Friday 5 August 2022

Teachers' Corner

 ಈ ಅಧ್ಯಾಪಕರ ಹಾಗು ವಿಧ್ಯಾರ್ಥಿಗಳ ಅಂಕಣದಬಗ್ಗೆ ಈ ಅಂಕಣದಲ್ಲೇ ಪರಿಚಯಿಸುತ್ತಿದ್ದೇನೆ. ರಸಾಯನಶಾಸ್ತ್ರದ ಹೊರತಾಗಿ ಅವರವರ ಕಾಲೇಜಾನುಬವಗಳನ್ನ ಆಸಕ್ತಿ, ಕಳಕಳಿ, ವಿಶ್ಲೇಷಣೆ, ವೀಕ್ಷಣೆ, ವಿನೋದ, ವಿಡಂಬನೆಗಳನ್ನ ಸೃಜನಶೀಲವಾಗಿ ಮುಕ್ತವಾಗಿ ಯಾರ ಬಾವನೆಗಳಿಗೂ ಧಕ್ಕೆ ಬರದ ರೀತಿಯಲ್ಲಿ ಅಭಿವ್ಯಕ್ತಿಗೊಳಿಸುವ ಅವಕಾಶವನ್ನ ಈ ಅಂಕಣಗಳಲ್ಲಿ ನೀಡುತ್ತಿದ್ದೇವೆ. ಸೃಜನಶೀಲ ಬರವಣಿಗೆಯನ್ನು ಪೆÇ್ರೀತ್ಸಾಹಿಸುವುದೇ ನಮ್ಮ ಉದ್ದೇಶ.

 

 * ಹಿಂದಿನ ಶೈಕ್ಷಣಿಕ ವರ್ಷದ ಕೊನೆಯ ಹಂತದಲ್ಲಿ ಬೇಸಿಗೆಯ ಒಂದು ಮಟ ಮಟ ಮಧ್ಯಾಹ್ನದ ಸಮಯದಲ್ಲಿ ವಿಭಾಗದ ಗಣಕಯಂತ್ರದ ಮುಂದೆ ಆಂತರಿಕ ಪರೀಕ್ಷಾ ಕೆಲಸದ ನಿಮಿತ್ತ ಬೆವರು ಹರಿಸುತ್ತಾ ಕೆಲಸದಲ್ಲಿ ಮಗ್ನನಾಗಿದ್ದೆ. ಆಗ ಬಿಳಿ ಅಂಗಿ ಲುಂಗಿ ಉಟ್ಟಿದ್ದ ಮಧ್ಯವಯಸ್ಕ ವ್ಯಕ್ತಿಯೊಬ್ಬರು(ರೈತ) ಯಾರನ್ನೋ ಹುಡುಕುತ್ತಾ ಆತಂಕದಿಂದ ನನ್ನೆದುರಿಗೆ ಬಂದ್ರು. ಇಲ್ಲಿಯ ಒಬ್ಬ ವಿದ್ಯಾರ್ಥಿಯ ಪಾಲಕರೆಂದು ತಿಳಿಯಿತು. ಅವರು ತಮ್ಮ ಮಗನ ಶೈಕ್ಷಣಿಕ ಪ್ರಗತಿಯ ಕುರಿತು ವಿಚಾರಿಸಲು ಬಂದಿದ್ದರು. ಆದರೆ ಅವರ ಮೊಗದಲ್ಲಿನ ಆತಂಕ, ನನ್ನಲ್ಲಿ ಮೂಡಿದ ಅನುಮಾನ ಪರಿಶೀಲಿಸಿದಾಗ ಅದು ಅವರ ಮಗನ ಶೈಕ್ಷಣಿಕ ಸಾಧನೆಯಲ್ಲಿ ಬಿಂಬಿತವಾಗಿತ್ತು. ಅವರನ್ನ ಸಾಂತ್ವನಪಡಿಸಿ ಅವರ ಮಗನ ಕಾಳಜಿವಹಿಸುವುದಾಗಿ ತಿಳಿಸಿ ಕಳುಹಿಸಿದೆ.

