Friday, 5 August 2022

ಎಂಟನೇ ಅವತರಣಿಕೆಯ (2017 ) ಸಂಪಾದಕೀಯ

ಆತ್ಮೀಯರೇ,

ಅತ್ಯುತ್ಸಾಹಿ ವಿದ್ಯಾರ್ಥಿಗಳನ್ನೊಳಗೊಂಡಿದ್ದರೂ ಕಾರಣಾಂತರಗಳಿಂದಾಗಿ ಕಳೆದ ವರ್ಷದ ಕೆಮ್-ವಿಝ್ನ್ನು ತರಲಾಗದಿದ್ದಕ್ಕೆ ವಿಷಾದವಿದೆ ಅದರ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನ ಸಂಪಾದಕನಾಗಿ ಹೆಗಲಿಗೇರಿಸಿಕೊಳ್ಳುವೆ. ಹಾಗಂತ ಹಿಂದಿನ ವಿದ್ಯಾರ್ಥಿಗಳು ಕೆಲಸವನ್ನೇ ಮಾಡಲಿಲ್ಲವೆಂದಲ್ಲ ಒಂದು ಉತ್ತಮ ಸಂದರ್ಶನಕಾರ್ಯವನ್ನು ಮಾಡಿ ಸಂದರ್ಶನ ಲೇಖನವನ್ನ ಸಂಪಾದಿಸಿದ್ದಾರೆ, ಆದರೆ ಶೈಕ್ಷಣಿಕ ಬದ್ಧತೆಗಳಾದ ಸೆಮಿನಾರು, ಪ್ರೊಜೆಕ್ಟು, ಸಿ..ಸಿ. ಕೋರ್ಸಿನ ಕೈಗಾರಿಕೋದ್ಯಮಗಳ ಸಂದರ್ಶನ ಇವುಗಳೊಂದಿಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಾದ ನಾಟಕ, ಸಾಕ್ಷ್ಯ ಚಿತ್ರನಿರ್ಮಾಣ, ಕಾಲೇಜಿನ ರಾ.ಸೇ.ಯೋ.ದಲ್ಲಿ ಸಕ್ರಿಯ ಬಾಗವಹಿಸುವಿಕೆ ಇವೇ ಮುಂತಾದ ಸಕಾರಣಗಳಿಂದಾಗಿ ಸಾಧ್ಯವಾಗಲಿಲ್ಲ. ಸಂದರ್ಶನ ಲೇಖನಕ್ಕಾಗಿ ರಸಾಯನಶಾಸ್ತ್ರ, ಕೃಷಿ, ಪರಿಸರ, ಸಣ್ಣ ಕೈಗಾರಿಕೆ ವಿಷಯಗಳಲ್ಲಿನ ಪರಿಣಿತರನ್ನು ಇದೇ ಮೊದಲಬಾರಿಗೆ ಬಿಟ್ಟು ಕಲೆ, ಸಾಹಿತ್ಯ, ಚಾರಣಗಳಿಗೆ ಸಂಬಂಧಿಸಿದ ವ್ಯಕ್ತಿಯೋರ್ವರನ್ನು ಆಯ್ಕೆಮಾಡಿ ಸಂದರ್ಶಿಸುವಮೂಲಕ ಒಂದು ಅಮೋಘ ಅನುಭವಕ್ಕೆ ತೆರೆದುಕೊಳ್ಳುವಂತೆ ಮಾಡಿದ್ದು ಅವರ ವಿಶೇಷತೆ. ಅಂತರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಗ್ರಾಹಕಾರಾದ ಶ್ರೀ ನಾಗೇಂದ್ರ ಮುತ್ಮುರ್ಡುರವರ ಸಂದರ್ಶನ ಲೇಖನವನ್ನ ತುಂಬಾ ತಡವಾದರೂ ಅವರಿಗೆ ಕಜಗಿಸ್ತಾನದಲ್ಲಿ ನಡೆದ ಫೋಟೋಗ್ರಫಿ ಸ್ಪರ್ಧೆಯಲ್ಲಿ (ಮಕ್ಮಲ್ ಮರಗುಪ್ಪಿ ಪಕ್ಷಿಯ ಪೋಟೊಕ್ಕೆ) ಬಂಗಾರದ ಪದಕ ಸಂದ ಸಂದರ್ಭದಲ್ಲಿ ಎರಡು ಕಂತಿನಲ್ಲಿ ಪ್ರಕಟಿಸಲಿದ್ದೇವೆ.

