Tuesday, 10 January 2023
Monday, 9 January 2023
"Opportunities in the Creative Fields" -Natesh Hegde
ಕಾರ್ಯಕ್ರಮದ ವರದಿ:
ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಐ ಕ್ಯೂ ಎ ಸಿ ಸಂಯೋಜನೆಯಲ್ಲಿ ರಸಾಯನಶಾಸ್ತ್ರ ವಿಭಾಗದ ವತಿಯಿಂದ "ಸೃಜನಶೀಲ ಕ್ಷೇತ್ರದಲ್ಲಿನ ಅವಕಾಶಗಳು" ಎಂಬ ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಬರಹಗಾರ, ಚಲನಚಿತ್ರ ನಿರ್ದೇಶಕ ಶ್ರೀ ನಟೇಶ್ ಹೆಗಡೆ ಮಾತನಾಡಿ ನಿಮ್ಮದೇ ವಿವೇಚನೆಯಲ್ಲಿ ಬದುಕು ಕಟ್ಟಿಕೊಳ್ಳುವುದು ಬಹುಮುಖ್ಯ ಎನ್ನುವ ಮೂಲಕ ತಮ್ಮ ಜೀವನದ ಆರಂಭಿಕ ಪಯಣವನ್ನು ವಿವರಿಸಿದರು. ಕಥೆಯನ್ನು ರಚಿಸಿದರೆ ಅದನ್ನು ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯವಿರಬೇಕು. ಅದನ್ನು ಓದುವ ಜನರಿಗೆ ಮನಮುಟ್ಟುವಂತಿರಬೇಕು. ಸಿನಿಮಾ, ಕಥೆ ಮುಂತಾದವುಗಳು ಮನುಷ್ಯ ಸಾಧ್ಯತೆಗಳು. ಅವುಗಳನ್ನು ಮನುಷ್ಯ ಮಾಡಲು ಶಕ್ತನಾಗಿದ್ದಾನೆ. ಮನುಷ್ಯನ ಬದುಕು ಕ್ರಿಯಾತ್ಮಕವಾಗಿರಬೇಕು ಎಂದು ಹೇಳಿದರು. ಕಾಲೇಜು ಹಳೆಯ ವಿದ್ಯಾರ್ಥಿಯಾದ ಅವರು ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಂದಿನ ಕಾಲೇಜು ದಿನಗಳ ಕೆಲ ಸಂಗತಿಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜನ ಕನ್ನಡ ಪ್ರಾಧ್ಯಾಪಕರಾದ ಆರ್.ಆರ್ ಹೆಗಡೆಯವರು ಅನುಭವ ಎನ್ನುವುದು ಭಾಷೆ ಮತ್ತು ಚಿತ್ರಗಳ ಮೂಲಕ ಅಭಿವ್ಯಕ್ತವಾಗುತ್ತದೆ. ಅದನ್ನು ನಟೇಶ್ ಹೆಗಡೆಯವರಲ್ಲಿ ಕಾಣಬಹುದು ಎಂದರು.
ಕಾರ್ಯ್ರಮದಲ್ಲಿ ಕಾಲೇಜಿನ ಉಪನ್ಯಾಸಕರು, ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ರಸಾಯನ ಶಾಸ್ತ್ರದ ಮುಖ್ಯಸ್ಥ ಗಣೇಶ್ ಹೆಗಡೆ ಪ್ರಸ್ತಾವಿಸಿದರು. ವಿದ್ಯಾರ್ಥಿ ಸಂಪತ್ ಕುಮಾರ್ ನಿರೂಪಿಸಿ ವಂದಿಸಿದರು.
" ರುಕ್ಕಮ್ಮ - ಲಕ್ಕಮ್ಮ " - ಡಾ. ದಿವ್ಯಾ ಹೆಗಡೆ
ರುಕ್ಕಮ್ಮ - ಲಕ್ಕಮ್ಮ
'ಅಯ್ಯೋ ಅಮ್ಮಾ ಜಿರಳೆ' ಎಂದು ಕೂಗಿಕೊಳ್ಳುವ ಟಪಿಕಲ್ ಹುಡುಗಿ ಅಲ್ಲ ರುಕ್ಕಮ್ಮ. ಕಂಡಿದ್ದೆಲ್ಲ ತನ್ನದಾಗಿಸಿಕೊಳ್ಳುವ ಲಕ್ಕಮ್ಮ. ಅವಳ ಹೆಸರಿನಂತೆ ಅವಳೆಲ್ಲ ಕೆಲಸಗಳಿಗೂ ಸಾಥ್ ನೀಡುವುದು ಲಕ್. ಬಾಲ್ಯದಿಂದಲೂ ಸ್ನೇಹಿತೆಯರಾದ ಲಕ್ಕಮ್ಮನ ಅಸೂಯೆ, ಸೊಕ್ಕಿನ ಸ್ವಭಾವ ರುಕ್ಕಮ್ಮನಿಗೆ ಚಿರಪರಿಚಿತ ಹಾಗೂ ಬದುಕಿನೊಂದಿಗೆ ಹೊಂದಾಣಿಕೆಯಾಗಿತ್ತು.
