Friday 5 August 2022

 Interview Article

ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಗ್ರಾಹಕರಾದ ಶ್ರೀ ನಾಗೇಂದ್ರ ಮುತ್ಮುರ್ಡುರವರ ಸಂದರ್ಶನ ಬರಹ- 2015-16 'ಕೆಮ್-ವಿಝ್' ತಂಡದಿಂದ

2015 ರ ಆಗಸ್ಟ್ 23, ಆದಿತ್ಯವಾರದಂದು ಮಧ್ಯಾಹ್ನ ಒಂದು ಗಂಟೆಗೆ ಶಿರಸಿಯ ಎಂ. ಎಂ. ಕಾಲೇಜಿನ ‘ರಸಬಳಗ’ದ(Chem-Whiz) ನಾವೆಲ್ಲ ವಿದ್ಯಾರ್ಥಿಗಳು ಅಧ್ಯಾಪಕರೊಂದಿಗೆ ಶಿರಸಿ - ಸಿದ್ದಾಪುರದ ಮಧ್ಯದ ಕಾನಸೂರಿನ ಬಳಿಯಿರುವ ಅಡಕಳ್ಳಿ ಕ್ರಾಸಿನಲ್ಲಿ ಜಮಾವಣೆಗೊಂಡೆವು. ರಸಾಯನಶಾಸ್ತ್ರದ ಬಳಗವಾದ್ದರಿಂದ ಕೃಷಿ/ವಿಜ್ಞಾನದ ಹಿನ್ನಲೆಯ ಸಂಪನ್ಮೂಲ ವ್ಯಕ್ತಿಗಳ ಸಂದರ್ಶನ ಮಾಡುತ್ತಿದ್ದ ಸಂಪ್ರದಾಯವನ್ನು  ಇದೇ ಮೊದಲಬಾರಿಗೆ ಬದಿಗೊತ್ತಿ ಛಾಯಾಚಿತ್ರಗ್ರಾಹಕರಾದ ಶ್ರೀ ನಾಗೇಂದ್ರ
ಮುತ್ಮುರ್ಡುರವರನ್ನ ಅವರ ಮನೆಗೇ ತೆರಳಿ ಸಂದರ್ಶಿಸಲು ಹೊರಟಿದ್ದೆವು. ನಮ್ಮ ಗುಂಪಿನಲ್ಲಿ ಎಲ್ಲರೂ ಅವರ ಬಗ್ಗೆ ಕೇಳಿ ತಿಳಿದವರಾದ್ರೂ ಯಾರಿಗೂ ಅವರನ್ನು ಕಂಡು ಮಾತನ್ನಾಡಿದ ನಿಕಟ ಪರಿಚಯವಿರಲಿಲ್ಲ. ಅಡಕಳ್ಳಿ ಕ್ರಾಸಿನಿಂದ ಅವರ ಮನೆಗೆ ಐದಾರು ಕಿಲೋಮೀಟರು, ಅಧ್ಯಾಪಕರಾದಿಯಾಗಿ ಎಲ್ಲರೂ ಪ್ರಕೃತಿ ಮತ್ತು ಚಾರಣಪ್ರಿಯರೇ ಆದ್ದರಿಂದ ಹೊಸತೊಂದು ಅನುಭವಕ್ಕೆ ಮುಖಾಮುಖಿಯಾಗುವ ತವಕದಿಂದ ಮುತ್ಮುರ್ಡಿಗೆ ಲಗುಬಗೆಯಿಂದ ಹೆಜ್ಜೆ ಹಾಕಿದೆವು. ನಡಿಗೆ ಶುರುಮಾಡಿದ ಕೂಡಲೆ ಎದುರಾದ ತುಂತುರು ಹೂ ಮಳೆ, ತದನಂತರದ ತಿಳಿ ಬಿಸಿಲು, ಶುಭ್ರ ಹಚ್ಚ ಹಸಿರಿನ ಹಿನ್ನಲೆಯಲ್ಲಿ ನಮಗೆ ವೈಭವೋಪೇತ ಸ್ವಾಗತ ನೀಡಿದಂತಿತ್ತು.  ನಿತ್ಯನೂತನವಾದ ನಮ್ಮ ಮಲೆನಾಡ ಪ್ರಕೃತಿಯ ಸೊಬಗನ್ನ ಸವಿಯುತ್ತಾ, ಹರಟುತ್ತಾ  ದೈನಂದಿನ ಕ್ಲಾಸು, ಪಾಠಗಳ ಏಕತಾನತೆಯಿಂದ ದೂರವಾಗಿ, ಕೆಲವೊಮ್ಮೆ ಆ ಸಂಗತಿಗಳನ್ನೂ ಮೆಲುಕಿ ವಿನೋದಮಾಡುತ್ತಾ ಸಾಗಿದ್ದರಿಂದ ಕ್ರಮಿಸಿದ ದಾರಿ ಮತ್ತು ಆಯಾಸದ ಪರಿವೆ ಯಾರಿಗೂ ಆಗಲಿಲ್ಲ. 

ನಿಗದಿತ ಸಮಯಕ್ಕೆ ಸರಿಯಾಗಿ ನಾಗೇಂದ್ರ ಮುತ್ಮುರ್ಡುರವರ ಮನೆ ತಲುಪಿದಾಗ ಮನೆಮಂದಿಯೆಲ್ಲರಿಂದ ಆತ್ಮೀಯ ಸ್ವಾಗತ, ಆತಿಥ್ಯ ದೊರೆಯಿತು. ಅವರ ಮನೆ ಜಗುಲಿಯ ಕಂಬಳಿ ಮೇಲೆ ಸುಖಾಸೀನರಾಗಿ ಅನೌಪಚಾರಿಕವಾದ ಸಂದರ್ಶನವನ್ನು ಪ್ರಾರಂಭಿಸಿದೆವು.

ನಾಗೇಂದ್ರ ಮುತ್ಮುರ್ಡುರವರ ಛಾಯಾಚಿತ್ರಗಳು ಅದಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಹೊಂದಿ, ಸ್ವರ್ಣ ಪದಕ ಸಹಿತ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿತ್ತು.  ಮೂಲತಃ  ಕೃಷಿಕರಾಗಿ, ಸಾಹಿತ್ಯಕ್ಷೇತ್ರದಲ್ಲಿಯೂ ಬಹಳ ಆಸಕ್ತಿಯಿಂದ ತೊಡಗಿಕೊಂಡಿರುವ ಇವರು ಚಾರಣ ಪ್ರಿಯರೂ ಮತ್ತು ದಶಕಗಳ ಕಾಲ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿದ ಉತ್ತಮ ಕೊಳಲುವಾದಕರು ಎಂಬುದು ಹೆಚ್ಚಿನವರಿಗೆ ತಿಳಿದಿರದ ವಿಷಯ.  ತಮಗೆ ಸಂದ ಈ ಮುತ್ತು, ರತ್ನ ಖಚಿತ ವಿಶೇಷಾಭರಣದ ಯಾವ ಭಾರವನ್ನೂ ಹೊತ್ತಿರದ, ಅತ್ಯಂತ ಸಹಜ ವ್ಯಕ್ತಿತ್ವದ ಶ್ರೀಯುತರು ನಮ್ಮ ರಸಬಳಗದವರೊಂದಿಗೆ ಅತ್ಮೀಯವಾಗಿ ಬೆರೆತು,  ತಮ್ಮ ಜೀವನದ ಹಲವು ರಸಮಯ ಸಂಗತಿಗಳನ್ನು ಹಂಚಿಕೊಂಡಿದ್ದು ಹೀಗೆ...


ನಾಗೇಂದ್ರ ಮುತ್ಮುರ್ಡು ಅವರು ಛಾಯಾಚಿತ್ರ ಕ್ಷೇತ್ರದಲ್ಲಿ ಬೆಳೆದು ಬಂದದ್ದು ಹೇಗೆ?

