Friday, 5 August 2022

 2022ರ ನೂತನ ಅವತರಣಿಕೆಯ ಸಂಪಾದಕೀಯ

 ಆತ್ಮೀಯರೆ,

ಕೋವಿಡ್-19 ವೈರಸ್ಸು ಸುಮಾರು ಎರಡು ವರ್ಷಗಳಕಾಲ ಮೆರೆದಿದ್ದು ಎಲ್ಲರಿಗೂ ತಿಳಿದ ಸಂಗತಿ. ಈ ವೈರಸ್ಸಿನ ಧಾಳಿಯು ನಮ್ಮಇಡೀ ಸಮಕಾಲೀನ ವಿಶ್ವದಲ್ಲಿ ವೈವಿಧ್ಯಮಯವಾದ ಪರಿಣಾಮಗಳನ್ನು ಬದುಕಿನ ವಿವಿಧ ಕ್ಷೇತ್ರಗಳಮೇಲೆ ತಂದಿಕ್ಕಿದ್ದು ಈಗಾಗಲೆ ಬಹುಚರ್ಚಿತ ಸಂಗತಿ. ಅಂತೆಯೇ ಶಿಕ್ಷಣ ಕ್ಷೇತ್ರದಮೇಲೆ ಕೂಡ ಒಂದಿಷ್ಟು ಧನಾತ್ಮಕ ಪರಿಣಾಮಗಳಾದರೆ, ಋಣಾತ್ಮಕ ಪರಣಾಮಗಳೆ ಅಧಿಕವಾಗಿ ಬಾಧಿಸಿದ್ದುಕೂಡ ಅರಿವಿಗೆ ಬಂದಿದೆ. ಸಹಜವಾಗಿಯೇ ಈ ಪರಿಣಾಮಗಳು ನಮ್ಮ ‘ಕೆಮ್-ವಿಝ್’ಮೇಲೆ ಕೂಡ ಆದವು.

ವಿದ್ಯಾರ್ಥಿಗಳು ಮನೆಯಲ್ಲೇ ಕೂರುವಂತಾಗಿದ್ದಕ್ಕೆ, ಪಠ್ಯವನ್ನು ಹೇಗೆ ಮುಂದುವರಿಸಬೇಕೆಂಬ ಸಂಶೋಧನೆಯಲ್ಲೇ ಎಲ್ಲರೂ ತೊಡಗಬೇಕಾಯ್ತು, ಆದರೆ ಪಠ್ಯಪೂರಕವಾದ ‘ಕೆಮ್-ವಿಝ್’ನಂತಹ ಅನೇಕ ಚಟುವಟಿಕೆಗಳು ಅನಿವಾರ್ಯವಾಗಿ ಹಿನ್ನಲೆಗೆ ಸೇರುವಂತಾಯ್ತು. ಆದರೆ, ಈ ತೊಂದರೆಯ ನಡುವೆ ಒಂದಿಷ್ಟು ಧನಾತ್ಮಕ ಪ್ರಗತಿಯೂ ಆಗಿತ್ತು ಅನ್ನುವುದು ನಮಗೆ ಅನಂತರ ಅರಿವಿಗೆ ಬಂತು- ಹೊಸದಾದ ಆನ್ ಲೈನ್ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವ ಮನಸ್ಥಿತಿಯಲ್ಲೇ ಇರದಿದ್ದ ಅನೇಕ ಶಿಕ್ಷಕರು ಮತ್ತು ಜನಸಾಮಾನ್ಯರೂ ಕೂಡ, ಅನಿವಾರ್ಯವಾಗಿ ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವಂತಾಯ್ತು. ಆಗಲೇ ನಮ್ಮ ‘ಕೆಮ್-ವಿಝ್’ನ ವೆಬ್(ಬ್ಲಾಗ್) ಅವತರಣಿಕೆಗೆ ಕೂಡ ಅಡಿಪಾಯ ಹಾಕಿದಂತಾಗಿತ್ತು.

ಅಂತಿಮ ವರ್ಷದ ನಮ್ಮ ವಿದ್ಯಾರ್ಥಿಗಳು ಅಂತೂ ತಮ್ಮ ಆರನೇ ಸೆಮೆಸ್ಟರ್ ಗೆ ಸರಿಯಾಗಿ ಕಾಲೇಜಿಗೆ ಬರುವಂತಾದಾಗ ಮತ್ತೆ ‘ಕೆಮ್-ವಿಝ್’ ಚಿಗುರೊಡಯಿತು. ಇದಕ್ಕಾಗಿಯೇ ತೆರೆದ ವ್ಯಾಟ್ಸ್ಯಾಪ್ ತಂಡವು ನಮ್ಮ ಸಂವಹನೆಯನ್ನು ಇನ್ನಷ್ಟು ಸುಗಮಮವಾಗಿ ಸಾಗುವಂತೆ ಮಾಡಿತು.