ಇಬ್ಬರೂ ಬಿ. ಎಸ್ಸಿ ಮುಗಿಸಿ ಎಂ. ಎಸ್ಸಿ ಗೆ ಸೇರಿದ್ದರು. ಸ್ವಂತ ಊರಿನಿಂದ ಬಲುದೂರ ಇದ್ದ ಕಾಲೇಜಿಗೆ ಹಾಸ್ಟೆಲ್ ನಲ್ಲಿ ಉಳಿಯುವುದು ಅವರಿಗೆ ಅನಿವಾರ್ಯವಾಗಿತ್ತು.
ಸುಂದರಿಯಾದ ರುಕ್ಕಮ್ಮನ ಹತ್ತಿರ ಸೀನಿಯರ್ ಅಕ್ಕಂದಿರು ಎಲ್ಲ ಸೀನಿಯರ್ ಹುಡುಗರಿಗೆ ಅಣ್ಣಾ ಎಂದು ಹೇಳಿಸಿದ್ದರು, ಅವನೊಬ್ಬನನ್ನು ಬಿಟ್ಟು..! ಫ್ರೆಶರ್ ಡೇ ಸೆಲೆಬ್ರೇಶನ್ ನಿರೂಪಣೆ ಮಾಡುತ್ತಿದ್ದ ನಚಿಕೇತ್ ಅಣ್ಣಂದಿರ ಸಾಲಿನಿಂದ ಹೇಗೋ ತಪ್ಪಿಹೋಗಿದ್ದ. ಮನದೊಳಗೆ ಇನ್ನೂ ಏನೂ ಕ್ಲಾರಿಟಿ ಇಲ್ಲದಿದ್ದರೂ ಸ್ವಯಂವರದಲ್ಲಿ ಗೆದ್ದ ಖುಷಿ ಅವನಲ್ಲಿ ಸಂಭ್ರಮಿಸುತಿತ್ತು.
ಲೈಬ್ರರಿ, ಲ್ಯಾಬ್ ಅಂತ ರುಕ್ಕಮ್ಮ ಹೋದಲ್ಲೆಲ್ಲ ಅವನು ಅಚಾನಕ್ ಆಗಿ ಸಿಕ್ಕಂತೆ ಸೀನ್ ಕ್ರೀಯೇಟ್ ಮಾಡಿ ಅಂತೂ ನಚಿಕೇತ್ ಅವಳಿಗೆ ನಚ್ಚೀ.... ಆಗಿದ್ದ. ಇದೆಲ್ಲ ದಿಲ್ ಕೀ ದರ್ ಬಾರ್ ಲಕ್ಕಮ್ಮ ನ ತಲೆಯಲ್ಲೂ ಸಣ್ಣ ಗುಮಾನಿಯನ್ನು ಗುಸುಗುಸುಗುಟ್ಟಿಸುತ್ತಿತ್ತು.
ಪಾರ್ಟ ಟೈಮ್ ಕೆಲಸಕ್ಕಾಗಿ ಹಪಿಹಪಿಸುತ್ತಿದ್ದ ರುಕ್ಕಮ್ಮನಿಗೆ ನಚ್ಚಿ ಅವನ ತಂದೆಯ ಫ್ಯಾಕ್ಟರಿ ಅಂಗವಾದ 'ಮಲ್ಟೀಆನಲಿಸಿಸ್ ಟೆಸ್ಟಿಂಗ್ ಲ್ಯಾಬ್' ನಲ್ಲಿ ಸಂಜೆ ೪-೭ರ ವರೆಗೆ ಕೆಲಸ ಹಿಡಿಸಿಕೊಟ್ಟ... ಇದನ್ನು ತಿಳಿದ ಲಕ್ಕಮ್ಮ ಹಠಮಾಡಿ ಅವಳೂ ಅಲ್ಲಿಯೇ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊಂಡಳು.