ಅದು ಸ್ಪಷ್ಟವಾಗಿ ಹೀಗೆಯೆ ಎಂದು ಹೇಳುವುದು ಕಷ್ಟ. ಮೊದಲು ತುಷಾರ ಪತ್ರಿಕೆಯಲ್ಲಿ ಕಪ್ಪು ಬಿಳುಪು ಕಲಾತ್ಮಕ ಚಿತ್ರಗಳನ್ನ ಸೂಕ್ತ ಅಡಿಬರಹದೊಂದಿಗೆ ಪ್ರಕಟಿಸಲಾಗುತ್ತಿತ್ತು. ಅದು ನನಗೆ ಛಾಯಾಚಿತ್ರ ಕ್ಷೇತ್ರದಲ್ಲಿ ಆಸಕ್ತಿ ಮೂಡಲು ಮೊದಲ ಪ್ರೆರಣೆ. ಪ್ರಕೃತಿಯ ಮಡಿಲಿನಲ್ಲಿಯೇ ಇದ್ದದ್ದು, ಬೆಳೆದದ್ದು ಇನ್ನೊಂದು ಸ್ಪೂರ್ತಿ. ಸುಮಾರು ಮೂವತ್ತನೆ ವಯಸ್ಸಿನಲ್ಲಿ ಮೊದಲನೇಯದಾಗಿ ಒಂದು ಬಾಕ್ಸ್ ಕೆಮರಾ ಖರೀದಿಸಿದೆ, ಅದರಲ್ಲಿಯೇ ಮೂರರಿಂದ ನಾಲ್ಕು ವರ್ಷ ಛಾಯಾಚಿತ್ರವನ್ನು ತೆಗೆದೆ. ನಂತರ 2000ನೇ ಇಸವಿಯಿಂದ 2009ರ ವರೆಗೆ ಎಸ್.ಎಲ್.ಆರ್. ಕೆಮರಾ ಬಳಕೆಯಲ್ಲಿತ್ತು. 2010  ರಿಂದ ಡಿ.ಎಸ್.ಎಲ್.ಆರ್. ಕೆಮರಾವನ್ನ ಉಪಯೋಗಿಸುತ್ತಾ ಇದ್ದೇನೆ.  

ತುಷಾರ, ಸುಧಾ ಮುಂತಾದ ಪತ್ರಿಕೆಗಳಲ್ಲಿ ಬರುವ ಲೇಖನ, ಫೋಟೊ ಫೀಚರ್‍ಗಳನ್ನ ನೋಡಿದಾಗ ಇದನ್ನು ಬರೆಯುವವರು ಯಾರೋ, ನಮ್ಮಂತಹ ಸಾಮಾನ್ಯರಲ್ಲ ಎಂಬ ಭಾವನೆ ಇತ್ತು. ಆದರೂ ನಂತರದ ದಿನದಲ್ಲಿ ಒಂದು ಲೇಖನವನ್ನು ಬರೆದು ಕಳುಹಿಸಿದೆ. ಅದು ಪ್ರಕಟವೂ ಆಗಿ ಹೋಯಿತು. ಆಗ ಗೊತ್ತಯಿತು ಒಹೋ, ಇದು ನಾವೂ ಮಾಡುವಂತಹದ್ದೇ ಎಂದು!!!


ಛಾಯಾಚಿತ್ರಗ್ರಹಣದಲ್ಲಿ ನಿಮಗೆ ಬಹಳ ಖುಷಿಕೊಡುವ ವಿಭಾಗ ಯಾವುದು? 

ನಾನು ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದು ಪಿಕ್ಟೋರಿಯಲ್. ಅದು ನನಗೆ ಖುಷಿ ಕೊಡುವಂತಹದ್ದು. ನೇಚರ್ ಫೆÇಟೊಗ್ರಫಿ ಮಾಡುವವರು ಇಂದು ಸಾಕಷ್ಟು ಜನರಿದ್ದಾರೆ, ಆದರೆ ಪಿಕ್ಟೋರಿಯಲ್ ವಿಭಾಗದಲ್ಲಿ ತುಂಬಾ ವಿರಳ. ಕರ್ನಾಟಕದಲ್ಲಿ ಪಿಕ್ಟೋರಿಯಲ್ ವಿಭಾಗದಲ್ಲಿ ಎ.ಎಫ್.ಐ.ಪಿ. ಡಿಸ್ಟಿಂಕ್ಷನ್ ಆಗದೆ 7-8 ವರ್ಷಗಳೇ ಆಗಿಹೋಗಿತ್ತು. {AFIAP International Photography Distinction in 2011 (by International Federation of Photography, Luxembourg Europe.)}

ಪಿಕ್ಟೋರಿಯಲ್ ಛಾಯಾಚಿತ್ರಗಳು ಎಂದರೇನು?

ಪಿಕ್ಟೋರಿಯಲ್ ಅಂದರೆ ಕಥೆ ಹೇಳುವ ಚಿತ್ರಗಳು ಎಂದು ಕರೆಯಬಹುದು. ಪಿಕ್ಟೋರಿಯಲ್ ವಿಭಾಗದಲ್ಲಿ ಛಾಯಾಚಿತ್ರಗಾಹಕರು ಕಡಿಮೆ ಇರಲು ಕಾರಣ ಅದಕ್ಕೆ ಕಲ್ಪನಾ ಶಕ್ತಿ ಮತ್ತು ಕೌಶಲ ಸ್ವಲ್ಪ ಹೆಚ್ಚಿಗೆ ಬೇಕು.




ನಾಗೇಂದ್ರ ಮುತ್ಮುರ್ಡು ಮತ್ತು ಸಂಗೀತ?!!!

ಕೊಳಲು ವಾದನ ಮೊದಲಿನಿಂದಲೂ ಬಹಳ ಇಂಪು ಅನಿಸುತ್ತಿತ್ತು. ಡಿಗ್ರಿ 2ನೇ ವರ್ಷದಲ್ಲಿರುವಾಗ ಕೊಳನ್ನು ಕಲಿಯಲು ಕಮಲಾಕರ ಭಟ್ಟರಲ್ಲಿಗೆ ಹೋದಾಗಲೇ ನನಗೆ ಶಾಸ್ತ್ರೀಯ ಸಂಗೀತ ಎಂಬ ಒಂದು ವಿಭಾಗವಿದೆ ಅಂತ ಗೊತ್ತಾಗಿದ್ದು. ನಂತರ ಕೊಳಲು ವಾದನವನ್ನ ಸುಮಾರು 8ರಿಂದ 10ವರ್ಷ ಅಭ್ಯಾಸ ಮಾಡಿದೆ. ಧಾರವಾಡದ ಕಲಾಭವನದಲ್ಲಿಯೂ ಸಹ ಕೆಲವು ಪ್ರದರ್ಶನಗಳನ್ನ ಕೊಟ್ಟಿದ್ದೇನೆ. ಸಂಗೀತದಲ್ಲಿ ಸಾಧನೆಗೆ ಬಹಳ ಶ್ರಮ ಹಾಗು ಸಮಯ ಅಗತ್ಯ. ಮನೆಯ ವ್ಯವಹಾರ ಮತ್ತು ಕೃಷಿಯನ್ನು ಮಾಡಿಕೊಂಡು, ಹೊರಗಡೆ ಹೋಗಿ ಸಂಗೀತ ಕ್ಷೇತ್ರದಲ್ಲಿ ಬೆಳೆಯಲು ಸಮಯ ಸಿಗಲಿಲ್ಲವಾದ ಕಾರಣ ಅದು ಕ್ರಮೇಣ ನೇಪಥ್ಯಕ್ಕೆ ಸರಿಯಿತು.

ನೀವು ಛಾಯಾಚಿತ್ರಕ್ಕೆ ಕೊಡುವ ಅಡಿಬರಹಗಳು ಆಕರ್ಷಣೀಯ. ಅದು ಹೇಗೆ ರೂಢಿ ಆದದ್ದು?

ಮೋದಲೇ ಹೇಳಿದಂತೆ, ತುಷಾರದಲ್ಲಿ ಬರುತ್ತಿದ್ದ ಚಿತ್ರಗಳು ಸುಂದರ ಅಡಿಬರಹಗಳನ್ನ ಹೊಂದಿರುತ್ತಿದ್ದವು. ನನಗೆ ಅದೇ ಸ್ಫೂರ್ತಿ ಮತ್ತು ಆಸಕ್ತಿ ಕೂಡ ಇತ್ತು. ಉತ್ತಮ ಅಡಿಬರಹಗಳು ಛಾಯಾಚಿತ್ರದ ಪರಿಣಾಮವನ್ನು ದುಪ್ಪಟ್ಟುಗೊಳಿಸುತ್ತವೆ. ಕೆಲವೊಮ್ಮೆ ಮೊದಲೇ ಅಡಿಬರಹ ಬರೆದು ಛಾಯಾಚಿತ್ರಕ್ಕಾಗಿ ಹುಡುಕಾಡಿದ್ದಿದೆ!