ಬಹುಷಃ ಜೂನ್ ಮೊದಲವಾರ- ವಿಶ್ವ ಪರಿಸರ ದಿನಾಚರಣೆಯ ಸಮಯ. ಬಕ್ಕೆಮನೆ ಪ್ರತಿಷ್ಠಾನವು ತನ್ನ ‘ಪಾವನ ಪರಿಸರ ಪ್ರಶಸ್ತಿ’ಗಾಗಿ ಅತ್ಯಂತ ಸೂಕ್ತವ್ಯಕ್ತಿಯಾದ ಶ್ರೀ ಬಾಲಚಂದ್ರ ಹೆಗಡೆ ಸಾಯೀಮನೆಯವರನ್ನು ಆರಿಸಿತು. ಅವರ “ಬಿಂಗ್‌ಲಾಂಗ್‌ ಮತ್ತು ಲಂಬನಾಗ್‌” ಕೃತಿಯನ್ನೂ ಬಿಡುಗಡೆಗೊಳಿಸಿತು. ಇದೇ ಸಮಯದಲ್ಲಿ ನಮ್ಮ ‘ಕೆಮ್-ವಿಝ್’ ದ ಪ್ರಮುಖ ಕಾರ್ಯಕ್ರಮವಾದ ಸಂದರ್ಶನ ಕಾರ್ಯಕ್ಕೆ ಸೂಕ್ತ ಸಂಪನ್ಮೂಲ ವ್ಯಕ್ತಿಗಳ ಹುಡುಕಾಟದಲ್ಲಿದ್ದ ನಮಗೆ ಬಾಲಂಚಂದ್ರ ಹೆಗಡೆಯವರು (ಮೊದಲಿಗೇ ಪರಿಚಿತರಾಗಿದ್ದರೂ ಮರೆತಿದ್ದೆವು) ಅತ್ಯಂತ ಸೂಕ್ತ ವ್ಯಕ್ತಿಗಳೆಂದು ತೋರಿ ಅವರನ್ನು ಭೇಟ್ಟಿಯಾಗಲು ನಿರ್ಧರಿಸಿದೆವು. ಅನಂತರದ ಅವರೊಂದಿಗಿನ ಸಂವಹನವೂ ಸುಗಮವಾಗಿ ಸಾಗಿ ಭೇಟ್ಟಿಯ ದಿನವನ್ನು ಜೂನ್ 17ಕ್ಕೆ (ಪಿ.ಯು.ದವರ ಸಿ.ಇ.ಟಿ ಪರೀಕ್ಷೆಯ ಕಾರಣ ಅನಾಯಸ ರಜೆಯೂ ದೊರೆತದ್ದರಿಂದ) ನಿಗಧಿಪಡಿಸಿದ್ದಾಯ್ತು.  ಎಂದಿನ ನಮ್ಮ ಅಲಿಖಿತ ನಿಯದಂತೆ ಅವರ ಮನೆಗೆ ಅಲ್ಲಿಯ ಬಸ್ ನಿಲ್ದಾಣದಿಂದ ನಡೆದೇ ಹೋಗುವುದೆಂದು ತೀರ್ಮಾನಿಸಿದೆವು. ತಟ್ಟೀಕೈ ಸ್ಟಾಪಿನಿಂದ ನಾಲಕ್ಕೂ ಕಿಲೋಮೀಟರ್ ಗೂ ಹೆಚ್ಚಾಗುತ್ತದೆ ವಾಹನ ಮಾಡಿಸಿಕೊಂಡು ಬಂದರೆ ಸೂಕ್ತವೆಂದು ಶ್ರೀ ಬಾಲುರವರು ಕಾಳಜಿಯಿಂದ ಹೇಳಿದರು. ಆದರೂ ಬಸ್ಸಿನಲ್ಲೆ ಪ್ರಯಾಣಿಸಿ ಅನಂತರ ನಮ್ಮ ಸಂಪನ್ಮೂಲ ವ್ಯಕ್ತಿಗಳ ಮನೆ ಎಷ್ಟು ದೂರವಾದರೂ ಸರಿ ನಡೆದೇ ಹೋಗಬೇಕೆಂಬ ನಮ್ಮ ‘ಕೆಮ್-ವಿಝ್’ನ ಸ್ಥಾಪಿತ ನಿಯಮವನ್ನು ಹೇಳಿದಾಗ ಆಶ್ಚರ್ಯದೊಂದಿಗೆ ಸಂತಸಪಟ್ಟರು.