ಸದಾ ಕ್ಲಾಸು, ಲ್ಯಾಬು, ಪ್ರೊಜೆಕ್ಟು, ಸೆಮಿನಾರುಗಳಲ್ಲಿ ವಿದ್ಯಾರ್ಥಿಗಳ ಅಂತಸತ್ವ ನಾರದೆ ಅರಳಿಸಲು, ಕಲೆ ಸಾಹಿತ್ಯಗಳು ವಿಜ್ಞಾನಕ್ಕೆ ಪೂರಕವೆಂಬ ಹಿನ್ನಲೆಯಲ್ಲಿ, ಬಾರಿಯೂ ನಮ್ಮ ಸಂದರ್ಶನಕ್ಕಾಗಿ ಜಾಲಿಮನೆಯ ವೆಂಕಣ್ಣನವರ ಮನೆಯೆಂಬ ಕಲಾಸೌಧಕ್ಕೆ ತೆರೆಳಿದ್ದೆವು ಜೊತೆಗೆ ಹಿತ್ಲಳ್ಳಿಯ ಒಬ್ಬ ಕೃಷಿ ವಿಜ್ಞಾನಿಯವರನ್ನೂ ಸಂದರ್ಶಿಸಿದೆವು. ಅಮೋಘ ಕ್ಷಣಗಳನ್ನ ಕಣ್ಮುಂದೆ ಇನ್ನೊಮ್ಮೆ ಘಟಿಸುವಂತೆ ಅಕ್ಷರಗಳಲ್ಲಿ ರಸವತ್ತಾಗಿ ನಿರೂಪಿಸಿದ್ದಾಳೆ ನಮ್ಮ ರಸಬಳಗದ ಕುಮಾರಿ ಶ್ರದ್ಧಾ.

ಕುಮಾರ ವಿನಾಯಕ ಮತ್ತು ಶ್ರೀಹರ್ಷ ಇವರ ಕಾಲೇಜಾನುಭವಗಳು ತಿಳಿಹಾಸ್ಯದ ವಿಡಂಬನೆಗಳೊಂದಿಗೆ ಓದಿಸಿಕೊಳ್ಳುತ್ತ ಸಾಗುತ್ತವೆ.

 ಕೃಷಿವಿಜ್ಞಾನಿಯಾಗಿದ್ದು ಕಂಪನಿಯಾಳಾಗಿ ದುಡಿಯದೇ ತಮ್ಮ ತೋಟದಲ್ಲೇ ಇರುವ ಕನಿಷ್ಟ ಸೌಕರ್ಯಗಳಲ್ಲಿ ಜಾಣತನದಿಂದ ಜೈವಿಕತಂತ್ರಜ್ಞಾನದ ಪ್ರಯೋಗಾಲಯವನ್ನು ನಿರ್ಮಿಸಿಕೊಂಡು ಇತರರಿಗೆ ಮಾದರಿಯಾಗಿರುವ ಡಾ. ತ್ರಯಂಬಕ ಹೆಗಡೆಯವರ ಕುರಿತು ಕುಮಾರಿ ನಮ್ರತಾ ಹಾಗು ಸಂಗಡಿಗರು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ. ‘ಯುದ್ಧ ಮತ್ತು ರಸಾಯನಶಾಸ್ತ್ರಲೇಖನವನ್ನು ಕುಮಾರ ವಿನಾಯಕ ಆರ್. ಹಾಗು ಕುಮಾರಿ ಭಾರ್ಗವಿ ಇವರು ಸಂಪಾದಿಸಿದ್ದಾರೆ. ಬಳಗದೆಲ್ಲ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದಾಗಿ ರಸಸಂಚಿಕೆಯು ರಾಷ್ಟ್ರೀಯ ವಿಜ್ಞಾನ ದಿನದಂದು ಅನಾವರಣಗೊಳ್ಳುತ್ತಿದೆ. ಇಲ್ಲಿಯ ಎಲ್ಲವನ್ನೂ ಓದಿ, ಆಸ್ವಾದಿಸಿ, ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿರೆಂದು ಎಲ್ಲರಲ್ಲಿ ಕಳಕಳಿಯ ವಿನಂತಿ