ಅಂತಿಮ ಪರೀಕ್ಷೆಗೆ ಇನ್ನು ಒಂದೇ ತಿಂಗಳು. ಆದರೆ...... ಲಕ್ಕಮ್ಮ ಐ. ಸಿ. ಯು. ಹಾಸಿಗೆಯ ಮೇಲೆ ಜೀವಂತ ಹೆಣವಾಗಿ ಮಲಗಿದ್ದಾಳೆ, ತನ್ನೆಲ್ಲಾ ಸೊಕ್ಕನ್ನು ಮೂಗಿಗೆ ಸಿಕ್ಕಿಸಿದ ನಳಿಕೆಯಲ್ಲಿ ಹೊರಹಾಕುತ್ತಾ! ಕೌಂಟರ್ ಬಳಿ ಹಾಸ್ಟೆಲ್ ರೂಮ್ ಮೇಟ್ ಜೊತೆ ಅಳುತ್ತ ಕುಳಿತಿದ್ದಾಳೆ ರುಕ್ಕಮ್ಮ..
ಉಳಿದ ಹಾಸ್ಟೆಲೈಟ್ಸ ಹಾಸ್ಟೆಲ್ ಊಟಕ್ಕೆ ಬೈಯುತ್ತಾ, ಮೆಸ್ ಅಜ್ಜಿ ಗೆ ಶಾಪ ಹಾಕುತ್ತಾ ಕುಳಿತಿದ್ದಾರೆ.
ಬೆಳಗ್ಗೆ ೩ ಗಂಟೆ ಯಿಂದ ಅದೇ ಬೆಡ್ ಮೇಲೆ ಮಲಗಿದ್ದ ಲಕ್ಕಮ್ಮನ ಲಕ್ ನಿಜವಾಗಿಯೂ ಬ್ಯಾಡ್ಲಕ್ ಆಗಿತ್ತು. ಹಿಂದಿನ ದಿನದಿಂದ ತಿಂದಿದ್ದೆಲ್ಲ ಹಾಗೆ ವಾಪಸ್ ಬರುತ್ತತ್ತು. ಓಡಾಡಲೂ ಆಗದಷ್ಟು ಸೀರಿಯಸ್ ಆಗಿ ಈಗ ಐಸಿಯು ಸೇರಿದಳು. ಕೈ-ಕಾಲು ಮುಖದ ಚರ್ಮದ ಬಣ್ಣವೇ ಬದಲಾಗಿದೆ. ರಕ್ತವು ನಿಧಾನಿಸದೆ ತನ್ನ ಬಣ್ಣ ಬದಲಿಸಿದೆ - ಕೆಂಪಿನಿಂದ ಕಂದು!.I
ಎಲ್ಲ ಮರೆತು ಮಲಗಿದ್ದ ಲಕ್ಕಮ್ಮನನ್ನು ನೋಡಿ ಮರುಕಪಡುತ್ತಿರುವ ರುಕ್ಕಮ್ಮನಿಗೆ ಉಳಿದ ಹಾಸ್ಟೆಲ್ ಗೆಳತಿಯರೆರಲ್ಲರೂ ತನ್ನೊಂದಿಗೆ ಇರುವುದನ್ನು ನೋಡಿ ಏನೋ ಸಮಾಧಾನ ಮನಸ್ಸಿಗೆ ಆವರಿಸುತ್ತಿರುವಾಗಲೇ ಒಂದೇ ಕ್ಷಣಕ್ಕೆ ಇದು ನಿಜವಾಗಲೂ ಮೆಸ್ ಊಟದ ಪರಿಣಾಮವೇ ಎಂಬ ಗುಮಾನಿ ಬಂತು.... ಹಾಗಿದ್ದರೆ ಅದೇ ಮೆಸ್ ನಲ್ಲಿ ಉಂಡ ನಾವೆಲ್ಲರೂ ಆರಾಮಾಗಿಯೇ ಇದ್ದೇವೆ ಎಂಬ ಚಿಂತನೆಗೆ ಬಿದ್ದಳು.....