ಆದರೆ ನನಗೇ ಆತಂಕ ಶುರುವಾಯ್ತು; ‘ಕೆಮ್-ವಿಝ್’ ಕುರಿತು ಅಂತಿಮವರ್ಷದ ವಿದ್ಯಾರ್ಥಿಗಳಲ್ಲಿ ಹೇಳಿದಾಗ ವಿಶೇಷವಾದ ಆಸಕ್ತಿ ತೋರಿಬರಲಿಲ್ಲ. ಬೆರಳೆಣಿಕೆಯ ವಿದ್ಯಾರ್ಥಿಗಳು ತಾವಾಗಿಯೆ ಬಂದರೂ, ಅನಂತರ ಕೆಲವರನ್ನು ನಾನೇ ಮಾತನಾಡಿಸಿ ಹೇಳಿದಾಗ  ಸೇರಿಕೊಂಡರು. ಆಮೇಲೆ ಅದೇನಾಯ್ತೊ ತಿಳಿಯದು 20-25 ವಿದ್ಯಾರ್ಥಿಗಳು ಬಂದು ಬಂದು ಸೇರಿಕೊಂಡರು. ಆದರೆ, ಸಂದರ್ಶನಕ್ಕಾಗಿ ಒಟ್ಟೂ ಸುಮಾರು 8-10 ಕಿಲೋಮೀಟರ್ ನಡೆಯಬೇಕಿರುವ ನಿಯಮದ ಪ್ರಸ್ತಾಪವನ್ನು ವ್ಯಾಟ್ಸ್ಯಾಪಿಸಿದ ಅನಂತರ, ಜೊತೆಗೆ ನಾವು ಹೋಗಬೇಕಿರುವ ಜಾಗವು “ಉಂಬಳ” (ಜಿಗಣೆ)ಗಳ ಸ್ವರ್ಗ ಎಂಬ ವಾಸ್ತವವನ್ನು ತೆರೆದಿಟ್ಟಾಗ-  ಅನೇಕ ವಿದ್ಯಾರ್ಥಿಗಳಿಗೆ ತಮಗೆ ಎದುರಾದ ಇತರೆ ಅತ್ಯಂತ ಪ್ರಮುಖವಾದ ಕಾರ್ಯಗಳು ಬೆಳಕಿಗೆ ಬರತೊಡಗಿದವು! ಸಹಜವಾಗಿ, ನನ್ನ ನಿರೀಕ್ಷೆಯಂತೆ ಸಂಖ್ಯೆಯು ಅರ್ಧಕ್ಕೆ ಕುಸಿಯಿತು.

ನೈಜ ಉತ್ಸಾಹದ 13 ಗಟ್ಟಿಗ ವಿದ್ಯಾರ್ಥಿಗಳ ತಂಡದೊಂದಿಗೆ- ಯಾವತ್ತೂ ನನ್ನ ಬೆಂಬಲವಾಗಿ ನಿಲ್ಲುವ- ನಮ್ಮ ವಿಭಾಗದ ಬೆನ್ನೆಲುಬಾದ ‘ಉತ್ಸಾಹಿ ಶಿಕ್ಷಕ ವರ್ಗ’ದ ಎಲ್ಲರೂ ಜೊತೆಗೂಡಿದರು. ನಮ್ಮ ಕಾರ್ಯಯೋಜನೆಯಂತೆ ಶಿರಸಿಯಿಂದ ತಟ್ಟೀಕೈಗೆ ಬಸ್ಸಿನಲ್ಲಿ ತೆರಳಿ, ಅಲ್ಲಿಂದ ಪೈದಲ್ ಚಲಿಸಿ ಬಾಲಚಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ವಿಶೇಷವಾಗಿ ಅಭಿವೃದ್ಧಿಹೊಂದಿದ ಅವರ ಹೂಡ್ಲಮನೆಯ ಶಾಲೆಗೆ ಮೊದಲು ಭೆಟ್ಟಿಯಿತ್ತೆವು. ಅಂದು ನಾವೆಲ್ಲ ಶಾಲೆಯ ವಿದ್ಯಾರ್ಥಿಗಳಾಗಿದ್ದೆವು ಅಲ್ಲಿನ ಮಕ್ಕಳು ನಮಗೆ ಶಿಕ್ಷಕರಾಗಿ ನಾಟಕದಮೂಲಕ ಪರಿಸರದ ಪಾಠಮಾಡಿದರು! ಅದೊಂದು ಅವಿಸ್ಮರಣೀಯ ನವಿರಾದ ಘಟನೆಯಾಗಿ ಎಲ್ಲರ ಮನದಲ್ಲಿ ದಾಖಲೆಯಾಯ್ತು. ಅನಂತರ ಶ್ರೀ ಬಾಲಚಂದ್ರರವರ ಮನೆ, ಮನೆ ಎದುರಿಗಿನ ವಿಶಿಷ್ಟ ಸಸ್ಯಸಂಕುಲಗಳ ಹಿತ್ತಲು, ಬೆಟ್ಟ, ಕಾಡು-ಮೇಡು, ಲ್ಯಾಬು ಎಲ್ಲವನ್ನೂ ಅವರೊಂದಿಗೆ ತಿರುಗಿ ಮಾಹಿತಿಪಡೆದುಕೊಂಡೆವು, ಅವರ ಮಗಳಾದ ವನ್ಯಾಕೂಡ ಜೊತೆಗೂಡಿದ್ದಳು. ಪರಿಸರದ  ವೈವಿಧ್ಯಮಯ ಸಂಗತಿಗಳ ದಾಖಲಾತಿಯ ಸಂಶೋಧನಾ ಸಾಹಸಗಳನ್ನು ಮನಸ್ಸು-ಬುದ್ಧಿಗೆ ತುಂಬಿಕೊಂಡು ಬಂದೆವು. ಸಾಯಿಮನೆಯವರ ಭೇಟ್ಟಯ ಕುರಿತು ನಮ್ಮ ವಿದ್ಯಾರ್ಥಿ ತಂಡದಿಂದ ಗಣೇಶ ಭಾಗ್ವತ್, ಜ್ವಾಲಾ ಎಸ್. ಜಿ ಹಾಗೂ ಸಿಂಧು ಜಿ. ಎಲ್. ಇವರುಗಳು ತಾವು ಕಂಡಂತೆ ಈ ಭೇಟ್ಟಿಯನ್ನು ಬರಹವಾಗಿಸಿದ್ದಾರೆ, ಆದ್ದರಿಂದ ಮತ್ತೆ ಅದನ್ನು ವಿಸ್ತರಿಸುವುದಿಲ್ಲ.

