ್ಸಿನ ಮೇಲೆ ಪ್ರಭಾವ ಬೀರುವುದು! ಈನಿಟ್ಟಿನಲ್ಲಿ ನಮ್ಮ ಆಹಾರ ಶುದ್ದಿಯು ಆರೋಗ್ಯ ಮತ್ತು ನಮ್ಮ ಮನಸ್ಥಿತಿಯನ್ನು ಬಿಂಬಿಸುತ್ತದೆ. " ನೀನು ಏನು ತಿನ್ನುವೆಯೋ ಅದೇ ಆಗಿರುವೆ" ಎನ್ನುವ ಪೂರ್ವಜರ ಮಾತು ವೈಜ್ಞಾನಿಕವಾಗಿಯೂ ಸರಿ.
ಆಶ್ಚರ್ಯವೆಂದರೆ ಈಗ ಮಾನವ ವೈಜ್ಞಾನಿಕ ಪ್ರಯೋಗ, ವಿಶ್ಲೇಷಣೆಗಳ ಮೂಲಕ ಕಂಡುಕೊಳ್ಳುತ್ತಿರುವುದನ್ನ ನಮ್ಮ ಹಿಂದಿನವರು ತುಂಬಾ ಮೊದಲೇ ಮನಗಂಡಿದ್ದರು. ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸ, ಸಾತ್ವಿಕ ಅಹಾರ ಹಾಗು ಜೀವನ ಮೌಲ್ಯಗಳನ್ನ ವಿಹಿತವಾಗಿಸಿದ್ದರು. ಹೆಮ್ಮೆಯ ಸಂಗತಿ ಎಂದರೆ ಜಗತ್ತಿನ ಎಲ್ಲರೂ ಈಗ ಭಾರತೀಯ ಚಿಂತನೆ, ಪದ್ದತಿಗಳ ಕುರಿತು ಆಸಕ್ತರಾಗುತ್ತಿದ್ದಾರೆ. ಆದರೆ ನಾವು.......?
ಆತ್ಮೀಯರೆ, ವಿಜ್ಞಾನದ ಅದ್ಭುತ ವಿಸ್ಮಯಗಳು ಮನುಷ್ಯನ ಅಗಾಧ ಮನೊಚೈತನ್ಯದಿಂದಲೇ ಸೃಷ್ಟಿಗೊಂಡದ್ದಾಗಿವೆ. ಈ ಪ್ರತಿಯೊಂದು ಕ್ರಿಯೆಗಳಲ್ಲಿ ರಸಾಯನಶಾಸ್ತ್ರ ಹಾಸುಹೊಕ್ಕಾಗಿದೆ. ಇದು ಎಷ್ಟು ಮೂಲಭೂತವಾದದ್ದೆಂದರೆ ನೀವು ಈ ಬರಹವನ್ನ ಓದಲು ಸಾಧ್ಯವಾಗುತ್ತಿರುವುದೂ ರಾಸಾಯನಿಕ ಕ್ರಿಯೆಯಿಂದಲೇ! ಆಲೋಚಿಸಿರಿ...(ಫೋಟೊಕೆಮಿಕಲ್ ರಿಯಾಕ್ಷನ್). ಇಂಥಹ ಮೂಲಭೂತ ವಿಜ್ಞಾನದ ಶಾಖೆಯಾದ "ರಸಾಯನಶಾಸ್ತ್ರ" ದ ಅಗಾಧತೆಯನ್ನ ಜನರಲ್ಲಿ ಪ್ರಚುರಪಡಿಸಲು ಈ ವರ್ಷ ಪೂರ್ತಿ (2011) ಹಬ್ಬದಂತೆ ಆಚರಿಸುವ ನಿರ್ಣಯವಾಗಿದೆ. ಈ ಕುರಿತು ನಮ್ಮ ಹಿಂದಿನ ಆವೃತ್ತಿಯಲ್ಲಿಯೇ ಬರೆಯಲಾಗಿತ್ತು. ಈ ಹೊಸ ಶೈಕ್ಷಣಿಕ ವರ್ಷದಲ್ಲಿ ಹೊಸ ವಿದ್ಯಾರ್ಥಿಗಳ ಸಾರಥ್ಯದಲ್ಲಿ (ಸಂಪಾದಕತ್ವದಲ್ಲಿ) ನಮ್ಮ ಎರಡನೇ ಆವೃತ್ತಿಯನ್ನ ಕೆಲವು ಹೊಸ ಸೇರ್ಪಡೆಯೊಂದಿಗೆ ಸಾದರಪಡಿಸುತ್ತಿದ್ದೇವೆ.
ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗಾಗಿ ಎರಡು ವಿಶೇಷ ಅಂಕಣಗಳನ್ನ ಪರಿಚಯಿಸುತ್ತಿದ್ದೇವೆ. ವಿದ್ಯಾರ್ಥಿಗಳ ಸಹಜ ಕುತೂಹಲದ ಪ್ರಶ್ನೆಗಳಿಗಾಗಿ "ರಸಕೋಶ"ವನ್ನ ವಿಭಾಗದಲ್ಲಿಟ್ಟಿದ್ದೇವೆ. ನಮ್ಮೆಲ್ಲರ ಶ್ರಮ, ಪ್ರಯತ್ನಗಳ ಸಾರ್ಥಕತೆ ಅಭಿಮಾನಿ ಓದುಗರ ಮೇಲೆ ನಿಂತಿದೆ.
ಆಸಕ್ತಿ, ಏಕಾಗ್ರತೆಯಿಂದ ಓದುತ್ತಿರುವ ನಿಮ್ಮಲ್ಲಿ ಜೀವರಾಸಾಯನಿಕಕ್ರಿಯೆಗಳು ಶಾಂತವಾಗಿ ಸಾಗಿ ಆರೋಗ್ಯವರ್ಧಿಸಲಿ ಎಂದು ಹಾರೈಸುತ್ತ ಈ ಸಂಪಾದಕೀಯಕ್ಕೆ ಪೂರ್ಣವಿರಾಮ ಹಾಕುತ್ತಿದ್ದೇನೆ.
-ಪ್ರಧಾನ ಸಂಪಾದಕರು,
-ಶ್ರೀ ಗಣೇಶ ಎಸ್. ಹೆಗಡೆ, ಹಂಗಾರಖಂಡ
ರಸಾಯನಶಾಸ್ತ್ರ ವಿಭಾಗ, ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಶಿರಸಿ.
No comments:
Post a Comment