ವಿಷಪೂರಿತ ಆಹಾರ ಸೇವನೆಯ ಇಷ್ಟು ಗಂಭೀರ ಪರಿಸ್ಥಿತಿ ಅಪರೂಪ. ಯಾವ ಔಷಧಿಯೂ ತಾಗುತ್ತಿಲ್ಲ. ವೈದ್ಯರೂ ಕೂಡ ಸ್ವಲ್ಪ ಕಂಗೆಟ್ಟು ಇನ್ನು 24 ತಾಸಿನೊಳಗೆ ಲಕ್ಕಮ್ಮನ ದೇಹ ಪ್ರತಿಕ್ರಿಯಿಸದಿದ್ದಲ್ಲಿ.... ಎಂದಷ್ಟೇ ಹೇಳಿ ಹೋದರು.
ತಮ್ಮ ಬಾಲ್ಯದ ದಿನದಿಂದ ಹಿಡಿದು ಎಂ. ಎಸ್ಸಿ ದಿನವನ್ನೂ ಮೆಲಕು ಹಾಕುತ್ತ ಕುಳಿತ ರುಕ್ಕಮ್ಮ ಪಾರ್ಟ್ ಟೈಮ್ ಟೆಸ್ಟಿಂಗ್ ಲ್ಯಾಬ್ ಕೂಡ ನೆನೆಸಿಕೊಂಡಳು.. ತಕ್ಷಣವೇ ಲ್ಯಾಬ್ ನ ಡಸ್ಟ ಬಿನ್ ಲ್ಲಿ ಅಡಗಿ ಕುಳಿತ ಆರ. ಬಿ ಫ್ಲಾಸ್ಕ್ ನ ಒಡೆದ ಗಾಜಿನ ತುಂಡುಗಳು ಕಣ್ಮುಂದೆ ಬಂದವು.. ಹೌದು.. ೨ ದಿನಗಳ ಹಿಂದೆ ಊಟವೂ ಮಾಡದೆ ನನಗಿಂತ ಮುಂಚೆ ಲ್ಯಾಬ್ ಗೆ ಬಂದಿದ್ದಳು.. ನಾ ಬರುವ ಸಮಯದಲ್ಲಿ ನನ್ನ ಕಂಡು ದಡಬಡಾಯಿಸಿ ಬರಿಗೈಲ್ಲೆ ಟೇಬಲ್ ಒರೆಸುತ್ತಿದ್ದಳು. ಆ ಒರೆಸಿದ ಕೈಗಳ ಮುಖಾಂತರವೆ ಅವಳ ಹೊಟ್ಟೆ ಸೇರಿದೆ ಆಟತೋರಿಸುತ್ತಿದೆ. ರುಕ್ಕಮ್ಮನಿಗೆ ಇದೆಲ್ಲಾ ನೆನಪಾಗಿ ಬಹುಶ: ಇದು ಕೆಮಿಕಲ್ ಪಾಯ್ಸನಿಂಗ್ ಇರಬಹುದೇ ಎಂದು ಸಂಶಯ ಬಂತು. ವೈದ್ಯರ ಬಳಿ ಇದನ್ನು ವಿವರಿಸಿದಾಗ ಅದು ಯಾವ ರಾಸಯನಿಕ ಎಂದು ಗೊತ್ತಾದರೆ ಮಾತ್ರ ಸೂಕ್ತ ಚಿಕಿತ್ಸೆ ಸಾಧ್ಯ ಎಂದರು. ಅದೇ ಸಮಯಕ್ಕೆ ರುಕ್ಕಮ್ಮ ನ ಮೊಬೈಲ್ ಗೆ ಕರೆ ಬಂದು ' ಲಕ್ಕಮ್ಮ ಕಾಲ್ ರಿಸೀವ್ ಮಾಡ್ತಾ ಇಲ್ಲ, ನಿನ್ನೆ ಯಿಂದ ಸ್ವಿಚ್ ಆಫ್ ಅಂತ ಬರ್ತಿದೆ. ನೀವು ಅವ್ರ ಕ್ಲೋಸ್ ಫ್ರೆಂಡ್ ಅಂತ ಗೊತ್ತಾಯ್ತು, ಸ್ವಲ್ಪ ಅವ್ರಿಗೆ ಮೊಬೈಲ್ ಕೊಡ್ತೀರಾ' ಅಂತ ಕೇಳಿದಾಗ.... 'ನೀವು ಯಾರು, ಏನಾಗಬೇಕಿತ್ತು, ಅವಳು ಈಗ ಮಾತಾಡುವ ಪರಿಸ್ಥಿತಿಯಲ್ಲಿ ಇಲ್ಲ' ಅಂದಳು.. ಅದು ಸ್ವಲ್ಪ ಕಾನ್ಫಿಡೆನ್ಶಿಯಲ್, ಅವಳಿಗೆ ಒಂದು ಸಾಲ್ವೆಂಟ್ ಡಿಸ್ಟಿಲೇಶನ್ ಗೆ ಕೊಟ್ಟಿದ್ದಾಗಿತ್ತು, ಅರ್ಜೆಂಟ್ ಬೇಕಿತ್ತು' ಅಂದಳು..
