Teacher’s Corner
“ಸೈಕಲ್ಲೇರಿ ಸ್ವಾಸ್ಥ್ಯದೆಡೆಗೆ! ಸ್ವಸ್ಥ ಭಾರತ ಆಂದೋಲನ”
ಹೀಗೊಂದು ಸ್ವಗತ-
ಬೆಳಗಿನ ಶಾಲೆಗೆ ಹೋಗುವ ಸಮಯದಲ್ಲಿ ನಮ್ಮನೆಯ ‘ಗಡಿಯಾರ’ ನಮ್ಮನ್ನೆಲ್ಲಾ ನೋಡುತ್ತಾ..... ನಮ್ಮ ಓಡಾಟ, ಕುಣಿದಾಟ, ಕೂಗಾಟ....ಕೆಲವೊಮ್ಮೆ ನಮ್ಮ ಟಾಮ್ ಆಂಡ್ ಜರ‍್ರಿಗಳ ಬಡಿದಾಟಗಳನ್ನು ನೋಡುತ್ತಾ ಬೆರಗಿನಲ್ಲಿ ಮೈಮರೆತು ಬಿಡುತ್ತದೆ! ಹೇಗೂ ನಮ್ಮ ಗಡಿಯಾರ ನಿಧಾನವಾಗಿದೆ ಎಂದು ನಮ್ಮ ತೀವ್ರ ಚಟುವಟಿಕೆಗಳು ಕೆಲಕಾಲ ವೇಗ ಕಳೆದುಕೊಂಡು ಎಚ್ಚರ ತಪ್ಪಿದಾಗ, ಮೊಲವನ್ನು ಸೋಲಿಸಿದ ಆಮೆಯಂತೆ ನಮ್ಮ ಗಡಿಯಾರಣ್ಣನೇ ಗಡಿ ಮುಟ್ಟಿ ಗೆಲುವಿನ ನಗೆಬೀರಿದಾಗ .... ಮತ್ತೆ ನಮಗೆ ಬಿಸಿ ಹತ್ತಿ ಗಡಿಯಾರಣ್ಣನ್ನ ಮತ್ತೆ ನಿಲ್ಲಿಸುವಂತೆ ಚಡಪಡಿಕೆ ಶುರು.... ಅರೆಬೆಂದ ದೋಸೆನೋ ಇನ್ನೇನನ್ನೋ ಯಜ್ಞಕುಂಡಕ್ಕೆ ಸುರುವಿ ಓಡಿ ಹೋಗಿ ಸ್ಕೂರ‍್ರರ‍್ರರ‍್ರನ್ನೇರಿ ದೌಡಾಯಿಸುವಾಗ ಯಾರೋ ನಮ್ಮನ್ನು ನೋಡಿ ನಕ್ಕಂತೆ ಭಾಸ?! ಓ...... ಅದೇ ಗಡಿಯಾರಣ್ಣನ ಹುಸಿ ನಗೆ!