ಆದರೆ, ಈ ಓಡಾಟದಲ್ಲಿ ನೆಚ್ಚಿನ ವಿದ್ಯಾರ್ಥಿಯಾದ ಪರೀಕ್ಷಿತನೊಂದಿಗೆ ಬಸ್ಸಿನಲ್ಲಿ ಕೂತು ಮಾತನಾಡುವಾಗ- ನಮ್ಮ ‘ಕೆಮ್-ವಿಝ್’ ಅನ್ನು ಬ್ಲಾಗ್ ಆಗಿ ಮಾಡೋಣವೆನ್ನುತ್ತಾ ಅದರ ವೈವಿಧ್ಯಮಯ ಸಾಧ್ಯತೆಗಳನ್ನು ವಿವರಿಸಿದ. ಅಷ್ಟರಲ್ಲಾಗಲೆ ನನ್ನ ಗುರುಗಳಾದ ಪ್ರೊ. ಎಂ. ಆರ್. ಎನ್. ರವರ ಬರಹಗಳನ್ನು ಬ್ಲಾಗಿಸುತ್ತಿದ್ದ ನನಗೆ ಆತನಿಂದ ಇನ್ನಷ್ಟು ಹೊಳಹುಗಳು ದೊರೆತಂತಾಯ್ತು. ಜೊತೆಗೆ ಈ ಸಂದರ್ಶನ ಭೆಟ್ಟಿಯ ಅನಂತರ- ಶ್ರೀ ಬಾಲುರವರ ಬಳಿ ಅವರ ಮಗಳಾದ ವನ್ಯಾಳ ಬ್ಲಾಗ್ ವಿಳಾಸಗಳನ್ನು ಪಡೆದು, ಅವಳ ಕೆಲವು ಲೇಖನಗಳನ್ನು ಓದಿದೆ, ಜೊತೆಗೆ ಅವಳ ಬ್ಲಾಗಿಗೆ ಅಮೇರಿಕಾದ ಮಿಶೆಲ್ ಒಬಾಮರವರು ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದೆಲ್ಲ ತಿಳಿದು ಅಭಿಮಾನವೆನಿಸಿತು. ಈ ಎಲ್ಲ ಸಂಗತಿಗಳೂ ನ್ಮಮ ‘ಕೆಮ್-ವಿಝ್’ ಅನ್ನೂ ಬ್ಲಾಗ್ ಆಗಿಸಿ ಅಜರಾಮರವಾಗಿಸುವ ಕನಸು ಬಲಗೊಂಡು, ಅದು ಇಂದು ಸಾಕಾರಗೊಳ್ಳುವ ಹಂತಕ್ಕೆ ಬೆಳೆಯುವಂತಾಗಲು ಸಹಕಾರಿಯಾಗಿದ್ದವು. ಸಾಯೀಮನೆಯವರ ಭೇಟ್ಟಿಯ ಫಲಶ್ರುತಿಗಳಲ್ಲಿ ಇನ್ನೊಂದು ಪ್ರಮುಖವಾದ್ದೆಂದರೆ- ಹಲವಾರು ವಿದೇಶಿ ವಿಶ್ವವಿದ್ಯಾಲಯ ಅಥವಾ ಸಂಶೋಧನಾಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ನಾವೂ ಸಂಶೋಧನೆಗಳಲ್ಲಿ ತೊಡಗಬಹುದಾದ ಅನೇಕ ಸಾಧ್ಯತೆಗಳ ಕುರಿತು ಚರ್ಚಿಸಿ ನಮಗೆ ಪ್ರೇರೇಪಿಸಿದ್ದು.  ಅವರೊಂದಿಗಿನ ನಮ್ಮ ಸಂಪರ್ಕದಿಂದ, ನಮ್ಮ ವಿಭಾಗದ ಅಧ್ಯಾಪಕ ಹಾಗೂ ವಿದ್ಯಾರ್ಥಿವರ್ಗ ಇವೆರಡಕ್ಕೂ ಅನೇಕ ಪ್ರತ್ಯಕ್ಷವಾದ ಮತ್ತು ಪರೋಕ್ಷವಾದ ಪ್ರಯೋಜನಗಳಾಗಿದ್ದು ಮನದಟ್ಟಾಯ್ತು.