ಈಗ ರುಕ್ಕಮ್ಮ ನಿಗೆ ಎಲ್ಲವೂ ಅರ್ಥವಾಗಿ ಹೋಗಿತ್ತು. ಈಥರ ಕದಮುಚ್ಚಿ ಕೆಲಸ ಮಾಡಿಕೊಟ್ಟರೆ ಒಂದು ಲೀಟರ್ ಗೆ ಒಂದು ಸಾವಿರ ಸಿಗುತ್ತಿತ್ತು. ಇಂತಹ ಆಫರ್ ರುಕ್ಕಮ್ಮ ನಿಗೂ ಬಂದಿತ್ತು. ಅವಳು ನಯವಾಗಿ ನಿರಾಕರಿಸಿ ನಿರತ್ತಾಗಿ ಕೆಲಸ ಮಾಡುತ್ತಿದ್ದಳು. ಲಕ್ಕಮ್ಮನ ಲಕ್ ಕೈ ಕೊಟ್ಟಿದ್ದು ಇದೇ ಕೆಮಿಕಲ್ ಅಂದುಕೊಂಡಳು. ತಟಕ್ಕನೆ 'ಅದು ಯಾವ ಸಾಲ್ವೆಂಟ್' ಎಂದು ಕೇಳಿ ಉತ್ತರಕ್ಕೆ ಕಾತುರದಿಂದ ಕಾದಳು. ಏಕೆಂದರೆ ಆದು ಯಾವುದು ಎಂದು ಗೊತ್ತಾದರೆ ಮಾತ್ರ ಲಕ್ಕಮ್ಮ ಬದುಕಲು ಸಾಧ್ಯ!. ಅಲ್ಲಿಂದ ಬಂದ ಉತ್ತರ ' ಆನಿಲಿನ್ '. ನಿಮಗೆ ಮತ್ತೆ ಕಾಲ್ ಮಾಡುತ್ತೇನೆ ಅಂದವಳು ಗೂಗಲ್ ನಲ್ಲಿ ಆನಿಲಿನ್ ಆಂಟಿಡೋಟ್ ಹುಡುಕಿ ವೈದ್ಯರ ಬಳಿ ಓಡಿಬಂದು ಎಲ್ಲ ತಿಳಿಸಿದಳು...
ಆದರೆ ಈ ಆಂಟಿಡೋಟ್ ಆರು ಗಂಟೆಯೊಳಗೆ ಆವಳ ದೇಹ ಸೇರಬೇಕು. ಪರಿಚಯವಿರುವ ಎಲ್ಲ ಆಸ್ಪತ್ರೆಯಲ್ಲಿ ವಿಚಾರಿಸಿ ಕೊನೆಗೂ ಅಲ್ಲಿಂದ ಎರಡು ತಾಸುಪ್ರಯಾಣದ ದೂರದ ಒಂದು ಮೆಡಿಕಲ್ ಶಾಪ್ ನಲ್ಲಿ ಲಭ್ಯವಿರುವುದನ್ನು ತಿಳಿದು, ಅಂತೂ ತರಿಸಿಯಾಯಿತು. ಆನಿಲಿನ್ ದೇಹ ಸೇರಿದರೆ ಮೆಟ್ಹಿಮೊಗ್ಲೊಬಿನಿಯಾ ಹಾಗೂ ಹೀಮೋಲೈಸಿಸ್ ಆಗುತ್ತದೆ. ಇದರಿಂದ ರಕ್ತ ಹಾಳಾಗಿ ಅದು ಕಂದುಬಣ್ಣಕ್ಕೆ ತಿರುಗುತ್ತದೆ.