ಒಂದು ಛಾಯಾಚಿತ್ರಕ್ಕೆ ಅಡಿಬರಹ ಇಲ್ಲದೇ ಹೋದರೆ, ಅದು ನೋಡುಗರಿಗೆ ತನ್ನ ಹಲವು ಮಜಲು / ಆಯಾಮಗಳನ್ನ ತೆರೆದಿಡಬಹುದಲ್ಲವೆ?

ಅದು ಹೌದು. ಆದರೆ ಒಂದು ಅಡಿಬರಹ, ಛಾಯಾಚಿತ್ರಗ್ರಾಹಕ ಆ ಚಿತ್ರದ ಮೂಲಕ ಏನನ್ನು ಹೇಳಹೊರಟಿದ್ದಾನೆ ಎಂಬುದನ್ನು ತಿಳಿಸಿಕೊಡಲು ಅನುಕೂಲಕಾರಿಯಾಗಿದೆ.

 

ಅಭಿವ್ಯಕ್ತಿಗೆ ಬರವಣಿಗೆ ಹೆಚ್ಚು ಸಹಕಾರಿಯೊ ಅಥವಾ ಛಾಯಾಚಿತ್ರವೊ?

ಅವೆರಡೂ ಪರಸ್ಪರ. ನನಗೆ ಛಾಯಾಗ್ರಹಣದಲ್ಲಿ ಸ್ವಲ್ಪ ಕೆಲಸಮಾಡಿದ್ದರಿಂದ ಅದೇ ಹೆಚ್ಚು ಸಹಕಾರಿ ಅಂದೆನಿಸಿದರೂ ಛಾಯಾಚಿತ್ರದಲ್ಲಿ ಹೇಳುವುದು ಸ್ವಲ್ಪ ಕಷ್ಟವೇ. ಹಾಗೆಯೇ ಬರವಣಿಗೆಯಲ್ಲಿ ಕೆಲವೊಮ್ಮೆ ಸೂಕ್ತ ಶಬ್ದಗಳು ಸಿಗದೇ ಹೋದಾಗ ಅದೂ ಕಷ್ಟವೇ.

ಬರವಣಿಗೆಗೆ ಒಂದು ಚೌಕಟ್ಟಿದೆ. ಅದರ ಹೊರತಾಗಿ ಹೋಗಲಾರದು. ಆದರೆ ಒಂದು ಚಿತ್ರದ ಅಭಿವ್ಯಕ್ತಿ ಅನಂತ, ಮತ್ತು ಭಾಷೆಯನ್ನು ಮೀರಿದ್ದು. 


ಮಲೆನಾಡಿನ ಪರಿಸರದಲ್ಲಿ ಡಿ.ಎಸ್.ಎಲ್.ಆರ್. ಕೆಮರಾವನ್ನು ತೇವಾಂಶ ಮತ್ತು ಶಿಲೀಂಧ್ರಗಳಿಂದ ರಕ್ಷಿಸಿಡುವುದು ಸವಾಲಿನ ಕೆಲಸ. ಅದನ್ನು ಹೇಗೆ ಮಾಡುತ್ತೀರಿ?

ಹಾಟ್ ಬಾಕ್ಸ್ ಲಭ್ಯವಿದ್ದರೂ ನಮ್ಮಲ್ಲಿ ವಿದ್ಯುತ್ ಸಮಸ್ಯೆ ಇರೋದರಿಂದ ಅದು ಪ್ರಯೋಜನ ಆಗುವುದಿಲ್ಲ. ಒಂದು ಎರ್-ಟೈಟ್ ಬಾಕ್ಸ್ ನಲ್ಲಿ ಸಿಲಿಕಾ ಜೆಲ್ ನೊಂದಿಗೆ ಲೆನ್ಸ್ಗಳನ್ನು ಇಡೋದರಿಂದ ಸ್ವಲ್ಪ ಮಟ್ಟಿಗೆ ರಕ್ಷಿಸಿಡಬಹುದು. ಆದರೂ ತೊಂದರೆ ಇದ್ದಿದ್ದೆ. ಬಹಳ ಶಿಲೀಂಧ್ರ ಬೆಳವಣಿಗೆ ಆದರೆ ಅದನ್ನು ತೆಗೆಸಬೇಕಾಗುತ್ತದೆ. ಅದನ್ನು ಸ್ವಚ್ಚಮಾಡುವಾಗ ಲೆನ್ಸ್ ಮೇಲಿನ ಒಂದು ತೆಳು ಪದರ ಹೋಗಿಬಿಡುತ್ತದೆ. ಇದರಿಂದ ಲೆನ್ಸ್‍ನ ಗುಣಮಟ್ಟ ಕಡಿಮೆಯಾಗುತ್ತದೆ.

 

ನೀವು ಉಪಯೋಗಿಸುವ ಲೆನ್ಸಗಳು ಯಾವವು?

 18-50 ಎಮ್. ಎಮ್. , 70 – 300 ಎಮ್. ಎಮ್. ಮತ್ತೊಂದು ಮೆಕ್ರೊ ಲೆನ್ಸ್.

 

ಛಾಯಾಗ್ರಹಣಕ್ಕಾಗಿ ಎಲ್ಲೆಲ್ಲಿ ತಿರುಗಾಟ ಮಾಡಿದ್ದೀರಿ? 


ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ 5 ಬಾರಿ ಚಾರಣ ಮಾಡಿದ್ದೇನೆ. ಉತ್ತರಾಖಂಡದ ಸುಂದರದುಂಗ ಕಣಿವೆಯಲ್ಲಿ ಸುಮಾರು 165 ಕಿ.ಮಿ. ಚಾರಣವನ್ನ ಮಾಡಿದ್ದೆವು. ಸಾಮಾನ್ಯವಾಗಿ ಪ್ರವಾಸಿಗರು ತೆರಳುವ ಸ್ಥಳಗಳನ್ನು ಬಿಟ್ಟು ಹಿಮಾಲಯದ ಒಳಗೊಳಗಿನ ಹಳ್ಳಿಗಳನ್ನು ಭೇಟಿಮಾಡುತ್ತಾ ಸಾಗುತ್ತಿದ್ದೆವು. ಅದು ಛಾಯಾಗ್ರಹಣಕ್ಕೆ ಸಹಕಾರಿಯಾಗುತ್ತಿತ್ತು.

ನಾನು ತೆಗೆದಂತಹ ಬಹುತೇಕ ಪಿಕ್ಟೋರಿಯಲ್ ಛಾಯಾಚಿತ್ರಗಳು ನಮ್ಮ ಊರಿನಲ್ಲೆ ತೆಗೆದಂತವುಗಳು. ಇಲ್ಲಿ ಹರಿಯುವ ಒಂದು ಹೊಳೆಯೇ ನನ್ನ ಸ್ಟೂಡಿಯೊ. ನಿಜವಾಗಿಯೂ ಉತ್ತರಕನ್ನಡದಲ್ಲಿಯೇ ಛಾಯಾಗ್ರಹಣಕ್ಕೆ ಸಾಕಷ್ಟು ಜಾಗಗಳಿವೆ.

 

ಛಾಯಾಚಿತ್ರ ಸ್ಪರ್ಧೆಗಳ ಬಗ್ಗೆ ಮೊದಲು ತಿಳಿದಿದ್ದು ಹೇಗೆ ಮತ್ತು ಅದರಲ್ಲಿ ಹೇಗೆ ಮುಂದುವರೆದಿರಿ?

ಮೊದಲು ಸ್ಪರ್ಧೆಗೆ ಛಾಯಚಿತ್ರಗಳನ್ನು ಎಲ್ಲಿ ಕಳಿಸುವುದು? ಹೇಗೆ ಕಳಿಸುವುದು? ಮೊದಲು ಪ್ರಿಂಟ್ ಮಾಡಿ ಕಳುಹಿಸಬೆಕಾಗುತ್ತಿತ್ತು. ಎಲ್ಲಿ ಪ್ರಿಂಟ್ ಮಾಡಿಸುವುದು? ಎಷ್ಟು ದೊಡ್ಡದಾಗಿ ಮಾಡಿಸಬೇಕು? ಎಂಬ ಮಾಹಿತಿ ಸ್ಥಳೀಯವಾಗಿ ಯಾರಿಗೂ ಇರಲಿಲ್ಲ. “ಸಾಗರ ಫೆÇೀಟೋಗ್ರಫಿ ಸೊಸೈಟಿ”ಯ ಸಂಪರ್ಕಕ್ಕೆ ಬಂದ ನಂತರ ಸಲೊನ್ ಎಂಬುದಾಗಿ ಇವೆ ಎಂದು ತಿಳಿದಿದ್ದು. (ಕೆಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆಗಳಿಗೆ ಸಲೊನ್ ಎಂಬುದಾಗಿ ಕರೆಯಲಾಗುತ್ತದೆ) ಅದಕ್ಕೂ ಮೊದಲು ಸಲೊನ್ ಶಬ್ದದ ಸ್ಪೆಲ್ಲಿಂಗ್ ಕೂಡ ನನಗೆ ಗೊತ್ತಿರಲಿಲ್ಲ.