ಅನಂತರದ ದಿನಗಳಲ್ಲಿ ವಿದ್ಯಾರ್ಥಿಗಳಾದ ಪರೀಕ್ಷಿತ್, ಭಾಗ್ವತ್, ಜ್ವಾಲಾ ಇವರುಗಳು ವಿವಿಧ ವಿಷಯಗಳ ಕುರಿತು ಬರೆದರು, ಅಕ್ಷಯ, ಪವನ್, ಸ್ನೇಹಾ, ಸಿಂಧು ಇವರುಗಳು ಕೆಮ್-ಬಂಧಕ್ಕೆ ಪ್ರಯತ್ನಿಸಿದರು, ಉಳಿದವರೆಲ್ಲ ‘ಕೆಮ್-ವಿಝ್’ ನ ಬಿಡುಗಡೆ ಕಾರ್ಯಕ್ರಮದ ತಯಾರಿಯಲ್ಲಿ ತಮ್ಮ ಸೃಜನಶೀಲ ಸಹಕಾರ ನೀಡುತ್ತಿದ್ದಾರೆ. ಇವರಜೊತೆಗೆ ಆಸಕ್ತಿಯಿಂದ ತಾವಾಗಿಯೆ ಮುಂದೆಬಂದು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ಮಾಡುತ್ತಿರುವವರು ವೀಣಾ ಮೇಡಮ್ ಅವರು. ಒಟ್ಟಾರೆ ಎಲ್ಲರ ಪೂರ್ಣ ಸಹಕಾರದಿಂದ ‘ಕೆಮ್-ವಿಝ್’ ತನ್ನ ಹೊಸರೂಪದಿಂದ ಬಿಡುಗಡೆಯಾಗುತ್ತಿರುವುದು ಹರ್ಷದಾಯಕ ಸಂಗತಿ.

 

ವಾಡಿಕೆಯಂತೆ, ಇತ್ತೀಚಿನ ವರ್ಷದ ಒಂದು ಸಂಶೋಧನೆಯನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ:

೨೦೨೦ರ ಅಕ್ಟೋಬರ್ ೧೪ರಂದು ಪ್ರತಿಷ್ಠಿತ ‘ನೇಚರ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಒಂದು ಪ್ರಮುಖ ಸಂಶೋಧನೆಯ ಕುರಿತು ಗಮನ ಹರಿಸೋಣ:

ತಮಗೆಲ್ಲಾ ತಿಳಿದಂತೆ ಜಗತ್ತಿನಾದ್ಯಂತ ಅಧಿವಾಹಕಗಳ (ಸೂಪರ್ ಕಂಡಕ್ಟರ್) ಕುರಿತು ಸಾಕಷ್ಟು ಸಂಶೋಧನೆಗಳಾಗುತ್ತಿವೆ. ಅಧಿವಾಕತೆಯು ವಿದ್ಯುನ್ಮಾನ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡುವ ಸಾಧ್ಯತೆಗಳನ್ನು ಊಹಿಸಲಾಗಿದೆ, ಜೊತೆಗೆ ಅಧಿವಾಹಕಗಳ ‘ಮೀಸ್ನರ್-ಪರಿಣಾಮ’ ದಿಂದಾಗಿ ಅವುಗಳನ್ನು ಅಯಸ್ಕಾಂತೀಯ ತೇಲುವಿಕೆ(ಮ್ಯಾಗ್ನೆಟಿಕ್ ಲೆವಿಟೇಷನ್)ಯ ಮುಖಾಂತರ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿ ಸಾಧಿಸುವ ತುಡಿತದಲ್ಲಿ ವಿಜ್ಞಾನಿಗಳಿದ್ದಾರೆ, ಆ ಕುರಿತು ಸಾಕಷ್ಟು ಪ್ರಯೋಗಗಳೂ ನಡೆದಿವೆ. ಆದರೆ ಇವೆಲ್ಲ ಕನಸುಗಳ ಸಾಕಾರಕ್ಕೆ ಇರುವ ಒಂದು ದೊಡ್ಡ ಸವಾಲೆಂದರೆ, ಅಧಿವಾಹಕತೆಯನ್ನು ಪ್ರದರ್ಶಿಸಿಬಲ್ಲ ವಸ್ತುಗಳು ರಂಗಪ್ರವೇಶಿಸುವುದು ಅಂದರೆ ಅಧಿವಾಹಕಗಳಾಗುವುದು ಅವುಗಳ ‘ಕ್ರಾಂತಿ ತಾಪ’ವನ್ನು(ಕ್ರಿಟಿಕಲ್ ಟೆಂಪರೇಚರ್) ದಾಟಿದಮೇಲೆಯೆ, ಈ ‘ಕ್ರಾಂತಿ ತಾಪ’ವು ಬಹುತೇಕ ವಸ್ತುಗಳಿಗೆ ನಿರಪೇಕ್ಷ ಶೂನ್ಯ ತಾಪದ(ಅಬ್ಸೊಲ್ಯೂಟ್ ಝೀರೊ ಕೆಲ್ವಿನ್) ಹತ್ತಿರ ಇವೆ, ಅಂದರೆ ಅತ್ಯಂತ ಶೀತಲಗೊಳಿಸಿದಾಗ ಮಾತ್ರವೆ ಸಾಧ್ಯ! ಸಾಮಾನ್ಯ ಗ್ರಹಿಕೆಯಯಂತೆ ಉಷ್ಣವು ಹೆಚ್ಚಿದಂತೆ ಚಲನಶಕ್ತಿ ಹೆಚ್ಚುವುದಾದರೂ, ಇಲ್ಲಿ ತಾಪ ಕಡಿಮೆಯಾಗುವುದರಿಂದ ಪರಮಾಣುಗಳ ಯಾದೃಚ್ಛಿಕ(ರ‍್ಯಾಂಡಮ್)ಕಂಪನಗಳು ಸ್ಥಗಿತಗೊಂಡು ತನ್ಮೂಲಕ ಇಲೆಕ್ಟಾçನುಗಳ ಚಲನೆಗಿರುವ ರೋಧ(ರೆಸಿಸ್ಟನ್ಸ್) ಕೊನೆಗೊಂಡು ಅಂದರೆ ಶೂನ್ಯವಾಗಿ ಅಧಿವಾಹನೆಯುಂಟಾಗುತ್ತದೆ. ಇಲ್ಲಿರುವ ಸವಾಲು ಅತಿಶೀತಲ (ಕ್ರಯೋಜನಿಕ್) ವ್ಯವಸ್ಥೆಯದ್ದು, ಹಾಗಾಗಿ ಈ ಸಂಶೋಧನೆಯಲ್ಲಿನ ಪ್ರಮುಖ ಸವಾಲೆಂದರೆ ಅಧಿವಾಹಕತೆಯನ್ನು ಕೊಠಡಿಯ ಉಷ್ಣತೆಗೇರಿಸುವುದು. ಇದರಲ್ಲಿ ಸಾಕಷ್ಟು ಪ್ರಗತಿಯಾಗಿ ದ್ರವೀಯ ನೈಟ್ರೋಜನ್‌ನ ತಾಪದವರೆಗೂ ತಲುಪಿಯಾಗಿತ್ತು. ಆದರೀಗ ಅಮೇರಿಕಾದ ರೊಚೆಸ್ಟರ್ ವಿಶ್ವವಿದ್ಯಾಲಯದ ಎಲಿಯಾಟ್ ಸ್ನಿಡರ್ ಹಾಗೂ ರಂಗಾ ಪಿ. ಡಯಾಸ್ ತಂಡದವರು ಅಧಿವಾಹಕತೆಯ ದೊಡ್ಡ ಸವಾಲನ್ನು ಗೆದ್ದು ಅದನ್ನು ೧೫ ಡಿಗ್ರಿ ಸೆಲ್ಷಿಯಸ್‌ಗೆ, ಅಂದರೆ ಕೊಠಡಿ ತಾಪಕ್ಕೇರಿಸಿದ ಸಾಧನೆಯನ್ನು ದಾಖಲಿಸಿದ್ದಾರೆ!