ಮೆಟ್ಹಿಮೊಗ್ಲೊಬಿನ್ ಪ್ರಮಾಣ 15-30%ಆದಾಗ ಚರ್ಮದ ಬಣ್ಣ ನೀಲಿಯಾಗುತ್ತದೆ. ಕೊನೆಯಲ್ಲಿ ಹೀಮೋಲೈಸಿಸ್ ಆಗಿ ಸಾಯುವ ಸಾಧ್ಯತೆ ಇದೆ.
ಕೊನೆಗೂ ' ಮಿಥೈಲೀನ್ ಬ್ಲೂ ' ಆಂಟಿಡೋಟ್ ಲಕ್ಕಮ್ಮ ನ ದೇಹ ಸೇರಿತು. ಮರುದಿನ ಸಂಜೆಯ ವೇಳೆಗೆ ಲಕ್ಕಮ್ಮ ಕಣ್ಬಟ್ಟು ನೋಡಿ, 'ನೀ... ರು' ಅಂದಳು.
ಎಂ. ಎಸ್ಸಿ ಪರೀಕ್ಷೆ ಮುಗಿಸಿ ರುಕ್ಕಮ್ಮ - ಲಕ್ಕಮ್ಮ ಆಗಿದ್ದವರು ಜೀವದ ಗೆಳತಿಯರಾಗಿ ರುಕ್ಮಿಣಿ - ಲಕ್ಷ್ಮಿ ಆಗಿ ಊರಿಗೆ ಬಂದರು.
- ಡಾ. ದಿವ್ಯಾ ಹೆಗಡೆ
" ರಸ ಬಳಗದ ತಿರುಗಾಟ" - -ಡಾ. ದಿವ್ಯಾ ಹೆಗಡೆ
ರಸ ಬಳಗದ ತಿರುಗಾಟ
ರಸಋಷಿಗಳು ಮಂಡಿಸಿದ ರಾಸಾಯನಿಕ ಲೌಹಿಕ ಬಂಧ
ರಸಬಳಗದವರ ಓಡಾಡಿಸಿ ಬೆಸೆಯಿತು ಹೊಸ ಲೌಕಿಕ ಬಂಧ
ಲ್ಯಾಬ್ ಲ್ಲಿ ಆಮ್ಲ ಪ್ರತ್ಯಾಮ್ಲಗಳ ದಿನದ ಆಟ
ತಟ್ಟಿ ಕೈ ಬೀಸಿ ಕರೆಯುತ್ತಿತ್ತು ರಕ್ತದ ಲೀಚಾಟ
ಗಿಡಮರಗಳೇ ಸಂಶೋಧಕರಾದ ಆ ಕಾಡಿಗೆ ಕಾಡೇ ಪ್ರಯೋಗಶಾಲೆ
ಪುಟಿ(ವ) ವಿಜ್ಞಾನಿಗಳ ಹಿಂಡನ್ನು ಹುಟ್ಟಿಸಿದ ಆ ಕನ್ನಡ ಶಾಲೆ
ರಸಬಳಗದ ರಸನಿಮಿಷ ಗಳ ಕಳೆದೆವು ಪ್ರಕೃತಿಯ ಶಿಶುವಾಗಿ
ಎಲ್ಲ ಮರೆತು ಮಡಿಲಲ್ಲಿ ಗಿರಕಿ ಹೊಡೆದೆವು ಸ್ವಚ್ಛಂದವಾಗಿ.
-ಡಾ. ದಿವ್ಯಾ ಹೆಗಡೆ
-
Education Extension Experimentation (EEE) is a unique activity conducted by our student group of B.Sc. III semester (2023-24). Here is a sa...
-
ರುಕ್ಕಮ್ಮ - ಲಕ್ಕಮ್ಮ 'ಅಯ್ಯೋ ಅಮ್ಮಾ ಜಿರಳೆ' ಎಂದು ಕೂಗಿಕೊಳ್ಳುವ ಟಪಿಕಲ್ ಹುಡುಗಿ ಅಲ್ಲ ರುಕ್ಕಮ್ಮ. ಕಂಡಿದ್ದೆಲ್ಲ ತನ್ನದಾಗಿಸಿಕೊಳ್ಳುವ ಲಕ್ಕಮ್ಮ. ಅವಳ ಹೆ...
-
"ಪ್ರಶಿಕ್ಷಣ ಪ್ರಸರಣ ಪ್ರಯೋಗ" ಕಾರ್ಯಕ್ರಮದ ಮಾಹಿತಿ ಕಾರ್ಯಾಗಾರ 03-01-2023