ಮುಂದೆ ಜರ‍್ರಿ ಹಿಂದೆ ಟಾಮ್ ಕೂತಮೇಲೆ ನಮ್ಮ ವೇಗದೂತಕ್ಕೆ ಗಾಳಿಯೂ ಕೂಡ ಪಕ್ಕಕ್ಕೆ ಸರಿದು ದಾರಿ ಬಿಟ್ಟುಕೊಡುವುದು! ಆದರೆ ಈ ನಮ್ಮ ರೇಸಿನ(ಗಡಿಯಾರಣ್ಣನೊಂದಿಗಿನ) ಪರಿವೆಯೇ ಇಲ್ಲದೆ ಒಂದು ತಿರುವಿನಲ್ಲಿ ದಾರಿಯಲ್ಲೇ ಮಲಗಿದ ನಾಯಿಯೊಂದ ಕಂಡು ಮನದಲ್ಲೇ ಶಪಿಸಿದೆ.. ಹಾಳಾದ ನಾಯಿ ದಾರಿಲ್ಲೇ ಮಲ್ಗಬೇಕೇ? ಅಂತೂ ಅದನ್ನ ದಾಟಿದಮೇಲೊಂದು ರೋಡ್ಹಂಪು..... ಶಿವ...ಶಿವಾ.... ಇವ್ರಿಗೆಲ್ಲಾ ಇಷ್ಟೂ ಗೊತ್ತಾಗಲ್ವೆ ಅಂತ ಗೊಣಗುತ್ತಾ ಧಾವಿಸಿದರೆ ಈಗಷ್ಟೆ ಬಸ್ಸು ಹೋ~~ಯ್ತು... ಅಂತ ರಾಗವಾಗಿ ಉಲಿದವರ ರಾಗ, ನೋಟ ಎರಡೂ ಕಣ್ಗೆಂಪು ಮಾಡಿಸ್ತು. ಹಾಳಾದ ಡ್ರೈವರ್ರಿನಿಗದೇನು ಅಜ್ರೆಂಟು? ಎಂದು ಶಪಿಸುತ್ತಾ ಬಸ್ಸನ್ನು ಓವರ‍್ಟೇಕ್ ಮಾಡಲು ಓವರ‍್ವೇಗದಿಂದ ವೇಗದೂತ ಧಾವಿಸಿದ............
.........ಈ ಎಲ್ಲದರ ನಡುವೆ ಶಾಂತವಾಗಿದ್ದ ಸುಶಾಂತ (ಜರ‍್ರಿ) ಪಪ್ಪಾ ಆ ನಾಯಿನ್ನ ನೀನು ನೋಡಿದ್ಯಾ? ಎಂದ. ಇಲ್ಲ ಗುರಾಯಿಸಿದೆ ಅಂದೆ, ಅದು ಚೆಂದ ಇದ್ದು ಪಪ್ಪಾ, ನನ್ನ ನೋಡಿ ನಕ್ಕಿತು ಅಂದ!!! ಆಶ್ಚರ್ಯವಾಯ್ತು ನನಗೆ, ಆಂ ಹೌದಾ.. ಎಂದೆ. ತಿರುಗಿ ಬರುವಾಗ ಆ ನಾಯಿ ಅಲ್ಲೇ ಮಲಗಿತ್ತು, ನಾನು ನಿಧಾನವಾಗಿದ್ದೆ. ಅದನ್ನೇ ನೋಡಿದೆ ಹೌದಲ್ಲಾ ನಾಯಿ ಚೆಂದ ಇದೆ, ನಾ ನೋಡುವುದನ್ನ ಗಮನಿಸಿದ ಅದು ತನ್ನದೇ ರೀತಿಯಲ್ಲಿ ನಕ್ಕಿತು, ಸಂವಹಿಸಿತು. ನಾನು ಗಮನಿಸದಿರುವುದನ್ನ ಸುಶಾಂತ ಕೂಡಲೇ ಗ್ರಹಿಸಿದನಲ್ಲ ಎಂದು ಆಶ್ಚರ್ಯವಾಯ್ತು. ಹಾಗೇ ಹೋಗ್ತಾ ಗಿಡ ಮರಗಳನ್ನ ನೋಡ್ದೆ ಅರೆ ಅವೂ ಚೆಂದವಾಗೇ ಕಂಡವು. ಆಕಾಶವನ್ನ ಗಮನಿಸಿದೆ ಸೂರ್ಯನ ಬೆಳಕಿನಲ್ಲಿ ಅದ್ಭುತವಾಗಿ ಗೋಚರಿಸಿತು, ಸರಿಯಾಗಿ ಆಕಾಶವನ್ನೂ ಇತ್ತೀಚೆಗೆ ನೋಡಲಿಲ್ಲವೇ ಎಂದೆನಿಸಿತು. ಮಕ್ಕಳಲ್ಲಿ ಪ್ರಕೃತಿಯೊಂದಿಗಿನ / ವಿಶ್ವಾತ್ಮದೊಂದಿಗಿನ ಸಂವಹನೆ ನಮಗಿಂತ ಚೆನ್ನಾಗಿರುವುದೇ? ಚಿಕ್ಕಂದಿನಲ್ಲಿ ಇರುವ ಮುಗ್ದತೆ, ಪೂರ್ವಾಗ್ರಹಪೀಡಿತವಲ್ಲದ ಮನಸ್ಸು ಬೆಳೆದಂತೆ ಮಾಯವಾಗುವುದದೆಂತ ಮಾಯೆ! ಎಂದು ಯೋಚಿಸುತ್ತಾ ಮನಗೆ ಬಂದವನೇ ಸೈಕಲ್ಲಿನಲ್ಲಿ ಕಾಲೇಜಿಗೆ ಹೊರಟೆ, ಪರಿಸರ ಸೌಂದರ್ಯದ ಆಸ್ವಾದನೆ ಮೈ ಮನಕ್ಕೆ ಹಿತವಾಗಿತ್ತು, ಹಳೆಯ ಸಿನಿಮಾ ಹಾಡು ಹೇಗೋ ನೆನಪಾಯ್ತು “ಬಾಳಿಗೊಂದು ಎಲ್ಲೆ ಎಲ್ಲಿದೇ.. ನಿನ್ನಾಸೆಗೆಂದು ಕೊನೆಯಿದೇ..........ನಿಧಾನಿಸು..ನಿಧಾನಿಸು.”... ಗಾಳಿಯನ್ನು ಪ್ರತಿರೋಧಿಸುವಂತೆ ಮಾಡಿ ಓಡುವ ಸ್ಕೂರ‍್ರಿಗಿಂತ
ನಿಃಶ್ಶಬ್ದವಾಗಿ ಗಾಳಿಯನ್ನು ಆಸ್ವಾದಿಸುತ್ತ ಸಾಗುವಂತೆ ಮತ್ತು ರಸ್ತೆ ಬದಿಯಲ್ಲಿದ್ದ ಗಿಡಗಳಲ್ಲಿ ಹೂ ಬಿಡುತ್ತಿರುವುದನ್ನ ಸಂತಸದಿ ಕಣ್ತುಂಬಿಕೊಳ್ಳುತ್ತಾ (ಇಲ್ಲಿಯವರೆಗೆ ಅದು ಗಮನಕ್ಕೆ ಬಂದಿರಲೇ ಇಲ್ಲ!!!) ಸಾಗುವುದು ಆಪ್ಯಾಯವೆನಿಸಿತು. ಈ ನಡುವೆ ಗಡಿಯಾರಣ್ಣನನ್ನು ನೋಡಿದಾಗ ಆಶ್ಚರ್ಯ! ಸಮಯಕ್ಕೆ ಸರಿಯಾಗೇ ಇದ್ದೆ. ಈ ಗಡಿಯಾರಣ್ಣನೊಂದಿಗೆ ಸಖ್ಯ ಸಾಧಿಸುವುದೆಂತು? ಆತನೊಂದಿಗಿನ ಗುದ್ದಾಟದಲ್ಲೇ ಬದುಕು ಸಾಗಿತ್ತಲ್ಲಾ ..... ಗಡಿಯಾರಣ್ಣನೊಂದಿಗೆ ‘ಚಲೇ ಸಾಥ್ ಸಾಥ್’ ಎಂಬಮತೆ ಲಾಗಾಯ್ತಿನಿಂದಲೂ ಸೌಹಾರ್ದ ಸಂಬಂಧ ಹೊಂದಿರುವ ಗುರುವಿನ ಮಾತುಗಳು ನೆನಪಾದವು: “ನಮ್ಮ ಕೆಲಸಗಳು ಸದ್ದಿಲ್ಲದಂತೆ (ಆರ್ಭಟವಿಲ್ಲದೇ) ಮೊಗ್ಗು ಹೂವಾಗಿ ಅರಳುವಂತೆ ಸಹಜವಾಗಿ ನಡೆಯಬೇಕು.. ಸಮಯದ ಎಚ್ಚರದೊಂದಿಗೆ ಕೆಲಸ, ಕರ್ತವ್ಯ, ವಿಶ್ರಾಂತಿಗಳು ನಿರಂತರ ಸಾಗಬೇಕು. ಕೆಲಸ ಮುಗಿದಮೇಲೆ ವಿಶ್ರಾಂತಿ, ಸಂತಸವಲ್ಲ ಬದಲಿಗೆ ಸಂತೃಪ್ತಿಯೊಂದಿಗೇ ನಮ್ಮ ವಿಹಿತ ಕಾರ್ಯಗಳು ಸಾಗಬೇಕು” ಎಂಬ ಮಾತುಗಳು ಅದೆಷ್ಟು ದಿಟ.