“ಅರಿವು-ಅಚ್ಚರಿ” ?!

ಜನಪ್ರಿಯ ವಿಜ್ಞಾನ ಸಂವಹನೆ / ವಿಜ್ಞಾನವನ್ನ ಜನಪ್ರಿಯಗೊಳಿಸುವ ಕಾಯಕ / ಶಾಲೆಯಾಚೆಗಿನ ಕಲಿಕೆ ಎಲ್ಲ ಉದ್ಧೇಶದೊಂದಿಗೆ ಹಿಂದೆ ನಮ್ಮ ನೆಚ್ಚಿನ ವಿದ್ಯಾರ್ಥಿಯಾಗಿದ್ದ, ಪ್ರಸ್ತುತ ಭೌತಶಾಸ್ತ್ರ ಅಧ್ಯಾಪಕರಾದ ಶ್ರೀ ವಸಂತ ಹೆಗಡೆ, ಚಿಕ್ಕೊತ್ತಿ ಇವರು ಪ್ರಾರಂಭಿಸಿದ ಒಂದು ಬಳಗ. “ಅರಿವು-ಅಚ್ಚರಿರೂಪುಗೊಳ್ಳಲು ಮೂಲ ಪ್ರೇರಣೆಯೆಂದರೆ ಜನಪ್ರಿಯ ವಿಜ್ಞಾನ ಸಂವಹನಕಾರರಾದ ಬೆಂಗಳೂರಿನ ಪ್ರೊ. ಎಂ. ಆರ್. ನಾಗರಾಜುರವರು ಆರಂಭಿಸಿದಸರಸ-ಸಂವಹನವೆಂಬ ರಾಜ್ಯಮಟ್ಟದ ಸಂಘಟನೆ. ಒಂದು ರೀತಿಯಲ್ಲಿ ಶಾಲೆಯಾಚೆಗಿನ ಕಲಿಕೆಗೇ ಒತ್ತುಕೊಡುತ್ತಿರುವ ಕೆಮ್-ವಿಝ್ ನಲ್ಲಿ ಅರಿವು-ಅಚ್ಚರಿ ಬಳಗದ ಕುರಿತು ಒಂದೆರಡು ಪ್ರಾಸ್ತಾವಿಕ ನುಡಿಗಳನ್ನ ದಾಖಲಿಸುವುದು ಅಪ್ರಸ್ತುತವಾಗಲಾರದು:  