ಎಸ್. ರಾಜಾರಾಮ್ ಅವರು ನನ್ನ ಛಾಯಾಚಿತ್ರಗಳನ್ನು ನೋಡಿ ನೀನು ಖಂಡಿತವಾಗಿಯೂ ಸಲೊನ್ ಗಳಿಗೆ ಭಾಗವಹಿಸು ಎಂಬುದಾಗಿ ಸಲಹೆಯನ್ನು ಕೊಟ್ಟರು. ಮತ್ತು ಅದಕ್ಕೆ ಬೇಕಾದ ಮಾಹಿತಿಯನ್ನೂ ಸಹ ಕೊಟ್ಟರು. ಸಲೊನ್ ಗಳಿಗೆ ಉತ್ತರಕನ್ನಡದಿಂದ ಮೊದಲು ಭಾಗವಹಿಸಿದ್ದು ನಾನೆ.

ಶುರುವಿನಲ್ಲಿ 4-5 ಬಾರಿ ನಾನು ಕಳುಹಿಸಿದ ಛಾಯಾಚಿತ್ರಗಳು ತಿರಸ್ಕೃತವಾದವು. ಆದರೆ ಪ್ರಯತ್ನ ಜಾರಿಯಲ್ಲಿತ್ತು. ನಂತರದ ದಿನಗಳಲ್ಲಿ ಒಂದು ಛಾಯಾಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಯಿತು. ಆಗ ನಾನು ಏನೋ ಸಾಧಿಸಿದ ಖುಶಿಯಲ್ಲಿದ್ದೆ. ನಂತರಗೊತ್ತಾಯಿತು ಇದು ಕೇವಲ ಪ್ರಾರಂಭ ಮಾತ್ರ ಎಂದು.

ನಾನು ಈ ಹಿಂದೆ ಫೋಟೋಗ್ರಫಿ ಸೊಸೈಟಿ ಆಫ್ ಅಮೇರಿಕ ನಡೆಸಿದಂತಹ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಅದರಲ್ಲಿ 54 ದೇಶಗಳಿಂದ 30,000 ಛಾಯಾಚಿತ್ರಗಳು ಬಂದಿದ್ದವು. ಅದರಲ್ಲಿ ಮೊದಲು 500 ಚಿತ್ರಗಳನ್ನು ಪ್ರದರ್ಶನಕ್ಕೆ ಆಯ್ಕೆ ಆದವು. ನಂತರ ಆ 500 ರಲ್ಲಿ ಉತ್ತಮ 25 ಛಾಯಾಚಿತ್ರಗಳನ್ನು ಆಯ್ಕೆಮಾಡಲಾಯಿತು. ಮತ್ತೆ ಅದರಲ್ಲಿ ಅತ್ಯುತ್ತಮ ಛಾಯಾಚಿತ್ರಗಳಿಗೆ ಪ್ರಥಮ, ದ್ವಿತೀಯ, ತೃತೀಯ ಮತ್ತು ಕೆಲವು ಸರ್ಟಿಫಿಕೇಟ್ ಒ¥sóï ಮೆರಿಟ್ ಗಳನ್ನು ಕೊಡಲಾಯಿತು. ಆ ಸ್ಪರ್ಧೆಯಲ್ಲಿ ನನಗೆ ಪ್ರಥಮ ಸ್ಥಾನ ಸಿಕ್ಕಿತು.

  

ನೀವು ಯಾವುದಾದರು ಛಾಯಾಗ್ರಹಣ ಶಾಲೆಗಳಿಗೆ ಹೋಗಿದ್ದೀರಾ?

ಪ್ರಾರಂಭದಲ್ಲಿ ಒಂದಷ್ಟು ಸ್ವಂತ ಪ್ರಯೋಗಗಳಿಂದಲೇ ಛಾಯಾಗ್ರಹಣ ಕಲಿತಿದ್ದು. 2000ನೇ ಇಸವಿಯಲ್ಲಿ ಎರಡು ಬಾರಿ ಸಾಗರ ಫೆÇಟೋಗ್ರಫಿ ಅಸ್ಸೊಸಿಯೇಶನ್ ನಡೆಸಿದಂತಹ ಕಾರ್ಯಗಾರದಲ್ಲಿ ಭಾಗವಹಿಸಿದ್ದೆ. ಅದು ನನಗೆ ಬಹಳ ಅನುಕೂಲವಾಯಿತು. ಕೇವಲ ಪುಸ್ತಕಗಳಿಂದ ಓದಿ ತಿಳಿದುಕೊಳ್ಳಬಹುದಾದಕ್ಕಿಂತ ಸಂಪನ್ಮೂಲ ವ್ಯಕ್ತಿಗಳಿಂದ ಕಲಿಯುವುದು ಬಹಳ ಪ್ರಯೋಜನಕಾರಿ ಮತ್ತು ನಮ್ಮ ಸಾಕಷ್ಟು ಸಮಯವನ್ನು ಉಳಿಸುತ್ತದೆ. ಇವತ್ತು ಅಲ್ಲಿಯ ಬೋಧನಾ ವಿಭಾಗದಲ್ಲಿ ನಾನೂ ಒಬ್ಬ. 

  

ಛಾಯಾಚಿತ್ರ ಒಕ್ಕೂಟಗಳ ರಚನೆ ಹೇಗೆ?

ಫೆಡೆರೇಷನ್ ಆಫ್ ಇಂಡಿಯನ್ ಫೋಟೋಗ್ರಪಿ( ಎಫ್.ಐ.ಪಿ.)ಎಂಬುದು ಭಾರತದ ಅತ್ಯುನ್ನತ ಒಕ್ಕೂಟ. ಭಾರತದ ಬೇರೆ ಬೇರೆ ರಾಜ್ಯದ ನೂರಾರು ಛಾಯಾಚಿತ್ರ ಒಕ್ಕೂಟಗಳು(ಉದಾ: ಯೂತ್ ಫೋಟೊಗ್ರಫಿ ಸೊಸೈಟಿ ಆಫ್ ಬೆಂಗಳೂರು) ಎಫ್.ಐ.ಪಿ. ಅಡಿಯಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತದೆ. ಇದೇತರದಲ್ಲಿ ಎಲ್ಲ ದೇಶಗಳ ಅತ್ಯುನ್ನತ ಒಕ್ಕೂಟಗಳೂ ಸೇರಿ ಒಂದು ಅಂತರ್ರಾಷ್ಟ್ರೀಯ ಒಕ್ಕೂಟವಿದೆ. ಅದರ ಮುಖ್ಯ ಕಛೇರಿ ಲಕ್ಸಂಬರ್ಗ್ ನಲ್ಲಿದೆ. 85 ರಾಷ್ಟ್ರಗಳು  ಆ ಒಕ್ಕೂಟದಲ್ಲಿ ಒಳಗೊಂಡಿದೆ.

ಅವುಗಳ ಕಾರ್ಯವೇನು?

ಛಾಯಾಗ್ರಹಣ ಉತ್ತೇಜಿಸುವ ಎಲ್ಲ ಕೆಲಸಗಳನ್ನು ಅವು ಮಾಡುತ್ತವೆ. ತರಬೆತಿಗಳನ್ನು ನೀಡುವಂತಹದ್ದಾಗಿರಬಹುದು, ಛಾಯಾಗ್ರಹಣ ಶಾಲೆಗಳನ್ನು ನಡೆಸುವಂತಹದ್ದಾಗಿರಬಹುದು, ಹಾಗೂ ಸ್ಥಳೀಯವಾಗಿ ಯಾರಾದರೂ ಛಾಯಗ್ರಹಣಕ್ಕೆ ಸಂಬಂಧಪಟ್ಟ ಕೆಲಸಮಾಡುವವರಿಗೂ ಅವು ಸಹಕಾರವನ್ನು ಒದಗಿಸುತ್ತವೆ. 