ಆದರೆ ಈಗಾಗಿರುವುದೇನು? ರ‍್ರೆöçನ್ನುವ ಸ್ಕೂರ‍್ರಿನಂತಾಗಿದೆ ನಮ್ಮ ಹೆಚ್ಚಿನವರ ಜೀವನ, ಒಮ್ಮೆ ದಿಗಿಲೆದ್ದು ಓಡಿ ಅಮೇಲೆ ಮುಚ್ಚಿಹಾಕಿಕೊಂಡು ಮಲಗಿ ಬಿಡುವಂತೆ, ಅಂದರೆ ಆ ‘ಮೊಲ’ದಂತೆ. ವೇಗದ ಆವೇಗದಲ್ಲಿ ಪ್ರಕೃತಿ ಪ್ರಜ್ಞೆಯನ್ನು ಮರೆತು ದಣಿದು ಆಮೇಲೆ ಶಾಂತ ನಿದ್ದೆಯೂ ಇಲ್ಲದೆ ಒದ್ದಾಡುವುದು ಸಾಮಾನ್ಯವಾಗುತ್ತಿದೆಯೇ? ಬದಲಿಗೆ ಆಮೆಯ ನಿಧಾನ, ಆದರೆ ನಿರಂತರ ಪ್ರಜ್ಞೆ (ಪ್ರಕೃತಿ ಪ್ರಜ್ಞೆ, ಕರ್ತವ್ಯ ಪ್ರಜ್ಞೆ) ಇವು ಸ್ವಸ್ಥ ಜೀವನಕ್ಕೆ ಮಾದರಿಯಲ್ಲವೇ? ಬಹುಷಃ ಹಿಂದಿನವರು ಹೀಗೆಯೇ ಇದ್ದರೆಂದೆನಿಸುತ್ತದೆ, ಆದ್ದರಿಂದ ಪ್ರಗತಿ ಹಾಗೂ ಸ್ವಾಸ್ಥ್ಯ ಎರಡನ್ನೂ ಕಾಪಾಡಿಕೊಂಡರು. ಈಗಿನ ಮೊಲದ ಜೀವನ, ವೇಗದ ಪ್ರಗತಿಯ ಹಂಬಲ ವಿಶ್ವಾತ್ಮಪ್ರಜ್ಞೆಯನ್ನ ಮರೆಸಿ, ಸ್ವ-ಪ್ರಜ್ಞೆಯನ್ನ ಮೆರೆಸಿ ಅಪಾರ ಲೌಕಿಕ ಅನುಕೂಲಗಳೊಂದಿಗೆ ಅಪರಿಮಿತ ಅನಾಹುತಗಳಿಗೂ ದಾರಿ ಮಾಡಿದೆ!