ವ್ಯಾವಹಾರಿಕತೆಯೇ ಹೆಚ್ಚುತ್ತಿರುವ ಇಂದಿನಕಾಲದಲ್ಲಿ ಆನಂದಾನುಭೂತಿಯನ್ನ ವಸ್ತುಗಳಲ್ಲಿ ಹುಡುಕಿ ಸೋಲುತ್ತಿದ್ದೇವೆ. ತೀವ್ರ ವವ್ಯಾವಹಾರಿಕತೆಯು ಸಿನಿಕತನಕ್ಕೆ ದಾರಿ ಮಾಡಿದೆ! ಸಿನಿಕತನವು ಈಗ ಚಿಕ್ಕ ಮಕ್ಕಳು / ವಿದ್ಯಾರ್ಥಿಗಳಿಗೂ ವ್ಯಾಪಿಸುವ ಅಪಾಯದ ಮಟ್ಟವನ್ನ ತಲುಪಿದೆ! ವಿದ್ಯಾರ್ಥಿಗಳು ಬರಿ ಪರೀಕ್ಷೆಯಲ್ಲಿನ ಮಾಕ್ರ್ಸಿನ ಹಿಂದೆ ಬಿದ್ದುಮಾಕ್ರ್ಸ್ವಾದಿಗಳಾಗಿದ್ದಾರೆ?!  ಕಲಿಕೆಯೂ ಬರಿ ಲೆಕ್ಕಾಚಾರದ ಮೇಲೆ ನಡೆಯುತ್ತಿದೆ. ಒಟ್ಟಾರೆ ಸಮಾಜ ಸಂವೇದನಾಶೀಲತೆಯನ್ನೇ ಕಳೆದುಕೊಳ್ಳುವತ್ತ ಸಾಗಿದೆಯೇ? ಎಂಬ ಅನುಮಾನ ಕಾಡುವಂತಾಗಿದೆ. ವಯಕ್ತಿಕ ಅಭಿಪ್ರಾಯದಲ್ಲಿ ಸಂತೋಷ / ಆನಂದನಾನುವನ್ನ ಮರೆತ ಸಂದರ್ಭದಲ್ಲಿ ಆಗುವಂತದ್ದು. ಬೆರಗು / ಅಚ್ಚರಿ / ವಿಸ್ಮಯ ನಮ್ಮನ್ನು ಮೀರಿದ ಪ್ರಕೃತಿ, ಸಂಗತಿಗಳÀನ್ನು ನೋಡಿದಾಗ ಇಲ್ಲವೇ ನಮ್ಮ ಸಾಮಾನ್ಯ ಗ್ರಹಿಕೆಯ ನಿರೀಕ್ಷೆಗಿಂತ ವ್ಯತಿರಿಕ್ತವಾದದ್ದು ಘಟಿಸಿದಾಗ ಆಗುವುದು. ಒಟ್ಟಾರೆ ಮೈಮರೆವ ಸಂಗತಿ, ಸಂದರ್ಭಗಳೆಲ್ಲ ಆನಂದಾನುಭೂತಿ ನೀಡುವವೆಂದು ಹೇಳಬಹುದಲ್ವೇ?... (ಉದಾಹರಣೆಗೆ ಪ್ರಕೃತಿಯ ಅಗಾಧತೆ, ಸೂಕ್ಷ್ಮತೆ ಹಾಗೂ ಸಂಕೀರ್ಣತೆಗಳನ್ನು ಕಂಡಾಗ ಆಗುವಂತದ್ದು) ಇಂತಹ ಅಚ್ಚರಿಗಳು ಸಂಗತಿಗಳನ್ನರಿಯಲು ಪ್ರೇರೇಪಿಸುವವು. ಹಾಗೆಯೇ ಅರಿವೂ ಕೂಡ (ನಾನರಿತೆನೆಂಬ ಅಹಂಭಾವ ಕಾಡದಿದ್ದರೆ) ಆನಂದಕ್ಕೆ ದಾರಿ. ಆದರೆ ಅರಿವಿನಿಂದ ತೀವ್ರ ತರ್ಕಕ್ಕೀಡಾದರೆ ಅದು ಆನಂದಕ್ಕೆ ಅಡ್ಡಿಯೂ ಆದೀತು! ಜೊತೆಗೆ ಬೆರಗು ಮತ್ತು ಅಚ್ಚರಿಯಾಗಲೂ ಒಂದಿಷ್ಟು ಅರಿವು ಬೇಕೇ ಬೇಕು. ರಸಾಯನಶಾಸ್ತ್ರವನ್ನ ಮೆಚ್ಚಬೇಕಾದರೆ ಅದನ್ನೊಂದಿಷ್ಟು ತಿಳಿದಿರಲೇಬೇಕಲ್ವೇ? ಸಂಗೀತವನ್ನು ಆಸ್ವಾದಿಸಲು ಅದರ ಗಂಧಗಾಳಿಯ ಪರಿಚಯವಿರಬೇಕು. ಹಾಗಂತ ತರ್ಕದ ಜಿದ್ದಾಜಿದ್ದಿಗೆ ಬಿದ್ದಾಗ ಆನಂದ ಮಾಯವಾಗುವುದು!