ಆದರೆ ಅವರ ಮಗನಾದ "ಅರ್ಜುನ"ನ ಪರಾಕ್ರಮಗಳೇನೆಂದು ತಿಳಿಯಲಿಲ್ಲ. ಕರೆಸಿ ಮಾತನಾಡಿಸಿ ಬುದ್ದಿವಾದ ಹೇಳಿ, ಪಾಲಕರ ಆಶಯದ ಬಗ್ಗೆ ಎಚ್ಚರಿಸಿ ಕಳುಹಿಸಿದೆ. ಒಂದು ಒಳ್ಳೆಯ ಕೆಲಸ ಮಾಡಿದ ಧನ್ಯ ಬಾವ ನನ್ನನ್ನಾವರಿಸಿತು. ಆದರೆ ವಿಭಾಗದಲ್ಲಿ ವಿಚಾರಿಸಿದಾಗ ತಿಳಿಯಿತು ಈ ಅರ್ಜುನನನ್ನು ತಿದ್ದಲು ಈಗಾಗಲೆ ದಿಪಾರ್ಟಮೆಂಟಿನ ಭೀಷ್ಮಾದಿ(ಹಿರೇಮಠ್ ಸರ್) ಯುಧಿಷ್ಠಿರರು(ಕಿಣಿ ಸರ್) ಪ್ರಯತ್ನಿಸಿ ಸೋತಿದ್ದಾರೆಂದು!!. ನಾನು ಈ ಅರ್ಜುನನಿಗೆ ಕೃಷ್ಣನಾಗಿ ಬೋಧಿಸಿದೆನೆಂದು ಬೀಗುತ್ತಿದ್ದೆ! ನಿಧಾನವಾಗಿ ನನ್ನ ಮೂರ್ಖತನದ ಅರಿವಾಯ್ತು. ಈ ಜಗತ್ತಿನಲ್ಲಿ ಯಾರು ಯಾರಿಗೆ ಗುರುವೆನ್ನುವುದಕ್ಕಿಂತ ( ಆ ಗುರುತತ್ವವು ) ಪ್ರತಿಯೊಬ್ಬರ ಅಂತರಂಗದಿಂದ ಉದಯವಾದ "ಎಚ್ಚರವೇ" ಆತನ ಗುರು. ಅದಕ್ಕೆ ಪ್ರೇರಣೆ ಯಾರು ಬೇಕಾದರೂ ಆಗಬಹುದು. ಈ ಮಾಸ್ತರರೇ ಆಗಬೇಕೆಂದೇನಿಲ್ಲ. ನಿಮ್ಮ ಸ್ನೇಹಿತರೇ ಆಗಬಹುದು ಅಥವಾ ಬೀದಿ ಭಿಕ್ಷುಕನೇ ಆಗಬಹುದು...... ಒಟ್ಟಿನಲ್ಲಿ ಎಚ್ಚರ ತಪ್ಪದಂತೆ ಆ ಗುರು ತತ್ವ ನಮ್ಮನ್ನೆಲ್ಲಾ ಕಾಪಡಲಿ.

* ಬಿಎಸ್ಸಿಯ ಐಅನೇ ಸೆಮಿಸ್ಟರ್ ನ 'ಅ' ವಿಭಾಗದ ತರಗತಿಯಲ್ಲಿ ಒಮ್ಮೆ ಚಿತ್ರದ ಮೂಲಕ ವಿವರಿಸಬೇಕಾದ ಸಂದರ್ಭ ಬಂತು ಮೂಲತಹ ಚಿತ್ರಬಿಡಿಸುವುದರಲ್ಲಿ ಉತ್ತಮನಲ್ಲದ್ದರಿಂದ ಒಬ್ಬ ವಿದ್ಯಾರ್ಥಿನಿಗೆ ಅವಕಾಶ ನೀಡಿ ಆತ್ಮೀಯ ವಿದ್ಯಾರ್ಥಿಯಾದ ಕರುಣಾಕರನಜೊತೆ ಕೂತೆ, ಕೂಡಲೆ ಆತ "ನೀರಿನಲ್ಲಿ ಗಾಳಿಯಿರುವುದೇ" ಸರ್ ಎಂದು ಕೇಳಿದ. ಅಂತೂ ಕೆಮ್ ಬಾಕ್ಸಿನಲ್ಲಿ ಕೆಮ್ಮದಿದ್ದರೂ ಹೀಗಾದರೂ ಒಂದು ಪ್ರಶ್ನೆ ಬಂತಲ್ಲ ಎಂದು ಸಂತೋಷವಾಯ್ತು. ವಿವರಿಸಿದೆ: ಹೌದು ನೀರಿನಲ್ಲಿ ಗಾಳಿ ಕರಗುತ್ತದೆ! ಹೇಗೆ? ಈ ಪ್ರಶ್ನೆ ನಿಮಗಾಗಿ ಯೋಚಿಸಿ.......