ಇನ್ನೊಂದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಒಕ್ಕೂಟಗಳು ಕೆಲವು ಸ್ಪಷ್ಟ ನಿಯಮ ಮತ್ತು  ನಿರ್ಭಂಧನೆಗಳೊಂದಿಗೆ ಛಾಯಚಿತ್ರ ಸ್ಪರ್ಧೆಗಳನ್ನು ಏರ್ಪಡಿಸುತ್ತವೆ. ಅವುಗಳ ಸಾರ್ವತ್ರಿಕ ನಿಯಮ ಮತ್ತು ಉತ್ತಮ ಗುಣಮಟ್ಟಗಳಿಂದ ಆ ಪ್ರಶಸ್ತಿಗಳಿಗೆ ಬೆಲೆ ಹೆಚ್ಚು. ಅದಿಲ್ಲವಾದರೆ ಇಲ್ಲೆ ಕಾನಸೂರಿನ ಒಂದು ಒಕ್ಕೂಟ ಕೊಡುವ ಪ್ರಶಸ್ತಿಗೂ, ಫೆÇಟೋಗ್ರಫಿ ಸೊಸೈಟಿ ಆಫ್ ಅಮೆರಿಕ ಕೊಡುವ ಪ್ರಶಸ್ತಿಗು ಯಾವುದೇ ವ್ಯತ್ಯಾಸ ಉಳಿಯುತ್ತಿರಲಿಲ್ಲ. 

 

ನಿಮ್ಮ ಹೆಚ್ಚಿನ ಛಾಯಾಚಿತ್ರಗಳು ಬೆಳಕಿನೊಂದಿಗೆ ಚಮತ್ಕಾರಗಳನ್ನು ಹೊಂದಿವೆ. ಛಾಯಾಗ್ರಹಣದಲ್ಲಿ ನೀವು ಬೆಳಕನ್ನು ಬಳಸುವ ಬಗೆ ಹೇಗೆ?


ಸಾಮಾನ್ಯವಾಗಿ ಛಾಯಾಗ್ರಹಣಕ್ಕೆ ಏನು ಬೇಕು ಅಂದ ತಕ್ಷಣ ಬಹಳ ಜನ ಬೆಳಕು ಎನ್ನುತ್ತಾರೆ. ನಾನು ಹೇಳುತ್ತೇನೆ ಕತ್ತಲೂ ಬೇಕು. ಬೆಳಕು-ನೆರಳು ಎರಡೂ ಬೇಕು. 

ನಾನು ಕೃತಕ ಬೆಳಕನ್ನು ಉಪಯೋಗಿಸುವುದು ಬಹಳ ಕಡಿಮೆ. ಕೆಲವೊಮ್ಮೆ ಇಂಡೋರ್  ಫೋಟೋಗ್ರಫಿ (ಒಳಾಂಗಣ ಛಾಯಗ್ರಹಣ) ಮಾಡುವಾಗ ಟೇಬಲ್ ಲ್ಯಾಂಪ್ ಬಳಸಿದ್ದೂ ಇದೆ. ಥರ್ಮಾಕೂಲ್ ಇಲ್ಲವಾದಾಗ ಬಿಳಿ ಬಟ್ಟೆಯನ್ನು ರಿಫ್ಲೆಕ್ಟರ್ ಆಗಿ ಬಳಸಿದ್ದೂ ಇದೆ. 

ಇತ್ತೀಚೆಗೆ ಡಿಜಿಟಲ್ ಛಾಯಾಗ್ರಹಣದಲ್ಲಿ ಬೆಳಕನ್ನು ಕಂಪ್ಯೂಟರ್ ಮುಖಾಂತರವೂ ಕೊಡಲಿಕ್ಕೆ ಬರುತ್ತದೆ. ಆದರೆ ಅದು ನ್ಯಾಚುರಲ್ ಬೆಳಕಿನಲ್ಲಿ ತೆಗೆದಿದ್ದಕ್ಕೆ ಸಮನಾದ ಗುಣಮಟ್ಟ ಹೊಂದಿರುವುದಿಲ್ಲ. 

ನೀವು ದಿನದ ಯಾವ ಸಮಯವನ್ನು ಛಾಯಾಗ್ರಹಣಕ್ಕಾಗಿ ಹೆಚ್ಚಾಗಿ ಉಪಯೋಗಿಸುತ್ತೀರಿ?

ಸೂರ್ಯೋದಯದ ನಂತರದ 1-30 ಗಂಟೆ ಮತ್ತು ಸೂರ್ಯಾಸ್ತಕ್ಕಿಂತ 1-30 ಗಂಟೆ ಮೊದಲಿನ ಬೆಳಕಿನ, , angle, colour, temperature, ಮತ್ತು intensity ಛಾಯಾಗ್ರಹಣಕ್ಕೆ ಬಹಳ ಸೂಕ್ತ.

ನಿಮಗೆ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಂತಹ  ‘ಚಿಮ್ಮಿದ ಚಿಲುಮೆ’ ಛಾಯಾಚಿತ್ರದ ಹಿಂದಿನ ಶ್ರಮ ಎಷ್ಟು? ಹೇಗೆ?

 ಅದರ ಅರ್ಧ ಶ್ರೇಯ ನಿಜಕ್ಕೂ ಅದರಲ್ಲಿದ್ದ ಮಕ್ಕಳಿಗೆ ಸೇರಬೇಕು. ಅವರು ತುಂಬಾ ಸಹಕರಿಸಿದರು. ಮೊದಲು ಜಾಗವನ್ನು ಆಯ್ಕೆ ಮಾಡಿಕೊಂಡೆ. ಆ ಜಾಗದಲ್ಲಿ  ನನಗೆ ಬೇಕಾದ ಕೋನದಲ್ಲಿ ಸಂಜೆಯ ಬಿಸಿಲು ಒಂದು ವರ್ಷದಲ್ಲಿ ಒಂದು ತಿಂಗಳು ಮಾತ್ರ ಸಿಗುತ್ತಿತ್ತು. ಆ ಒಂದು ತಿಂಗಳಲ್ಲಿ ಮಕ್ಕಳಿಗೆ ಸಿಗುವುದು 3 ರಿಂದ 4 ಭಾನುವಾರಗಳು ಮಾತ್ರ. ಎಲ್ಲಾ ಭಾನುವಾರ ಅವರಿಗೆ ಮನಸ್ಸಿರುತ್ತಿರಲಿಲ್ಲ. ಅವರಿಗೆ ಮನಸ್ಸಿದ್ದಾಗ ನನಗೆ ಬಿಡುವಾಗುತ್ತಿರಲಿಲ್ಲ. ಕೆಲವೊಮ್ಮೆ ಎಲ್ಲಾ ತಯಾರಿ ಮಾಡಿಕೊಂಡು ಹೋದಾಗ ಸೂರ್ಯ  ಮೋಡದ ಹಿಂದೆ ಅಡಗಿಬಿಟ್ಟಿರುತ್ತಿದ್ದ! 

ನೀರನ್ನು ಚಿಮ್ಮಿದಾಗ ಯಾವಾಗಲೂ ಕಣ್ಣಿಗೆ ನೀರಿನ ಹನಿಯು ಕಾಣಸಿಗುತ್ತದೆ. ನೀರಿನ ಗೆರೆಗಳು ಸಿಗುವುದಿಲ್ಲ. ಆ ಛಾಯಾಚಿತ್ರದಲ್ಲಿ  ನೀರಿನ ಗೆರೆಗಳು ಮೂಡಿದ್ದರಿಂದ ಅದರ ಪ್ರಭಾವ ಉತ್ತಮವಾಗಿ ಬಂದಿದೆ. 