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಯುರೋಪಿನ ಹಲವೆಡೆಗಳಲ್ಲಿ ವಿಜ್ಞಾನಿಗಳ ಸಾರ್ವಜನಿಕ ಭಾಷಣಗಳನ್ನ ಆಯೋಜಿಸುವ ಪರಿಪಾಟವಿತ್ತು. ಜನರು ಟಿಕೇಟ್ ಖರೀದಿಸಿ ಉಪನ್ಯಾಸಗಳನ್ನಾಲಿಸಲು ಹೋಗುತ್ತಿದ್ದರೆಂಬ ಉಲ್ಲೇಖವಿದೆ! ‘ಹಂಫ್ರಿ ಡೇವಿಯವರ ಉಪನ್ಯಾಸದಿಂದ ಪ್ರೇರಿತರಾಗಿಯೇಮೈಕೆಲ್ ಫ್ಯಾರಡೆಎಂಬ ಅದ್ಭುತ ವಿಜ್ಞಾನಿ ಹೊರಹೊಮ್ಮಿದರೆಂಬುದು ವಾಸ್ತವ ಸಂಗತಿಯಾಗಿದೆ. ಇಂಗ್ಲೇಂಡಿನ ರಾಯಲ್ ಕೆಮಿಕಲ್ ಸೊಸೈಟಿಯನ್ನು ಪರಿಚಾರಕನಾಗಿ ಪ್ರವೇಶಿಸಿದ ಫ್ಯಾರಡೆಯು ರಾಯಲ್ಸೊಸೈಟಿಯ ಅಧ್ಯಕ್ಷ ಸ್ಥಾನದವರೆಗೆ ತಲುಪಿದರೆಂಬುದು ಎಲ್ಲರಿಗೂ ತಿಳಿದ ಸಂಗತಿ. ತುಂಬಾ ರಾಯಲ್ ಆಗಿದ್ದ ರಾಯಲ್ ಕೆಮಿಕಲ್ ಸೊಸೈಟಿಯ ಬಾಗಿಲನ್ನು ಮಕ್ಕಳಿಗೂ ತೆರೆದಿಟ್ಟು ಜನಪ್ರಿಯ ವಿಜ್ಞಾನ ಸಂವಹನೆ ಪ್ರಾರಂಭಿಸಿದ ಕೀರ್ತಿ ಫ್ಯಾರಡೆಯವರಿಗೆ ಸಲ್ಲುತ್ತದೆ. ಫ್ಯಾರಡೆಯವರು ಬರೀ ಒಂದು ಉರಿಯುತ್ತಿರುವ ಮೇಣದ ಬತ್ತಿಯಮೇಲೆ ಆರು ಉಪನ್ಯಾಸಗಳನ್ನು ನೀಡಿದ್ದಾರೆಂಬುದು ಅಚ್ಚರಿಯ ಸಂಗತಿ. ಮೇಡಂ ಕ್ಯೂರಿಯವರು ಕೂಡ ಜನಪ್ರಿಯ ವಿಜ್ಞಾನ ಸಂಹನೆಯಲ್ಲಿ ನಿರತರಾಗಿದ್ದರೆಂಬುದು ವಿಜ್ಞಾನದ ಇತಿಹಾಸದಲ್ಲಿ ದಾಖಲಾಗಿದೆ. ಕೆಲದಿನಗಳ ಹಿಂದೆ ಅರಿವು-ಅಚ್ಚರಿ ಬಳಗದಲ್ಲಿಬೆಂಕಿಯ ಬಣ್ಣಾಕಾರಗಳುಎಂಬ ಉಪನ್ಯಾಸ ನೀಡುವ ಸದವಕಾಶ ಲಭಿಸಿದ್ದು ಇಷ್ಟೆಲ್ಲವನ್ನೂ ತಮ್ಮೊಂದಿಗೆ ಹಂಚಿಕೊಳ್ಳಲು ಪ್ರೇರಣೆಯಾಯ್ತು.