ಹಾಗಂತ ಎಲ್ಲ ಸವಾಲುಗಳೂ ಪರಿಹಾರವಾಗಿಹೋಯ್ತೇ? ತೇಲುವ ರೈಲು ಅಥವಾ ಬಸ್ಸುಗಳಲ್ಲಿ ಶಿರಸಿಯಿಂದ ಬೆಂಗಳೂರಿಗೆ ಸಂಚರಿಸುವ ಅಥವಾ ತೇಲಿಬಿಡುವ ದಿನಗಳು ಬಂದೇ ಬಿಡಬಹುದೇ? ಇಲ್ಲ ಇನ್ನೂ ಆ ಕಾಲ ಬಂದಂತಿಲ್ಲ! ಏಕೆಂದರೆ ವಿಜ್ಞಾನಿಗಳ ತಂಡವು ಈ ಹೊಸ ವಸ್ತುವಿನ ಅಧಿವಾಹಕತೆಯನ್ನು ಅಗಾಧವಾದ ಒತ್ತಡದಲ್ಲಿ ಮಾತ್ರ ಕೊಠಡಿಉಷ್ಣತೆಗೇರಿಸಲು ಸಾಧ್ಯವಾಗಿದೆ! ಸಾಮಾನ್ಯವಾಗಿ ಅತಿಶೀತಲವನ್ನು ಸಾಧಿಸುವುದಕ್ಕಿಂತ ಒತ್ತಡವನ್ನು ಹೆಚ್ಚಿಸುವ ತಂತ್ರಜ್ಞಾನ ಉತ್ತಮವಾಗಿರುವುದಾದರೂ, ಈ ಪ್ರಕರಣದಲ್ಲಿ ಬೇಕಾಗಿರುವ ಅಗಾಧವಾದ ಒತ್ತಡವನ್ನು ಅಂದರೆ ೨೬೭ ಗಿಗಾಪಾಸ್ಕಲ್ (ವಾಯುಮಂಡಲದ ಒತ್ತಡದ ೨.೬ ಮಿಲಿಯನ್‌ನಷ್ಟು) ಸಾಧಿಸುವುದು ಪ್ರಯೋಗಶಾಲೆಯಲ್ಲಿನ ಅಧ್ಯಯನಕ್ಕಾಗಿ ಮಾಡಬಹುದೇ ವಿನಾ ಸಾಮಾನ್ಯ ಬಳಕೆಗೆ ಬರುವಂತೆ ಮಾಡುವುದು ಇಂದಿನ ಪರಿಸ್ಥಿತಿಯಲ್ಲಿ ಅಸಾಧ್ಯವೆಂದೇ ಪರಿಗಣಿತವಾಗಿದೆ! ಒಟ್ಟಿನಲ್ಲಿ, ಅಂತೂ ಈ ತಾಪದ ತಾಪತ್ರಯವನ್ನು ಮೀರುವುದು ಸಾಧ್ಯವಾದರೂ ಒತ್ತಡ ನಿರ್ವಹಣೆಯ ಹೊಸ ಅಡಗತ್ತರಿಯ ಒತ್ತಡದಲ್ಲಿ ವಿಜ್ಞಾನಿಗಳು ಸಿಲುಕಿದ್ದಾರೆನ್ನಬಹುದು! ಆದರೆ ವಿಜ್ಞಾನದ ಇತಿಹಾಸವೇ ಸೂಚಿಸುವಂತೆ ಆಕಸ್ಮಿಕವಾಗಿ (ಸೆರೆಂಡಿಪಿಟಸ್ ಡಿಸ್ಕವರಿ) ಆದ ಸಂಶೋಧನೆಗಳಿಗಿಂತ, ಅನೇಕರ ನಿರಂತರವಾದ ಅಪಾರ ಪರಿಶ್ರಮದಿಂದ ಒಂದೊಂದೇ ಮೈಲಿಗಲ್ಲನ್ನು ದಾಖಲಿಸುತ್ತಾ ಸಾದಿಸಲಾಗಿರುವುದೇ ಹೆಚ್ಚಿನದ್ದು. ಮೊದಲು ಸಾಂಪ್ರದಾಯಿಕವಾದ ಅಧಿವಾಹಕವಾದ ತಾಮ್ರದ ಆಕ್ಸೈಡಿನಿಂದ ತಯಾರಿಸಿದ ಸಿರಾಮಿಕ್ ವಸ್ತುಗಳು ವಾಯುಮಂಡಲದೊತ್ತಡದಲ್ಲೇ ಕೆಲಸ ಮಾಡುವುದಾದರೂ ಅವುಗಳ ತಾಪವನ್ನು ತಗ್ಗಿಸಲೇಬೇಕು. ನಂತರ ಜಲಜನಕದಿಂದ ಪರ್ಯಾಪ್ತವಾದ ಕೋವ್ಯಾಲೆಂಟ್ ವಸ್ತುಗಳು ಅಧಿಕತಾಪ ಮತ್ತು ಒತ್ತಡದಲ್ಲಿ ಅಧಿವಾಹಕವಾಗುವವೆಂದು ಕಂಡುಕೊಳ್ಳಲಾಯ್ತು. ಅಂದರೆ ತಾಪ ಹೆಚ್ಚಿದರೂ ಒತ್ತಡವನ್ನೂ ಹೆಚ್ಚಿಸುವುದರಿಂದ ಈ ವಸ್ತುಗಳಲ್ಲಿ ಲೋಹೀಯ(ಮೆಟಾಲಿಕ್) ಗುಣಗಳು ವೃದ್ಧಿಸಿ ರೋಧ ತಗ್ಗುವುದನ್ನು ಗುರುತಿಸಲಾಯ್ತು. ಜಲಜನಕ ಹಾಗೂ ಗಂಧಕಗಳಿಂದಾದ ಸಂಯುಕ್ತವೊAದು -೭೦ ಡಿಗ್ರಿ ಸೆಲ್ಷಿಯಸ್‌ದಲ್ಲಿ ಅಧಿವಾಹಕವಾಗುವುದನ್ನು ೨೦೧೫ರಲ್ಲಿ ಕಂಡುಹಿಡಿಯಲಾಗಿತ್ತು, ಅಂತೆಯೆ ೨೦೧೮ರಲ್ಲಿ ಅಧಿಕ ಒತ್ತಡದಲ್ಲಿ ಹೈಡ್ರೋಜನ್ ಮತ್ತು ಲ್ಯಾಂತನಮ್‌ಗಳಿಂದಾದ ಸಂಯುಕ್ತವೊಂದು -೧೩ ಡಿಗ್ರಿ ಸೆಲ್ಷಿಯಸ್‌ದಲ್ಲಿ ಅಧಿವಾಹಕವಾದರೆ, ಪ್ರಸ್ತುತ ಕಾರ್ಬನ್, ಹೈಡ್ರೋಜನ್ ಹಾಗೂ ಸಲ್ಫರ್ ಮೂರು ಪರಮಾಣುಗಳಿಂದಾದ ಸಂಯುಕ್ತವು ಅಧಿಕ ಒತ್ತಡದಲ್ಲಾದರೂ ಕೊಠಡಿಯುಷ್ಣತೆಯಲ್ಲಿ ಅಧಿವಾಹಕವಾಗುವುದನ್ನು ಸಂಶೋಧಿಸಿದ್ದಾರೆ. ಆದ್ದರಿಂದ, ಪ್ರಸ್ತುತದ ಸಂಶೋಧನೆಯು ಮುಂದಿನ ಬೆಳವಣಿಗೆಗಳಿಗೆ ಮಾರ್ಗದರ್ಶಿಯಾಗಿ ಇನ್ನೊಂದು ನೂತನ ಆಯಾಮವನ್ನು ತೆರೆದಿದೆಯೆನ್ನಬಹುದು. ಅಧಿವಾಹಕ ತಂತ್ರಜ್ಞಾನವು ಕೈಗೆಟಕುವಂತಾಗುವಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿ ದಾಖಲಾಗುವುದಂತೂ ಸತ್ಯ. ಅಧಿಕ ಒತ್ತಡದಲ್ಲಿ ಉಂಟಾಗುವ ನೂತನ ಸಂಯುಕ್ತದ ಅಣುರಚನೆಯ ಅಧ್ಯಯನವು ಅತ್ಯಂತ ಕ್ಲಿಷ್ಟಕರವಾದದ್ದು, ಆದ್ದರಿಂದ ಎಲಿಯಾಟ್ ಸ್ನಿಡರ್ ತಂಡಕ್ಕೆ ತಾವು ತಯಾರಿಸಿದ ನೂತನ ಸ್ಪಟಿಕ ಸಂಯುಕ್ತದ ಅಣುರಚನೆಯ ಅಧ್ಯಯನವನ್ನು ಪೂರ್ಣವಾಗಿ ನಡೆಸಲಾಗಿಲ್ಲ. ಅವರ ಪ್ರಕಾರ ಈ ಹೈಡ್ರೋಜನ್ ಪರ್ಯಾಪ್ತ ಸಂಯುಕ್ತಗಳ ಅಣುರಚನೆಯನ್ನು ತಿಳಿಯಲಾದರೆ ಹಾಗೂ ಸೂಕ್ತವಾದ ನಾಲ್ಕನೆ ಪರಮಾಣುವೊಂದನ್ನು ಸೇರಿಸುವಂತಾದರೆ ಕೊಠಡಿ ತಾಪದ ಹಾಗೂ ವಾಯುಮಂಡಲದೊತ್ತಡದಲ್ಲೇ ಅಧಿವಾಹಕತೆಯನ್ನು ಕಾಣುವ ಸಾಧ್ಯತೆ ನಿಚ್ಛಳವಾಗಿದೆಯೆಂದು ಅಭಿಪ್ರಾಯ ಪಟ್ಟಿದ್ದಾರೆ. ಈ ನಿಟ್ಟಿನ ಪ್ರಯೋಗಗಳು ಯಶಸ್ವಿಯಾದಲ್ಲಿ ನಮ್ಮ ಬದುಕಿನ ಚಿತ್ರಣಗಳು ಬದಲಾಗಲಿವೆ!

 

ಕೆಮ್-ವಿಝ್’- ರಸಪತ್ರಿಕೆಯ ರಸಾಸ್ವಾದನೆಗೆ ಇನ್ನು ನಮ್ಮ ವಿಭಾದಗ ಎದುರಿಗೆ ಬಂದು ನಿಲ್ಲಬೇಕಾಗಿಲ್ಲ. ತಮ್ಮ ಮೊಬೈಲ್ – ಕಂಪ್ಯೂಟರ್ ಗಳಲ್ಲೇ ಓದಿ ಆಸ್ವಾದಿಸಿ, ಪ್ರತಿಕ್ರಿಯಿಸಲೂಬಹುದಾಗಿದೆ. ಇದಕ್ಕೂ ಮೊದಲು ಬರಹಗಳಿಗೆ ಪ್ರತಿಕ್ರಿಯಿಸುವುದಾದರೆ ವ್ಯಕ್ತಿಗತವಾಗಿ ಭೇಟ್ಟಿಯಾಗಿಯೊ ಅಥವಾ ಕರೆಯಮೂಲಕ ಸಂಪರ್ಕಿಸಬೇಕಾಗಿತ್ತು, ಈಗ ಬ್ಲಾಗಿನಲ್ಲಿ ಪ್ರತೀ ಲೇಖನಕ್ಕೂ ಪ್ರತಿಕ್ರಿಯಿಸಬಹುದಾಗಿದೆ. ಜೊತೆಗೆ, ಇನ್ನು ಬರವಣಿಗೆಯನ್ನೂ ನಿರಂತರವಾಗಿಸಿ ಕೆಮ್-ವಿಝ್ ಅನ್ನು ಸದಾ ಕ್ರಿಯಾಶೀಲವಾಗಿಡಲೂ ಸಾಧ್ಯವಿದೆ. ಬ್ಲಾಗಿನ ಈ ಹೊಸ ಅವತರಣಿಕೆಗೆ ಅಭಿಪ್ರಾಯಹಂಚಿಕೊಳ್ಳಲು ಕೋರಿ ಹಿಂದಿನ ವರ್ಷಗಳ ನಮ್ಮ ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಿದಾಗ ಅನೇಕರು ಕೂಡಲೆ ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ, ಇನ್ನೂ ಹಲವರು ತಮ್ಮ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದಾರೆ. ಅವರೆಲ್ಲರ ಶುಭಹಾರೈಕೆಗಳಿಗೆ ಆಭಾರಿಯಾಗಿದ್ದೇವೆ, ಹಾಗೂ ಮುಂದೆ ಕೂಡ ಎಲ್ಲರ ಸಕ್ರಿಯ ಪ್ರೋತ್ಸಾಹವನ್ನೂ ನಿರೀಕ್ಷಿಸುತ್ತೇವೆ.

-ಪ್ರಧಾನ ಸಂಪಾದಕರು,

ಡಾ. ಗಣೇಶ ಎಸ್. ಹೆಗಡೆ,ಹಂಗಾರಖಂಡ, ಎಂ.ಎಂ.ಸಿ. ಶಿರಸಿ.

No comments:

Post a Comment

Environmental Pollution