ಮೊದಲು ಯೋಚನೆ ಇದ್ದಿದ್ದು ಮಕ್ಕಳು ಆಟವಾಡುತ್ತಿರುವಾಗ ನೀರಿಗೆ ಎಸೆದ ಕಲ್ಲಿನಿಂದ ಚಿಮ್ಮಿದ ನೀರನ್ನು ಸೆರೆಹಿಡಿಯಬೇಕು ಎಂಬುದಾಗಿತ್ತು. ಮೊದಲು 3 ವರ್ಷ ರೋಲ್ ಕೆಮರಾದಲ್ಲೆ ಈ ಪ್ರಯತ್ನ ನದೆದಿದ್ದು.  ಪ್ರಿಂಟ್ ಬಂದಾಗ ಒಂದು ಚಿತ್ರದಲ್ಲಿ ನೀರಿನ ಗೆರೆಗಳು ಮೂಡಿದ್ದು  ಕಂಡಿತು. ಆಗ ಅದು ಹೇಗೆ ಬಂತು ಎಂದು ತಿಳಿದಿರಲಿಲ್ಲ. ಪ್ರತಿ ಬಾರಿ ಛಾಯಚಿತ್ರವನ್ನು  ಕ್ಲಿಕ್ಕಿಸಿದಾಗ ಅದರ ಸಂಖ್ಯೆ, ದಿನಾಂಕ, ಶಟ್ಟರ್ ಸ್ಪೀಡ್, ಮತ್ತು ಅಪೆರ್ಚರ್ ಎಷ್ಟು ಎಂಬುದನ್ನು ಒಂದು ಪಟ್ಟಿಯಲ್ಲಿ ಬರೆದುಕೊಳ್ಳುತ್ತಿದ್ದೆ. ನಂತರ ಅವುಗಳ ಅಧ್ಯಯನ ಮತ್ತು ನಿರಂತರ ಪ್ರಯೋಗದಿಂದ ಅವುಗಳ ಮೇಲೆ ಒಂದು ಹಿಡಿತ ಬಂತು.  ಯಾವ ಶಟ್ಟರ್ ಸ್ಪೀಡ್ ಸೂಕ್ತ ಎಂಬುದು ಬಹಳ ಪ್ರಯತ್ನದ ನಂತರ ಗೊತ್ತಾಯಿತು ಮತ್ತು ಅದರಲ್ಲಿ ಇನ್ನೂ ಅನೇಕ ಸವಾಲುಗಳಿದ್ದವು. ಉದಾಹರಣೆಗೆ  ಮಕ್ಕಳ ಕೈಗಳು ಚಲನೆಯಲ್ಲಿ ಇರುವುದರಿಂದ ಅವು ಸಷ್ಟ್ಟವಾಗಿರುವಂತೆ ನೋಡಿಕೊಳ್ಳುವುದೂ ಒಂದು ಸವಾಲಾಗಿತ್ತು. ಮಕ್ಕಳು ಪಾತ್ರೆಯಲ್ಲಿ ತೆಗೆದುಕೊಡ ನೀರಿನ ಪ್ರಮಾಣ ಕೂಡ ಬಹಳ ಮುಖ್ಯವಾಗಿತ್ತು. ಆ ಪ್ರಮಾಣವನ್ನು ತಿಳಿಯಲು ಒಂದು ವರ್ಷ ಬೇಕಾಯಿತು. ನಂತರ ಇನ್ನೊಂದು ಮುಖ್ಯವಾಗಿದ್ದಿದ್ದು ‘ಟೈಮಿಂಗ್’. ಮಕ್ಕಳು ನೀರನ್ನು ಚಿಮ್ಮಿಸಿ ಎಷ್ಟು ಸೆಕೆಂಡಿಗೆ ಕೆಮರಾವನ್ನು ಕ್ಲಿಕ್ಕಿಸಿದರೆ ಸಂಪೂರ್ಣ ಕಮಾನು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಲು 2 ವರ್ಷ ಬೇಕಾಯಿತು. ನೀರನ್ನು  ಹೇಗೆ, ಎಷ್ಟು ವೇಗದಲ್ಲಿ ಚಿಮ್ಮಿಸಬೇಕು ಎಂಬುದನ್ನು ಮಕ್ಕಳಿಗೆ ತರಬೇತಿ ಕೊಟ್ಟು ಕಲಿಸಿಕೊಡಲಾಯಿತು. ನಂತರ ಯಾವ ಆಕಾರದ ಪಾತ್ರೆ ಉಪಯೋಗಿಸಿದರೆ ಸೂಕ್ತ  ಎಂಬುದನ್ನು  ಬಹಳ ಪ್ರಯೋಗ ಮಾಡಲಾಗಿ ಹಿಂಡಿ ಪಾತ್ರೆಯು ಅದಕ್ಕೆ ಸೂಕ್ತ ಎಂದು ತಿಳಿಯಲಾಯಿತು.  ಹೀಗೆ 6ರಿಂದ 7 ವರ್ಷಗಳ ನಿರಂತರ ಶ್ರಮದಿಂದ ಒಳ್ಳೆಯ ಛಾಯಾಚಿತ್ರವೊಂದು ಮೂಡಿಬಂತು!


 ಪ್ರಶಸ್ತಿಯ ಹೊರತಾಗಿ ನಿಮಗೆ ನಿಮ್ಮ ಯಾವ ಛಾಯಾಚಿತ್ರ ಬಹಳ ಉತ್ತಮವಾದದ್ದು ಎಂದೆನಿಸಿದೆ?

-  ಹೆತ್ತವರಿಗೆ ಹೆಗ್ಗಣ ಮುದ್ದಲ್ವೇ? ಹಹ್ಹಹ್ಹ....


ನಿಮಗೆ ಇದುವರೆಗೆ ಇಂತಹ ಒಂದು ಛಾಯಾಚಿತ್ರವನ್ನು ತೆಗೆಯಬೇಕಾಗಿತ್ತು, ಆಗಲಿಲ್ಲ ಎನ್ನುವಂತಹದ್ದು ಯಾವುದಾದರೂ ಇದೆಯೆ?

ಆ ತರಹದ್ದು ಸಾಕಷ್ಟು ಇರುತ್ತದೆ. ಇಂತಹದ್ದೆ ಎಂದು ನಿರ್ಧಿಷ್ಟವಾಗಿ ಹೇಳುವುದು ಕಷ್ಟ. ಜೋಕಾಲಿ ತೂಗುತ್ತಿರುವ ಚಿತ್ರವೊಂದನ್ನು ಮೊದಲು ರೀಲ್ ಕೆಮರಾದಲ್ಲಿ ತೆಗೆದಿದ್ದೆ. ಅದನ್ನು ಈಗ ಡಿಜಿಟಲ್ ಕೆಮರಾದಲ್ಲಿ ಪ್ರಯತ್ನ ಮಾಡುತ್ತಾ ಇದ್ದೇನೆ ಇನ್ನೂ ಕೈಗೂಡಿಲ್ಲ.


ಛಾಯಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸುವಾಗ ಹೇಗೆ ಆಯ್ಕೆಯನ್ನು ಮಾಡುತ್ತೀರಿ? ಇನ್ನೊಬ್ಬರ ಅಭಿಪ್ರಾಯ ಕೇಳುತ್ತೀರಾ? ಅಥವಾ ನೀವೆ ನಿರ್ಧಾರ ತಗೊಳ್ಳುತ್ತೀರಾ?

 ಮೊದಲು ಎನ್. ರಾಜಾರಾಮ್ ಅವರಲ್ಲಿ, ನಾಗೇಶ ಹೆಗಡೆ ಅವರಲ್ಲಿ ಆಯ್ಕೆ ಮಾಡಿಕೊಡಿ ಎಂದು ಕೇಳುತ್ತಿದ್ದೆ. ನಂತರದಲ್ಲಿ ನನಗೇ ಒಂದು ಅಂದಾಜು ಬರತೊಡಗಿತು.

 

ಒಂದು ಪ್ಯಾರ ಬರೆದ ನಂತರ ನಾನೊಬ್ಬ ಬರಹಗಾರ, ಒಂದು  ಕೆಮರಾ ಖರೀದಿಸಿದ ನಂತರ ನಾನೊಬ್ಬ  ಛಾಯಾಗ್ರಾಹಕ ಎನ್ನುವಂತ ಸಾಮಾನ್ಯ ಭ್ರಮೆ ಹುಟ್ಟುತ್ತದೆ. ಅದನ್ನು ಬಿಡುವುದು ಹೇಗೆ?