ಒಟ್ಟಿನಲ್ಲಿ ನಮ್ಮಲ್ಲಿನ ಸಂವೇದನಾಶಿಲತೆಯನ್ನು ಎಚ್ಚರಿಸುವುದರ ಜೊತೆಗೆ, ‘ಅರಿವುßà ಅಚ್ಚರಿಯಿಂದ ಕೂಡಿದ ಕಲಿಕೆಯಲ್ಲಿ ಮೈಮರೆತು ಆನಂದಹೊಂದುವ ಅಗಾಧ ಸಾಧ್ಯತೆಗಳಿವೆ ಎಂದು ಪರಿಚಯಿಸಿ ಕಲಿಕೆಯನ್ನು ಅನಾಯಾಸಗೊಳಿಸಿ, ಅದರಲ್ಲಿ ಆಸಕ್ತಿ ಮೂಡಿಸುವಂತೆ ಮಾಡುವ ಕ್ಯಾಟಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವುದೇ ಬಳಗದ ಜೊತೆಗೆ ನಮ್ಮ ರಸಬಳಗದ ಮೂಲೋದ್ಧೇಶವೂ ಆಗಿದೆ.

ಕೊನೆಯದಾಗಿ, ವಿಜ್ಞಾನವು ಬರಿಯ ಸುಸಜ್ಜಿತ ಪ್ರಯೋಗಶಾಲೆಗಳಲ್ಲಷ್ಟೇ ಅಡಗಿಲ್ಲ, ಬದಲಿಗೆ ಅದು ನಮ್ಮ ದೈನಂದಿನ ಆಗುಹೋಗುಗಳನ್ನ ಸೂಕ್ಷ್ಮಾವಲೋಕನ ಮಾಡುತ್ತ ಅರಿಯುವ ಹಂಬಲದಲ್ಲಿಯೂ ಇದೆ ಎಂದು ಹೇಳುತ್ತಾ ಒಂದೆರಡು ಚಿಕ್ಕ ಪ್ರಶ್ನೆಗಳನ್ನ ತಮ್ಮೆದುರಿಗೆ ಇಡುತ್ತಾ ಆಲೋಚನೆಗೆ ಪ್ರೇರೇಪಿಸುತ್ತಿದ್ದೇನೆ:

ಬಣ್ಣ ಬಣ್ಣದ ಗಾಜಿನ ಬಳೆಗಳನ್ನ ಒಡೆದು ಪುಡಿ ಮಾಡಿ ಪೌಡರಿನಂತೆ ಮಾಡಿದರೆ ಅದು ಬಣ್ಣ ಕಳೆದುಕೊಳ್ಳುವುದೇಕೆ?!!!

ಬೆಂಕಿಯಲ್ಲಿ ಇಂಧನವು ಅನಿಲರೂಪದಲ್ಲಿರುವುದೆಂಬುದನ್ನು ಸರಳವಾಗಿ ಹೇಗೆ ನಿರೂಪಿಸುವಿರಿ?

ಗೋಬರ್ ಗ್ಯಾಸ್ ಉರಿಯುವಾಗ ಶಬ್ದ ಮಾಡುವುದೇಕೆ?

ಊದಿನಕಡ್ಡಿಯಿಂದ ಗ್ಯಾಸ್ ವಲೆಯನ್ನು ಹಚ್ಚಲಾಗುವುದಿಲ್ಲವೇಕೆ?!!!

ಉತ್ತರದ ಹುಡುಕಾಟ ಆನಂದದಾಯಕವಾಗಿರಲೆಂಬುದು ನನ್ನ ಹಾರೈಕೆ.

-ಶ್ರೀ ಗಣೇಶ ಎಸ್. ಹೆಗಡೆ, ಹಂಗಾರಖಂಡ

ಪ್ರಧಾನ ಸಂಪಾದಕರು, “ಕೆಮ್-ವಿಝ್

No comments:

Post a Comment

Environmental Pollution