ಗಾಳಿ ನೀರಿನಲ್ಲಿ ಕರಗಿರುಗುವುದರಿಂದಲೇ ನೀರಿನಲ್ಲಿ ಜಲಚರಗಳ ಆವಾಸ ಸಾಧ್ಯ, ಹಾಗೆ ನೀರಿನಲ್ಲಿನ ಆಕ್ಸಿಜನ್ನಿನ ಪ್ರಮಾಣದಿಂದಲೇ ನೀರಿನ ಮಾಲಿನ್ಯ ಮಟ್ಟವನ್ನ ನಿರ್ಧರಿಸಲಾಗುವುದು(ಬಿ.ಓ.ಡಿ ಮತ್ತು ಸಿ.ಓ.ಡಿ) ಅಂದರೆ ನೀರಿನಲ್ಲಿ ಹೆಚ್ಚುಗಾಳಿ(ಆಕ್ಸಿಜನ್) ಕರಗಿದ್ದರೆ ಆ ನೀರು ಶುದ್ಧವಾದದ್ದೆಂದು ಪರಿಗಣಿಸಬಹುದು. ನೀರಿನಲ್ಲಿ ಆಕ್ಸಿಜನ್ ನ ಕರಗುವಿಕೆಯು ನೀರಿನ ತಾಪಕ್ಕೆ ವಿಲೋಮವಾಗಿ ಅವಲಂಬಿತವಾಗಿರುವುದು. ಹಾಗೆಯೇ ನೀರು ಮತ್ತು ಗಾಳಿಯ ಸಂಪರ್ಕ ಹೆಚ್ಚಿದಂತೆಲ್ಲಾ ಈ ಕರಗುವಿಕೆ ಹೆಚ್ಚುವುದು. "ಹರಿಯುವ ನೀರಿಗೆ ಶಾಸ್ತ್ರವಿಲ್ಲ" ಎಂಬುದನ್ನ ಕೇಳಿರಬಹುದು ಅದರರ್ಥ ಹರಿಯುವನೀರು ಹೆಚ್ಚು ಗಾಳಿಯ ಸಂಪರ್ಕಕ್ಕೆ ಬಂದು ಕರಗುವಿಕೆ ಹೆಚ್ಚುವುದು. ಈ ಕರಗಿದ ಆಕ್ಸಿಜನ್ ನೀರಿನಲ್ಲಿರುವ ಉತ್ಕರ್ಷಗೊಳ್ಳಬಲ್ಲ ಸಾವಯವ ಮಾಲಿನ್ಯಕಾರಕಗಳೊಂದಿಗೆ ವರ್ತಿಸಿ ಅವುಗಳನ್ನು ನಿರಪಾಯಕಾರಿ ಸಂಯುಕ್ತ ಅಥವಾ ನೀರು ಮತ್ತು ಇಂಗಾಲದ ಡೈ ಆಕ್ಸೈಡ್ ಆಗಿ ಪರಿವರ್ತಿಸುವುದು.

ಗಂಗಾ ನದಿಯ ಮಾಲಿನ್ಯ ಧಾರಣ ಶಕ್ತಿ ಹೆಚ್ಚಿರುವುದಕ್ಕೆ ವೈಜ್ಞಾನಿಕ ಕಾರಣಗಳು ಇವೇ. ಅಂದರೆ ಹಿಮಾಲಯದಲ್ಲಿ ಹುಟ್ಟುವುದರಿಂದ ಕಡಿಮೆ ಉಷ್ಣತೆಯಲ್ಲಿ ಹೆಚ್ಚು ಆಕ್ಸಿಜನ್ ಕರಗಿರುವುದು ಹಾಗೆ ಪರ್ವತ ಪ್ರದೇಶದಿಂದ ರಭಸವಾಗಿ ಇಳಿಯುವಾಗ ಈ ಕರಗುವಿಕೆ ಹೆಚ್ಚಾಗುವುದು.


* ಪಿ.ಎಂ.ಇ ವಿಭಾಗದ ನನ್ನ ಪ್ರಿಯ ವಿದ್ಯಾರ್ಥಿ ವಸಂತ ಆಗಾಗ ಭೇಟಿ ಮಾಡಿ ಚರ್ಚಿಸುವುದುಂಟು. ಏನಾದರೂ ಒಂದು ಒಳ್ಳೆಯ ಕೆಲಸ ಮಾಡುವ ತುಡಿತ ಇರುವ ಆತನ ಹತ್ತಿರ ನನ್ನ ಒಂದು ಪರಿಸರ ಕುರಿತ ಕಳಕಳಿಯನ್ನ ಹೇಳಿಕೊಂಡೆ. ಈ ಕುರಿತು ತಾವೆಲ್ಲಾ ಆಸಕ್ತ ವಿದ್ಯಾರ್ಥಿಗಳು ಪ್ರಯತ್ನಿಸಬಹುದು.  ವಿವಿಧ ರೀತಿಯ ಪ್ಲಾಸ್ಟಿಕ್ ನಿಂದಾಗಿರುವ ಸಮಸ್ಯೆ ನಮಗೆ ಹೊಸದೇನಲ್ಲ, ಆದರೆ ಸೂಕ್ತ ಮರು ಬಳಕೆ ಕಷ್ಟ ಸಾಧ್ಯವಾಗಿದೆ. ಮರು ಬಳಕೆ ಕಷ್ಟವಾದದ್ದು ಅದರ ತಂತ್ರಜ್ಞಾನಕಿಂತ ಆ ಪ್ಲಾಸ್ತಿಕ್ ತ್ಯಾಜ್ಯದ ಸಂಗ್ರಹ ಮತ್ತು ಸ್ವಚ್ಛ ಮಾಡುವ ಸಮಸ್ಯೆಯಿಂದಾಗಿದೆ. ಈ ಕುರಿತು ತಾವೆಲ್ಲಾ ವಿದ್ಯಾರ್ಥಿಗಳು ಕೆಲಸ ಮಾಡಿದಲ್ಲಿ ನಿಜಕ್ಕೂ ಅದ್ಭುತವಾದದ್ದನ್ನು ಸಾಧಿಸಬಹುದು. ಆಸಕ್ತರು ನನ್ನ ಬಳಿ ವಿಚಾರಿಸಿರಿ.

ಪ್ರಶ್ನೆಗಳನ್ನು ಕೇಳಲು ಮುಕ್ತ ಅವಕಾಶ ಒದಗಿಸಿದಾಗ್ಯೂ ನಿಃಷ್ಕ್ರಿಯವಾಗಿರುವಂಥಹ ಈ ಸಂದರ್ಭದಲ್ಲೂ  ತಮ್ಮ ಮುಗ್ದ ಮನಸ್ಸಿನಿಂದ ಮುಕ್ತವಾಗಿ ಆಗಾಗ ಪ್ರಶ್ನೆಗಳನ್ನು ಕೇಳುತ್ತಾ ನನ್ನನ್ನು ತುಕ್ಕು ಹಿಡಿಯದಂತೆ ಕಾಪಾಡುತ್ತಿರುವ ನನ್ನ ನೆಚ್ಚಿನ ವಿದ್ಯಾರ್ಥಿಗಳಾದ:  ಬಿಎಸ್ಸಿ ಒಂದನೇ ಸೆಮಿಸೆಮಿಸ್ಟರಿನ ಜಯರಾಜ್, ಮೂರನೇ ಸೆಮ್ ನ ಪೂಜಾ ಮತ್ತು ಸಂಪತ್ ಶಾಸ್ತ್ರಿ, ಐದನೇ ಸೆಮ್ ನ ಸುಮನ್ ಹಾಗು ಕರುಣಾಕರ್ ಇವರುಗಳನ್ನ ಆತ್ಮೀಯವಾಗಿ ಅಭಿನಂದಿಸುತ್ತೇನೆ ಹಾಗು ಉಳಿದವರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಪಟ್ಟಿಗೆ ಸೇರ್ಪಡೆಯಾಗಲೆಂದು ಆಶಿಸುತ್ತೇನೆ.


-ಶ್ರೀ ಗಣೇಶ ಎಸ್. ಹೆಗಡೆ, ಹಂಗಾರಖಂಡ


No comments:

Post a Comment

Environmental Pollution