ಆದ್ದರಿಂದ ನನ್ನ ವಿದ್ಯಾರ್ಥಿಗುರುಗಳೊಂದಿಗೆ “ಸೈಕಲ್ಲೇರಿ ಸ್ವಚ್ಛತೆಯೆಡೆಗೆ” ಕಾರ್ಯಕ್ರಮ ಮಾಡಿದಾಗಿನಿಂದ ಈ ‘ಸೈಕಲು’ ನನ್ನನ್ನು ಆಮೆಯಾಗಿಸಿದೆ, ಮೈ-ಮನಗಳಿಗೆ ಉಲ್ಲಾಸ ನೀಡಿದೆ, ಚಿಂತನೆಯನ್ನು ಉದ್ದೀಪಿಸಿದೆ, ಪ್ರಕೃತಿಯೆಡೆಗೆ ಎಳೆದಿದೆ, ಒಟ್ಟಿನಲ್ಲಿ “ಸೈಕಲ್ಲೇರಿ ಸ್ವಾಸ್ಥö್ಯದೆಡೆಗೆ” ಎಂಬAತೆ ನನ್ನö ದಾರಿಯನ್ನು ಬದಲಿಸುತ್ತಿದೆ! ಜೀವನದ ದಾರಿಯೂ ನಿಚ್ಚಳವಾಗುತ್ತದೆ!
ಬರಿ ಒಂದು ಸೈಕಲ್ಲಿನಿಂದ ಎಷ್ಟೊಂದು ಸಾಧ್ಯತೆಗಳಿವೆಯಲ್ಲವೇ? ಸಾಧ್ಯವಿದ್ದವರು ತುಳಿದುನೋಡಿ, ಪ್ರಜ್ಞಾಪೂರ್ವಕವಾಗಿ ತುಳಿದರೆ ಜೀವನದ ಪಯಣ ಸುಗಮವಾದೀತು, ಆನಂದಮಯವೂ ಆಗಬಹುದು?!
ಪ್ರಧಾನಿಯವರ ಮೋಡಿಯಲ್ಲಿರುವ ಭಾರತ “ಸ್ವಚ್ಛ ಭಾರತ ಆಂದೋಲನ”ಕ್ಕೆ ಅಣಿಯಾಗುತ್ತಿದೆ. ಜೊತೆಗೆ ಅಭಿವೃದ್ಧಿಯ ಹರಿಕಾರರೂ ಆಗಿರುವ ಅವರ ಆಶಯದಂತೆ ಅಭಿವೃದ್ಧಿಯ ಪಥ(ವೇಗ)ದಲ್ಲಿ ಸಾಗಲು ಅಣಿಯಾಗಬೇಕಿರುವ ನಮಗೆ ‘ಸ್ವಾಸ್ಥ್ಯ'ದ ಕುರಿತು ಗಂಭೀರವಾಗಿ ಚಿಂತಿಸಲು ಇದು ಸಕಾಲ. ಆದ್ದರಿಂದ “ಸ್ವಚ್ಛ ಭಾರತ ಆಂದೋಲನ”ಕ್ಕೆ ಪೂರಕವಾಗಿ “ಸ್ವಸ್ಥ ಭಾರತ ಆಂದೋಲನ”ಕ್ಕೂ ಪಣತೊಡೋಣವೇ? ಬನ್ನಿ ನಮ್ಮ, ಸಮಾಜದ, ಪ್ರಕೃತಿಯ ಸ್ವಾಸ್ಥö್ಯಕ್ಕೆ ಬದ್ಧರಾಗಿ ಆ ದಿಶೆಯಲ್ಲಿ ಪಯಣಿಸೋಣ.
-ಪ್ರಧಾನ ಸಂಪಾದಕರು ಕೆಮ್-ವಿಝ್.
ಶ್ರೀ ಗಣೇಶ ಎಸ್. ಹೆಗಡೆ, ಹಂಗಾರಖಂಡ
ಸಹಾಯಕ ಪ್ರಾಧ್ಯಾಪಕರು, ಎಂ. ಎಂ. ಕಾಲೇಜು, ಶಿರಸಿ
೨ನೇ ಅಕ್ಟೋಬರ್ ೨೦೧೪.
No comments:
Post a Comment