ರಾಷ್ಟ್ರೀಯ ಮಟ್ಟದಲ್ಲಿ ನನ್ನ ಛಾಯಚಿತ್ರ ಪ್ರದರ್ಶನಕ್ಕೆ ಆಯ್ಕೆಯಾದ ತಕ್ಷಣವೇ ನನಗೂ ಈ ಭಾವನೆ ಬಂದಿತ್ತು. ಎಕ್ಸಿಬಿಷನ್‍ಗಳಲ್ಲಿ (ಪ್ರದರ್ಶನಗಳಲ್ಲಿ) ಇತರರ ಚಿತ್ರಗಳು ಎಷ್ಟು ಮೇಲ್ಮಟ್ಟದಲ್ಲಿವೆ ಎಂಬುದನ್ನು ನೋಡಿದಾಗ ನನ್ನ ಸ್ಥಾನದ ಅರಿವಾಯಿತು. ನಾವು ಹೆಚ್ಚು ಹೆಚ್ಚಾಗಿ ಒಂದರಲ್ಲಿ ತೊಡಗಿಸಿಕೊಂಡ ಹಾಗೆ ಇನ್ನೂ ಎಷ್ಟು  ಹೆಚ್ಚಿನದ್ದನ್ನು ಮಾಡಬೇಕಿದೆ ಎಂಬುದು ತಿಳಿಯುತ್ತದೆ. ಸುಮಾರು ಒಂದು ವರ್ಷದಲ್ಲಿ ನಾವೂ ಚೆನ್ನಾಗಿ ತೆಗೆಯಬಲ್ಲೆವು ಎಂದೆನಿಸುತ್ತದೆ. ಆದರೆ ನಾವು ಎಷ್ಟು ಕೆಟ್ಟದ್ದಾಗಿ ತೆಗೆಯಬಲ್ಲೆವು ಎಂದು ತಿಳಿಯಲು 10 ವರ್ಷ ಬೇಕು!

ಬೆಳಕಿನ ಪರಿಕಲ್ಪನೆ ಕಪ್ಪು ಬಿಳುಪು ಛಾಯಾಗ್ರಹಣದಲ್ಲಿ  ಮತ್ತು ಬಣ್ಣಗಳ ಛಾಯಾಗ್ರಹಣದಲ್ಲಿ ಹೇಗೆ?

ಇಂದು ಬಣ್ಣಗಳ ಛಾಯಾಚಿತ್ರವನ್ನೇ ಕಪ್ಪು ಬಿಳುಪು ಛಾಯಾಚಿತ್ರವನ್ನಾಗಿ ಬದಲಾಯಿಸುತ್ತಾರೆ. ಕೇವಲ ಕಪ್ಪು ಬಿಳುಪು ತೆಗೆಯುವವರಿಲ್ಲ. ಕಪ್ಪು ಬಿಳುಪು ಛಾಯಾಗ್ರಹಣದಲ್ಲಿ ವ್ಯತ್ಯಾಸ ಮತ್ತು  ವಿವರಗಳು ಬಹಳ ಕಡಿಮೆ ಸಿಗುತ್ತದೆ. ಬಣ್ಣದ ಛಾಯಾಗ್ರಹಣದಂತಲ್ಲ. ಒಂದೂ ಹಾರ್ಶ್ ಆಗುತ್ತದೆ ಇಲ್ಲವೇ ಶೇಡ್ಸ್ ಬರುತ್ತದೆ. ಆದ್ದರಿಂದ ಮೊದಲು ಕಪ್ಪು ಬಿಳುಪು ಛಾಯಾಗ್ರಹಣ ಮಾಡುವ ಕೆಲವರು ಮನೆಯಲ್ಲೇ ಛಾಯಾಚಿತ್ರಗಳನ್ನು ಸಂಸ್ಕರಿಸುತ್ತಿದ್ದರು. ಅದು ಅವರಿಗೆ ಬೆಳಕಿನ ಹಿಡಿತ ಸಾಧಿಸುವಲ್ಲಿ ಅನುಕೂಲವಾಗುತ್ತಿತ್ತು.

 

ಮನೆಯಲ್ಲಿ ಫೋತ್ಸಾಹ ಹೇಗಿತ್ತು ? ಈ ಶ್ರೀಮಂತ ಹವ್ಯಾಸಕ್ಕೆ!!!

ಈಗ ಡಿಜಿಟಲ್ ಬಂದ ನಂತರದಲ್ಲಿ ಅಷ್ಟೊಂದು ಖರ್ಚು ಕಡಿಮೆ. ಮೊದಲು ರೀಲ್ ಕೆಮರಾ ಇದ್ದಾಗ ಸ್ವಲ್ಪ ಖರ್ಚು ಇತ್ತು. ಅದರ ಸಲುವಾಗಿಯೇ ನಾನು ಆಗ ಬರವಣಿಗೆಯನ್ನು  ರೂಢಿಮಾಡಿಕೊಂಡಿದ್ದು. ಮೊದಲು ಛಾಯಾಚಿತ್ರದೊಂದಿಗೆ ಕೊಡುವ ಲೇಖನಗಳಿಗೆ ‘ಸುಧಾ’ದಂತಹ ಪತ್ರಿಕೆಗಳಲ್ಲಿ ಒಳ್ಳೆಯ ಬೇಡಿಕೆಯಿತ್ತು. ಲೇಖನಗಳಿಂದ ಬರುವ ಹಣ  ರೀಲ್ ಖರ್ಚಿಗೆ ಸರಿಹೊಂದುತ್ತಿತ್ತು. ಅದಲ್ಲದಿದ್ದರೂ ಮನೆಯಲ್ಲಿ ತೊಂದರೆ ಎನ್ನುವಂತೆ ಎನೂ ಇರಲಿಲ್ಲ. ಮನೆಯವರ ಸಹಕಾರ ಬಹಳ ದೊಡ್ಡದು.  ಅದಿಲ್ಲಿದೆ ಒಬ್ಬನಿಂದ ಇದ್ಯಾವುದೂ ಸಾಧ್ಯವೇ ಇರಲಿಲ್ಲ. ಈಗ ನಾಡಿದ್ದು ನನಗೆ ಒಂದು ಕಾರ್ಯಾಗಾರಕ್ಕೆ ಹೋಗಬೇಕಿದೆ. ಇದರಿಂದ ನನ್ನ ಮನೆ ಕೆಲಸಗಳು ಇನ್ನೊಬ್ಬರ ಮೇಲೆ ಬೀಳುವುದು ಅನಿವಾರ್ಯ. ನನ್ನ ತಂದೆಯವರು ಕೃಷಿ ಕೆಲಸ ಮಾಡಿಕೊಂಡು ಹೋಗುವುದರಿಂದ ನನಗೆ ಬಹಳ ಅನುಕೂಲ.

 

ನಾಗೇಂದ್ರ ಮುತ್ಮುರ್ಡುರವರ ಪತ್ನಿ  ತಮ್ಮ ಕೆಲವು ಅನುಭವಗಳನ್ನು  ನಗುಮೊಗದೊಂದಿಗೆ ನಮ್ಮೊಂದಿಗೆ ಹಂಚಿಕೊಡಿದ್ದು ಹೀಗೆ..............  ಮೊದಲು  ರಿಫ್ಲೆಕ್ಟರ್ ಗಳನ್ನು, ಫ್ಯಾಷ್ಲೈಟ್ ಗಳನ್ನು ತಾಸುಗಟ್ಟಲೇ ಒಂದು ಚೂರೂ ಅಲುಗಾಡಿಸದೇ ಹಿಡಿದುಕೊಳ್ಳಬೇಕಿತ್ತು. ಕೊನೆಗೂ ಅವರಿಗೆ ಬಂದ ಛಾಯಾಚಿತ್ರದಲ್ಲಿ ತೃಪ್ತಿಯಿರುತ್ತಿರಲಿಲ್ಲ. 

ಲಂಬಾಣಿ ಬಟ್ಟೆ ಯನ್ನು ತಂದು, ಅಲಂಕಾರ ಮಾಡಿ ದೀಪ ಹಿಡಿದು ನಿಂತ ಪಲ್ಲವಿಯನ್ನು ತಯಾರು ಮಾಡಲು ಸುಮಾರು ಇಡೀ ದಿನ ಬೇಕಾಯಿತು. ನಂತರ ಆವತ್ತು ಛಾಯಾಚಿತ್ರ ತೆಗೆಯುವಾಗ ಯಾರ ಗಮನಕ್ಕೂ ಬಾರದ್ದು ಮರುದಿನ ಬಂತು. ಎಡಗೈಯಲ್ಲಿ ದೀಪ ಹಿಡಿಯಬೇಕಾದದ್ದು ಬಲಗೈಯಲ್ಲಿ ಆಗಿ ಹೋಗಿತ್ತು. ಅಂದು ಮಾಡಿದ್ದೆಲ್ಲ ವ್ಯರ್ಥವಾಗಿತ್ತು. ಇನ್ನೊಂದು ದಿನ ಮತ್ತೆಲ್ಲ
ಅಲಂಕಾರ ಮಾಡಿ ಇನ್ನೇನು ಛಾಯಾಚಿತ್ರ  ತೆಗೆಯಬೇಕು ಎನ್ನುವಾಗ ದೀಪದ ಎಣ್ಣೆ  ಮೈಮೇಲೆ ಚೆಲ್ಲಿ  ಆವತ್ತೂ ಆಗಲಿಲ್ಲ. ‘ರಾಧೆಗೆ ಕೃಷ್ಣನ ನೆನಪಿನಲ್ಲಿ ಕೊಡ ತೇಲಿ ಹೋಗುತ್ತಿರುವುದು ತಿಳಿಯುತ್ತಿಲ್ಲ’ ಇದನ್ನು ಛಾಯಚಿತ್ರವಾಗಿಸಬೇಕಾಗಿ ಬಂದಾಗ, ನೀರಿನಲ್ಲಿ ತೇಲಿ ಹೋಗುತ್ತಿರುವ ಕೊಡವನ್ನು ಕೋಲಿನಿಂದ ನಿಯಂತ್ರಿಸುವ ಮತ್ತು ಕೋಲನ್ನು (ಫ್ರೇಮ್)  ಚಿತ್ರದೊಳಗೆ ಬರದಂತೆ ನೋಡಿಕೊಳ್ಳುವ ನನ್ನ ಕೆಲಸ ಸುಲಭವಾಗಿರಲಿಲ್ಲ.


ನಾಗೇಂದ್ರ ಮುತ್ಮುರ್ಡುರವರು ಅವರ ಪಿಕ್ಟೋರಿಯಲ್ಗಳು ಹೊಮ್ಮಿಸುವ ಭಾವಗಳ ಜೊತೆಗೆ ಅವುಗಳ ಹಿಂದಿನ ರೋಚಕ ಕತೆ, ಶ್ರಮ, ಇಡೀ ಕುಟುಂಬದ ಪಾಲ್ಗೊಳ್ಳುವಿಕೆ ಇವೆಲ್ಲವುಗಳನ್ನ ತುಂಬಾ ಆತ್ಮೀಯವಾಗಿ ಹಾಸ್ಯಭರಿತ  ಸ್ವಾರಸ್ಯಕರ ಶೈಲಿಯಲ್ಲಿ ನಮ್ಮೊಂದಿಗೆ ಬಿಚ್ಚಿಟ್ಟರು. ಅಗಂತುಕರಾಗಿ ಆಗಮಿಸಿದ ನಮ್ಮೊಂದಿಗೆ ಕೆಲ ಕಾಲದಲ್ಲೇ ಆತ್ಮೀಯರಾಗಿಬಿಟ್ಟರು. ಬರೀ ಅವರ ಛಾಯಾಚಿತ್ರಗಳನ್ನು ನೋಡಿದವರು ಅವಷ್ಟನ್ನೇ ಮೆಚ್ಚಿದರೆ, ನಮಗೆ ಅವುಗಳ ಹಿಂದಿನ ಹಂದರಗಳನ್ನೂ ಅರಿತು ಆಸ್ವಾದಿಸಿ ಅಭಿನಂದಿಸುವ ಸುವರ್ಣಾವಕಾಶ ದೊರೆತಿತ್ತು. ಅವರ ಛಾಯಾಚಿತ್ರಗಳ ಬೆಳಕಿನ ಹಿಂದೆ ಮರೆಯಾಗಿ ಬೆಂಬಲವಾಗಿದ್ದವರಿಗೆಲ್ಲ ಹೃತ್ಪೂರ್ವಕವಾಗಿ ವಂದಿಸಿ, ಅವರ ಪ್ರೀತಿಯ ಆತಿಥ್ಯವನ್ನೂ ಸವಿದು ಬೀಳ್ಕೊಟ್ಟು ಹೊರಟಾಗ  ಮೂರ್ಸಂಜೆ, ಅದು ನಾಗೇಂದ್ರಣ್ಣನವರ ಸ್ಟೂಡಿಯೋ ತೆರೆಯುವ  ಹೊತ್ತು! ಇಷ್ಟೆಲ್ಲ ರೋಚಕ ಕಥಾನಕವಾದಮೇಲೆ ಅವರ ನೆಚ್ಚಿನ ಸ್ಟೂಡಿಯೋ ನೋಡದಿದ್ದರಾದೀತೇ? ಅವರ ಜೊತೆಗೂಡಿದೆವು....ಅವರ ಮನೆಯಿಂದ ಒಂದರ್ಧ ಫರ್ಲಾಂಗಿನಲ್ಲೇ ತಣ್ಣಗೆ ಬಳುಕುತ್ತಾ ನೇಸರದ ಕಿರಣದೊಂದಿಗೆ ಲಾಸ್ಯವಾಡುತ್ತ ಸಾಗಿದರೂ ಸಾಗದೇ ನಿಂತಂತಿದ್ದ ಪುಟ್ಟ ಹೊಳೆ ಅದುವೇ ಅವರ

ಸ್ಟೂಡಿಯೋ... ಆಗ ಕಣ್ತುಂಬಿಕೊಂಡ ಆ ಫ್ರೇಮು ಈಗಲೂ ಮನದಲ್ಲಿ ಹಸಿರಾಗೇ ಇದೆ. ಐದು ಕಿಲೋಮೀಟರ್‍ಗಳ ದೂರ ಅವರ ಮನೆಗೆ ನಡೆದೇ ಹೋಗಿದ್ದ ನಮ್ಮನ್ನ ಚಾರಣ ಪ್ರಿಯರೂ ಆದ ಅವರು ಶ್ಲಾಘಿಸದೇ ಬಿಡಲಿಲ್ಲ. ಜೊತೆಗೆ ಅವರ ಇನ್ನೊಂದು ಪ್ರೀತಿಯ ತಾಣವಾದ ಎತ್ತರದ ಬಿತ್ತಕ್ಕಿ ಗುಡ್ಡಕ್ಕೂ ಕರೆದುಕೊಂಡ್ಹೋಗಿ ಆ ನೈಸರ್ಗಿಕ ಆರ್ಟ್ ಗ್ಯಾಲರಿಯಲ್ಲಿ ಕೂತು ಸಂಜೆಯ ಸವಿಯುಣ್ಣುವಂತೆ ಮಾಡಿದರು. ಸುಮಧುರ ನೆನೆಪುಗಳೊಂದಿಗೆ ‘ಮಿತ್ರ’ ನಿಗೆ ವಿದಾಯ ಹೇಳಿ ನಿಧಾನವಾಗಿ ಮರಳಿ ಹೊರಟೆವು........

     - ಪಿ. ಸತೀಶಕುಮಾರ

  (ರಸಬಳಗದ ಎಲ್ಲಾ ಸದಸ್ಯರ ಪರವಾಗಿ)



 AWARDS AND RECOGNITIONS IN PHOTOGRAPHY :

·             International Gold Medal’ from Photographic Society of America (PSA)-2014 ( For the picture – “SPLASHED JOY “ಚಿಮ್ಮಿದ ಖುಷಿಚಿಲುಮೆ “ ಚಿತ್ರಕ್ಕೆ)

·                    ‘National Gold Medal’ in Alipurduar (West Bengal) Salon of Photography-2014

·                     National  Gold Medal in ‘TEPANTAR’ All India salon-2010, Kolkata.

·                     ‘ SAARTHA  award -2010’ for photography - and felicitation in Bahrain                                       

           by Saartha Foundation, Bahrain.

·     AFIAP (Artist International) International Photography Distinction in 2011 (by International Federation of Photography, Luxembourg-Europe.) and felicitation by ‘Youth photographic Society (YPS) Bengaluru.

·      ‘Over all best Performer Grand award’ in Dr. Gulvadi’s In memoriam All India Photography salon -2014, Shimoga.

·              8 Awards (including Gold Medal) in international Photography Salons (Competitions) of photography                   

·           30+ awards (including 2 Gold Medals, 3 Silver Medals) in All India National level salons of Photography.

·             15 + awards in state level and local photography competitions

·         100+ Photos exhibited in Austria, Taiwan, France, America, Germany, Srilanka, Turkey, Egypt , Bahrain, Croatia, Prague, Bangladesh, Saudi Arabia  Bulgaria, Serbia, Cyprus etc.

·          500+ pictures accepted for exhibition in National & International Photography salons.

·     An interview of 40 minutes duration, on photography –telecasted in “Belagu” programme of Doora Darshana ‘Chandana Kannada vaahini’ in 2014.

·         50 +  articles & around 400  photo features published in leading local and national level periodicals & magazines.

 ******

No comments:

Post a Comment

Environmental Pollution